ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಶಿವರಾಜ ತಂಗಡಗಿಗೆ ಮತ್ತೆ ಹಿನ್ನಡೆ

ಗಂಗಾವತಿ: ಕಂದಾಯ ಅಧಿಕಾರಿ ಪರ ಕೆಎಟಿ ತೀರ್ಪು
Last Updated 17 ಜುಲೈ 2013, 9:00 IST
ಅಕ್ಷರ ಗಾತ್ರ

ಗಂಗಾವತಿ: ಬೆಂಬಲಿಗರ ಹಿತಾಸಕ್ತಿಗಾಗಿ ಅಧಿಕಾರಿಗಳ ವರ್ಗಾವಣೆ ಜಿದ್ದಿಗೆ ಬಿದ್ದ ಆರೋಪ ಎದುರಿಸುತ್ತಿರುವ ಸಚಿವ ಶಿವರಾಜ ತಂಗಡಗಿ ಅವರಿಗೆ ಇದೀಗ ಮರಳಿ ಕಂದಾಯ ನಿರೀಕ್ಷಕ ಅಧಿಕಾರಿಯ ವರ್ಗಾವಣೆಯ ಪ್ರಕರಣದಲ್ಲಿ ಕೆಎಟಿ ಆದೇಶ ಹಿನ್ನಡೆಯನ್ನುಂಟು ಮಾಡಿದೆ.

ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಾವಣೆಗೊಂಡ ಬೆನ್ನಲ್ಲೆ, ತಾಲ್ಲೂಕಿನ ಮರಳಿ ಹೋಬಳಿಯ ಕಂದಾಯ ನಿರೀಕ್ಷಕ ಹನುಮಂತಪ್ಪ ಅವರನ್ನು ತಂಗಡಗಿ ಅವರ ಶಿಫಾರಸಿನ ಮೇರೆಗೆ ವರ್ಗಾವಣೆ ಮಾಡಲಾಗಿತ್ತು.

ಇದು ವಿವಾದಕ್ಕೂ ಕಾರಣವಾಗಿತ್ತು. ತೆರವಾದ ಸ್ಥಾನಕ್ಕೆ ರಾಚಯ್ಯ ಶಶಿಮಠ ಎಂಬುವವರನ್ನು ನಿಯೋಜಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಕೆಲ ರೈತರು ವಕೀಲರ ಮೂಲಕ ಕರ್ನಾಟಕ ಆಡಳಿತಾತ್ಮಕ ಮಂಡಳಿಯ (ಕೆಎಟಿ)ಮೊರೆ ಹೋಗಿದ್ದರು.

ಕೆಎಟಿಯು ಮಂಗಳವಾರ, ಮರಳಿ ಕಂದಾಯ ನಿರೀಕ್ಷಕರ ಪರ ತೀರ್ಪು ಪ್ರಕಟಿಸಿದ್ದು, ಜು.14ರಿಂದ 90 ದಿನಗಳ ಕಾಲ ಅಂದರೆ ಅಕ್ಟೋಬರ್ 14ರವರೆಗೆ ಅಧಿಕಾರಿಯ ವರ್ಗಾವಣೆ ಮಾಡದಂತೆ ನಿರ್ದೇಶನ ನೀಡಿ ಆದೇಶ ಪ್ರಕಟಿಸಿದೆ ಎಂದು `ಪ್ರಜಾವಾಣಿ'ಗೆ ಅಧಿಕೃತ ಮೂಲಗಳು ದೃಢಪಡಿಸಿವೆ.

ವರ್ಗಾವಣೆಗೆ ಕಾರಣ: ಸಚಿವರ ಬೆಂಬಲಿಗ ಅಮರೇಶಪ್ಪ ಎಂಬುವವರು ಗೋನಾಳ ಗ್ರಾಮದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೂಲಿಕಾರರು ಪ್ರತಿಭಟನೆ ನಡೆಸಿದ್ದರು.

ಇದಕ್ಕೆ ಸ್ಪಂದಿಸಿದ ಆಗಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಒತ್ತುವರಿಯಾದ ಜಮೀನು ಸರ್ವೇಗೆ ಕಂದಾಯ ಇಲಾಖೆಗೆ ಸೂಚಿಸಿದ್ದರು. ಮರಳಿ ಕಂದಾಯ ನಿರೀಕ್ಷಕ ಹನುಮಂತಪ್ಪ ಸರ್ವೇ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

ಆದರೆ ಸಚಿವರ ಬೆಂಬಲಿಗರು ತಮ್ಮ ಪರ ವರದಿ ನೀಡುವಂತೆ ಒತ್ತಡ ಹೇರಿದ್ದರು. ಅದನ್ನು ನಿರಾಕರಿಸಿದ್ದರಿಂದ ಅಧಿಕಾರಿ ವರ್ಗಾವಣೆಗೆ ಕಳೆದ 2012ರ ಆಗಸ್ಟ್ 20ರಂದು ಶಿಫಾರಸು ಮಾಡಲಾಗಿತ್ತು.

ಎರಡನೇ ತೀರ್ಪು: ವರ್ಗಾವಣೆ ಪ್ರಶ್ನಿಸಿ ಕಂದಾಯ ಅಧಿಕಾರಿ ಹನುಮಂತಪ್ಪ ಮೊದಲ ಬಾರಿಗೆ 2012ರ ಆಗಸ್ಟ್25ರಂದು  ಕೆಎಟಿಯ ಮೊರೆ ಹೋಗಿದ್ದರು. ನಾಲ್ಕು ತಿಂಗಳವರೆಗೆ ಅಧಿಕಾರಿಯನ್ನು ವರ್ಗಾಯಿಸಬಾರದು ಎಂದು ಅದೇಶಿಸಿ ಕೆಎಟಿ, 2012ರ ಸೆಪ್ಟೆಂಬರ್04 ರಂದು ಆದೇಶ ನೀಡಿತ್ತು. 

ಜು.3ರಂದು ಮತ್ತೆ ಅಧಿಕಾರಿಯ ವರ್ಗಾವಣೆ ಮಾಡಿ ಪ್ರಭಾರಿ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.  ರೈತರು ಕೆಎಟಿಗೆ ಮೊರೆ ಹೋಗಿದ್ದರಿಂದ ಮತ್ತೆ 3 ತಿಂಗಳ ಕಾಲ ಅದೇ ಸ್ಥಾನದಲ್ಲಿ ಮುಂದುವರೆಯುಂತೆ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT