ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಜಲ': ನೆಪಕ್ಕೆ ಸಂಪರ್ಕ, ಬಾರದ ನೀರು

Last Updated 5 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: `ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ನೀರಿನ ಸಂಪರ್ಕ ಪಡೆದುಕೊಳ್ಳಲು ಜನರು ಮುಂದಾಗುತ್ತಿಲ್ಲ ಎಂದು ಜಲಮಂಡಳಿ ನೆಪ ಹೇಳುತ್ತಿದೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ. ಈ ಯೋಜನೆಯಡಿ ಮನೆಗಳಿಗೆ ನೀರಿನ ಸಂಪರ್ಕ ಮಾತ್ರ ನೀಡಲಾಗಿದೆ. ನೀರು ಬರುತ್ತಿಲ್ಲ'.
-ಇದು ದಾಸರಹಳ್ಳಿಯ ಕಮ್ಮಗೊಂಡಹಳ್ಳಿಯ (ವಾರ್ಡ್ ಸಂಖ್ಯೆ-12) ಸುಮಾರು 20 ಕುಟುಂಬಗಳ ಆರೋಪ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 7 ನಗರಸಭೆ ಹಾಗೂ ಒಂದು ಪುರಸಭೆಯ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ಯೋಜನೆಯಡಿ ಜಲಮಂಡಳಿ ನೀರಿನ ಸಂಪರ್ಕ ನೀಡುತ್ತಿದೆ. `ಸಜಲ' ಅರ್ಜಿ ವಿತರಣೆ ವ್ಯವಸ್ಥೆ ಆರಂಭದಿಂದಲೂ ಗೊಂದಲದ ಗೂಡಾಗಿತ್ತು. ಜಲಮಂಡಳಿ ಈ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡದೆ ಜನರ ಮೇಲೆ ಆರೋಪ ಮಾಡುತ್ತಿದೆ ಎಂದು ಇಲ್ಲಿನ ನಿವಾಸಿಗಳು ಕಿಡಿಕಾರಿದ್ದಾರೆ.

`ಕುಡಿಯುವ ನೀರಿನ ಸಂಪರ್ಕ ಪಡೆಯಲು 8 ವರ್ಷಗಳ ಹಿಂದೆ ಜಲಮಂಡಳಿಗೆ ರೂ.10,000 ಪಾವತಿಸಿದ್ದೆವು. 24 ಗಂಟೆಯೂ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿ ಒಂದೂವರೆ ತಿಂಗಳ ಹಿಂದೆ ರೂ.2,720 ಶುಲ್ಕ ಕಟ್ಟಿಸಿಕೊಂಡರು. ತಿಂಗಳ ಹಿಂದೆ ನೀರಿನ ಸಂಪರ್ಕ ನೀಡಿದರು. ಆದರೆ, ಈವರೆಗೂ ಹನಿ ನೀರು ಬಂದಿಲ್ಲ' ಎಂದು ಇಲ್ಲಿನ ನಿವಾಸಿ ಡಿ.ಪಿ.ಎಸ್.ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಸಂಪರ್ಕ ಪಡೆಯಲು ಗುತ್ತಿಗೆದಾರರನ್ನೇ ಆಶ್ರಯಿಸಬೇಕಿದೆ. ಗುತ್ತಿಗೆದಾರರು ಸುಲಿಗೆ ಮಾಡುತ್ತಿದ್ದಾರೆ. `ನೀರಿನ ಸಂಪರ್ಕ ದೊರಕಿಸಿಕೊಡುವುದು ಮಾತ್ರ ನಮ್ಮ ಜವಾಬ್ದಾರಿ. ನೀರು ಬಾರದಿದ್ದರೆ ಅಧಿಕಾರಿಗಳನ್ನೇ ಕೇಳಿ' ಎಂಬ ಹಾರಿಕೆಯ ಉತ್ತರ ಗುತ್ತಿಗೆದಾರರಿಂದ ಬರುತ್ತಿದೆ. ಈ ಸಂಬಂಧ ಅಧಿಕಾರಿಗಳನ್ನು ಪ್ರಶ್ನಿಸಿದರೆ `ಹಳೆಯ ಕೊಳವೆ ಮಾರ್ಗಗಳಿಂದ ಈ ಸಮಸ್ಯೆ ಸೃಷ್ಟಿಯಾಗಿದೆ' ಎಂಬ ಸಮಜಾಯಿಷಿ ನೀಡುತ್ತಿದ್ದಾರೆ. ಇದು ಜಲಮಂಡಳಿ ಜನರಿಗೆ ಮಾಡುತ್ತಿರುವ ದ್ರೋಹ ಎಂದು ಅವರು ದೂರಿದರು.

`ಆಸುಪಾಸಿನ ಕೊಳವೆಬಾವಿಗಳೆಲ್ಲ ಬತ್ತಿವೆ. ಒಂದು ಟ್ಯಾಂಕರ್ ನೀರಿಗೆ ರೂ.400 ಪಾವತಿಸಬೇಕಿದೆ. ಈ ನೀರು ಮೂರು ದಿನಕ್ಕೆ ಸಾಕಾಗುವುದಿಲ್ಲ. ಕಾವೇರಿ ನೀರು ನೀಡುತ್ತೇವೆ ಎಂದು ಜಲಮಂಡಳಿ ಭರವಸೆ ನೀಡಿದಾಗ ನೆಮ್ಮದಿಯಾಗಿತ್ತು. ಆದರೆ, ಜಲಮಂಡಳಿ ಮಾತಿನಂತೆ ನಡೆದುಕೊಂಡಿಲ್ಲ' ಎಂದು ಮತ್ತೊಬ್ಬ ನಿವಾಸಿ ಆಕ್ರೋಶದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT