ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಬರದಿಂದ ಸುಸ್ತಾದ ಅನ್ನದಾತ

22,491 ಹೆಕ್ಟೇರ್ ಬೆಳೆನಾಶ: ₨ 55.85 ಕೋಟಿ ನಷ್ಟ
Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಡಿ ಜಿಲ್ಲೆಯ 22,491 ಹೆಕ್ಟೇರನಲ್ಲಿ ಬಿತ್ತನೆಯಾಗಿದ್ದ ರಾಗಿ, ಜೋಳ, ಮುಸುಕಿನ ಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆ ಸಕಾಲದಲ್ಲಿ ಮಳೆ ಸುರಿಯದಿರುವ ಪರಿಣಾಮ  ಒಣಗಿಹೋಗಿದ್ದು,   ₨ 55.85 ಕೋಟಿ ನಷ್ಟವಾಗಿದೆ.

ಈ ಬಾರಿ 1,65,413 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 80,975 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು.
ಆದರೆ ಸಕಾಲದಲ್ಲಿ ಮಳೆ ಸುರಿ ಯಲಿಲ್ಲ. ಹೀಗಾಗಿ, ಜಿಲ್ಲೆಯ 16 ಹೋಬಳಿಗಳ ಪೈಕಿ 13 ಹೋಬಳಿಗಳು ಬರಗಾಲಕ್ಕೆ ತುತ್ತಾಗಿವೆ. ಸತತ ಮೂರನೇ ವರ್ಷವೂ ಜನರಿಗೆ ಬರದ ಬಿಸಿ ತಟ್ಟಿದೆ.

ಕೃಷಿ ಇಲಾಖೆ ಎಲ್ಲ 4 ತಾಲ್ಲೂಕಿನ ಸಹಾಯಕ ನಿರ್ದೇಶಕರ ನೇತೃತ್ವದಡಿ ಹೋಬಳಿವಾರು ಸಮೀಕ್ಷೆ ನಡೆಸಿ ಬೆಳೆ ನಷ್ಟದ ಅಂದಾಜು ವರದಿ ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಕಳೆದ ಎರಡು ವಾರದಿಂದ ಮಳೆ ಸುರಿಯುತ್ತಿದೆ. ಆದರೆ ಮಳೆರಾಯ ಈ ಅನುಕಂಪ ಮುಂದುವರಿಸುತ್ತಾನೆ ಎಂಬ ಭರವಸೆ ಅನ್ನದಾತರಲ್ಲಿ ಉಳಿದಿಲ್ಲ. ಈಗ ಮಳೆ ಸುರಿದರೂ ಉಳಿದಿರುವ ಫಸಲಿನಲ್ಲಿ ಉತ್ತಮ ಇಳುವರಿ ಸಿಗುವು ದಿಲ್ಲ ಎನ್ನುವ ಆತಂಕ ಕಾಡುತ್ತಿದೆ.

‘ಮುಂಗಾರು ಆರಂಭದಿಂದಲೂ ಉತ್ತಮ ಮಳೆ ಬರಲಿಲ್ಲ. ಕಳೆದ ಎರಡು ವರ್ಷಗಳಲ್ಲೂ ಇದೇ ಪರಿಸ್ಥಿತಿ ಎದುರಿಸಿದ್ದೆವು. ಬರಗಾಲದ ವೀಕ್ಷಣೆಗೆ ಬಂದಿದ್ದ ಹಿಂದಿನ ಸರ್ಕಾರದ ಸಚಿವರ ಮುಂದೆ ಸಮಸ್ಯೆ ಬಿಚ್ಚಿಟ್ಟಿದ್ದೆವು. ಪರಿಹಾರ ಮಾತ್ರ ಸಿಗಲಿಲ್ಲ. ಜಾನು ವಾರುಗಳಿಗೆ ನೀರು-, ಮೇವು ಕೂಡ ಪೂರೈಸಲಿಲ್ಲ’ ಎಂದು ರಾಮಾಪುರದ ರೈತ ಮಹದೇವಪ್ಪ ಅಳಲು ತೋಡಿಕೊಂಡರು. ಅವರ ಮಾತಿನಲ್ಲಿ ಅನ್ನದಾತರ ನೋವು ಇಣುಕಿತ್ತು.

ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ 705.7 ಮಿ.ಮೀ. ಜನವರಿ ಯಿಂದ ಸೆಪ್ಟೆಂಬರ್ ಅಂತ್ಯಕ್ಕೆ ವಾಡಿಕೆ ಮಳೆ ಪ್ರಮಾಣ 568 ಮಿ.ಮೀ. ಸೆ. 5ರವರೆಗೆ 309.25 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಶೇ 40ರಷ್ಟು ಮಳೆ ಕೊರತೆಯಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ, ಬೇಗೂರು, ತೆರಕಣಾಂಬಿ ಹೋಬಳಿಯ ಸ್ವಲ್ಪ ಭಾಗ ಹೊರತುಪಡಿಸಿದರೆ ಉಳಿದ ಎಲ್ಲ ಹೋಬಳಿಗಳಲ್ಲೂ ಬರದ ಛಾಯೆ ಆವರಿಸಿದೆ.

ವಿಮೆ ಮರೀಚಿಕೆ: ಪ್ರತಿ ವರ್ಷ ರಾಜ್ಯದಲ್ಲಿ ಮುಂಗಾರು ಹಂಗಾಮು ಗುಂಡ್ಲುಪೇಟೆ ತಾಲ್ಲೂಕಿ ನಿಂದಲೇ ಆರಂಭವಾಗುತ್ತದೆ. ಈ ತಾಲ್ಲೂಕಿನಲ್ಲಿ ಏಪ್ರಿಲ್ ಮೊದಲ ವಾರದಿಂದಲೇ ಪೂರ್ವ ಮುಂಗಾರು ಆರಂಭವಾ ಗುತ್ತದೆ. ರೈತರು ಮೆಕ್ಕೆಜೋಳ, ಉದ್ದು, ಅಲಸಂದೆ, ಹೆಸರು, ಸೂರ್ಯಕಾಂತಿ ಬಿತ್ತುತ್ತಾರೆ. ಆಗ ಜಿಲ್ಲೆಯ ಉಳಿದ 3 ತಾಲ್ಲೂಕಿನಲ್ಲಿ ಮಳೆಯಾಗುವುದಿಲ್ಲ.

ಇನ್ನೊಂದೆಡೆ ಹವಾಮಾನ ವೈಪರೀತ್ಯದಿಂದಾಗಿ ಜೂನ್‌ನಿಂದ ಆಗಸ್ಟ್‌ವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುವುದಿಲ್ಲ. ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಯಡಿ ನೋಂದಣಿ ಆರಂಭಗೊಂಡಾಗ ಜಿಲ್ಲೆಯ ಮಳೆ ಯಾಶ್ರಿತ ಜಮೀನಿನಲ್ಲಿ ಸರ್ಕಾರ ನಿಗದಿಪಡಿಸಿದ ಮಾನದಂಡದನ್ವಯ ಸಮೃದ್ಧ ಫಸಲು ಕಾಣುವುದು ಕಷ್ಟಕರ. ಹೀಗಾಗಿ, ಪ್ರತಿ ವರ್ಷವೂ ಬೆಳೆವಿಮೆ ರೈತರಿಗೆ ಮರೀಚಿಕೆಯಾಗುತ್ತಿದೆ. ಜಿಲ್ಲೆಗೆ ಪ್ರತ್ಯೇಕ ಬೆಳೆವಿಮೆ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಈಡೇರಿಲ್ಲ.

ಮಳೆರಾಯನ ಮೇಲೆ ನಿರೀಕ್ಷೆ

ನನಗೆ 3 ಎಕರೆ ಜಮೀನಿದೆ. ಮುಂಗಾರು ಹಂಗಾಮಿನಲ್ಲಿ ಎಳ್ಳು, ಜೋಳ ಬಿತ್ತಿದ್ದೆ. ಸಕಾಲದಲ್ಲಿ ಮಳೆ ಸುರಿಯಲಿಲ್ಲ. ಫಸಲು ಒಣಗಿಹೋಯಿತು. ಏಳೆಂಟು ಸಾವಿರ ಹಣವೂ ಮಣ್ಣು ಪಾಲಾಯಿತು. ಎರಡು ವಾರದಿಂದ ಮಳೆ ಸುರಿಯುತ್ತಿದೆ. ಹಿಂಗಾರು ಹಂಗಾಮಿನಲ್ಲಾದರೂ ಉತ್ತಮವಾಗಿ ಮಳೆ ಸುರಿಯುತ್ತದೆ ಎಂಬ ನಂಬಿಕೆಯಿಂದ ರಾಗಿ ಬಿತ್ತನೆಗೆ ಮುಂದಾಗಿದ್ದೇನೆ. 
-ಬೆಳ್ಳಯ್ಯ ರೈತ, ಅರಕಲವಾಡಿ ಗ್ರಾಮ

ಸಾಲದ ಹೊರೆ

2 ಎಕರೆಯಲ್ಲಿ ಬಿತ್ತಿದ್ದ ರಾಗಿ ಒಣಗಿಹೋಯಿತು. ಇದಕ್ಕಾಗಿ 3–4  ಸಾವಿರ ರೂಪಾಯಿ ವೆಚ್ಚ ಮಾಡಿದ್ದೇನೆ. ನನಗೆ ದಿಕ್ಕುತೋಚದಾಗಿದೆ. ಈಗ ಮಳೆ ಸುರಿಯುತ್ತಿದೆ. ಮತ್ತೆ ರಾಗಿ ಬಿತ್ತನೆ ಮಾಡಲು ನಿರ್ಧರಿಸಿದ್ದೇನೆ. ಪುನಃ ಸಾಲ ಮಾಡಿ ಬಿತ್ತನೆ ಮಾಡುವಂತಹ ಪರಿಸ್ಥಿತಿ ತಲೆದೋರಿದೆ
-ಗೋವಿಂದ ನಾಯ್ಕ ರೈತ, ಅಮಚವಾಡಿ

ಸರ್ಕಾರಕ್ಕೆ ವರದಿ ಸಲ್ಲಿಕೆ

ಜಿಲ್ಲೆಯಲ್ಲಿ ಆಗಿರುವ ಬೆಳೆ ನಷ್ಟ ಪ್ರಮಾಣದ ವರದಿ ಸಿದ್ಧಪಡಿಸಿ ಕೃಷಿ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿದೆ. ಪ್ರಸ್ತುತ ಮಳೆ ಸುರಿಯುತ್ತಿದ್ದು, ಉಳಿದಿರುವ ಬೆಳೆಗಳಿಗೆ ಜೀವಕಳೆ ಬಂದಿದೆ. ಮುಂಗಾರು ಆರಂಭದಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ತಾಲ್ಲೂಕಿನ ಕೆಲವೆಡೆ ಮಳೆ ಸುರಿದಿರಲಿಲ್ಲ. ಈಗ ಆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತರು ರಾಗಿ, ಮುಸುಕಿನಜೋಳದ ಬಿತ್ತನೆಯಲ್ಲಿ ತೊಡಗಿದ್ದಾರೆ. 
– ಸೋಮಸುಂದರ್‌ ಪ್ರಭಾರ ಜಂಟಿ ಕೃಷಿ ನಿರ್ದೇಶಕ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT