ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆ: ವ್ಯಾಪಕ ಖಂಡನೆ

Last Updated 8 ಫೆಬ್ರುವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: ಸದನದಲ್ಲಿ ಕುಳಿತು ಮೊಬೈಲ್ ಫೋನ್‌ನಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ಮಾಜಿ ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ ಅವರ ವರ್ತನೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಈ ಸಂಬಂಧ ಹಲವು ಜನಪರ ಸಂಘಟನೆಗಳು ನಗರದ ವಿವಿಧೆಡೆ ಬುಧವಾರ ಪ್ರತಿಭಟನೆ ನಡೆಸಿದವು.

ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ನ ಮಾಹಿತಿ ತಂತ್ರಜ್ಞಾನ ಘಟಕದ ಸದಸ್ಯರು, `ಆಡಳಿತ ಪಕ್ಷದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರು ಸದನದ ಘನತೆಯನ್ನು ಹಾಳು ಮಾಡಿದ್ದಾರೆ. ಆದ್ದರಿಂದ ಅವರ ಸದಸ್ಯತ್ವನ್ನು ರದ್ದುಪಡಿಸಬೇಕು~ ಎಂದು ಒತ್ತಾಯಿಸಿದರು.

ಆ ಮೂವರು ಮಾಜಿ ಸಚಿವರ ದುರ್ವತನೆಯಿಂದ ವಿಧಾನಸೌಧ ಅಪವಿತ್ರವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಸವೇಶ್ವರ ವೃತ್ತದಿಂದ ವಿಧಾನಸೌಧದವರೆಗೆ ಸಾಂಕೇತಿಕವಾಗಿ ರಸ್ತೆಯನ್ನು ತೊಳೆದು ಶುಚಿಗೊಳಿಸಲು ಮುಂದಾದರು. ಇದಕ್ಕೆ ಅವಕಾಶ ನೀಡದ ಪೊಲೀಸರು ನೀರಿನ ಕ್ಯಾನ್‌ಗಳನ್ನು ವಶಕ್ಕೆ ತೆಗೆದುಕೊಂಡರು. ಇದರಿಂದ ಪ್ರತಿಭಟನಾನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಫಲಕ ಅನಾವರಣ:
ಆನಂದರಾವ್ ವೃತ್ತದ ಬಳಿ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು `ಬಿಜೆಪಿ ಹೀನಾಯ ಸಂಸ್ಕೃತಿಯ ಅನಾವರಣ~ ಎಂಬ ಫಲಕವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಅನಾವರಣಗೊಳಿಸುವ ಅಣುಕು ಪ್ರದರ್ಶನ ನಡೆಸಿ ಬಿಜೆಪಿ ನಾಯಕರ ವರ್ತನೆ ಟೀಕಿಸಿದರು.

ಬಿಜೆಪಿ ಸಚಿವರು ಮತ್ತು ಶಾಸಕರು ರಾಜ್ಯದ ಸಂಸ್ಕೃತಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಶ್ಲೀಲ ಸಂಸ್ಕೃತಿಯನ್ನು ಬೆಂಬಲಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಅಕ್ರಮ ಹೀಗೆ ಸಾಕಷ್ಟು ಆರೋಪಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಉರುಳು ಸೇವೆ: ಜೆಡಿಎಸ್ ಯುವ ಘಟಕದ ಸದಸ್ಯರು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಆನಂದರಾವ್ ವೃತ್ತದವರೆಗೆ ಉರುಳು ಸೇವೆ ಮತ್ತು ರ‌್ಯಾಲಿ ನಡೆಸಿದರು.
ಆರೋಪಿಗಳನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು. ಸದನದಲ್ಲಿ ಅಶಿಸ್ತು ಪ್ರದರ್ಶಿಸಿರುವ ಈ ಶಾಸಕರಾಗಿ ಮುಂದುವರಿಯಲು ಅನರ್ಹ ಎಂದರು.

`ರಾಜ್ಯದ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಶಾಸಕರು ಈ ರೀತಿ ನಡೆದುಕೊಂಡಿರಲಿಲ್ಲ. ಬಿಜೆಪಿ ಶಾಸಕರ ವರ್ತನೆಯಿಂದ ಜನಪ್ರತಿನಿಧಿಗಳು ತಲೆ ತಗ್ಗಿಸುವಂತಾಗಿದೆ~ ಎಂದು ಮಾಜಿ ಸಚಿವ ಆರ್.ಕೃಷ್ಣಪ್ಪ ದೂರಿದರು. ವಿಧಾನಪರಿಷತ್ತಿನ ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯೋನ್, ಘಟಕದ ಕಾರ್ಯಾಧ್ಯಕ್ಷ ಬಿ.ಎಚ್.ಚಂದ್ರಶೇಖರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ: ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಸದಸ್ಯರು ಆನಂದರಾವ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಆ ಮೂವರು ಶಾಸಕರ ಪ್ರತಿಕೃತಿಗಳನ್ನು ಕತ್ತೆಗಳ ಮೇಲೆ ಮೆರವಣಿಗೆ ಮಾಡಿದರು. ನಂತರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

`ಸದನದಲ್ಲಿ ಬ್ಲೂ ಫಿಲಂ ನೋಡಿರುವ ಆ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು. ಅವರನ್ನು ಜೈಲಿಗೆ ಕಳುಹಿಸಬೇಕು~ ಎಂದು ಶಿವರಾಮೇಗೌಡ ಒತ್ತಾಯಿಸಿದರು.
ಪ್ರತಿಕೃತಿ ದಹನ: ಸಿಪಿಎಂ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆ ಮತ್ತಿತರ ಸಂಘಟನೆಗಳ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದ ಬಳಿ ಆ ಶಾಸಕರ ಪ್ರತಿಕೃತಿಗಳನ್ನು ದಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT