ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲೇ ಕಣ್ಣೀರಿಟ್ಟ ಅಲ್ಲಮಪ್ರಭು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೊಗರಿ ಬೆಳೆಗಾರರ ಸಂಕಷ್ಟ ಕುರಿತು ವಿಷಯ ಪ್ರಸ್ತಾಪಿಸುತ್ತಿದ್ದಾಗ ಕೃಷಿ ಮತ್ತು ಸಹಕಾರ ಸಚಿವರಿಂದ ಸರಿಯಾದ ಸ್ಪಂದನೆ ದೊರೆಯದೆ ಬೇಸರಗೊಂಡ ಕಾಂಗ್ರೆಸ್ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಸದನದಲ್ಲೇ ಕಣ್ಣೀರಿಟ್ಟ ಘಟನೆ ಮಂಗಳವಾರ ವಿಧಾನ ಪರಿಷತ್‌ನಲ್ಲಿ ನಡೆಯಿತು.

ತೊಗರಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿದ್ದರೂ, ಖರೀದಿ ನಡೆಯದಿರುವ ಕುರಿತು ಕಾಂಗ್ರೆಸ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ಎಸ್.ಆರ್.ಪಾಟೀಲ್ ಮತ್ತು ವೀರಣ್ಣ ಮತ್ತಿಕಟ್ಟಿ ಅವರು ನಿಯಮ 330ರ ಅಡಿ ಕಳುಹಿಸಿದ್ದ ಪ್ರಸ್ತಾವ ಮಧ್ಯಾಹ್ನದ ನಂತರ ಚರ್ಚೆಗೆ ಬಂತು. ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲ್ ಅವರು, `ಪ್ರತಿ ಕ್ವಿಂಟಲ್ ತೊಗರಿಗೆ ನಾಲ್ಕು ಸಾವಿರ ರೂಪಾಯಿ ದರದಲ್ಲಿ ತೊಗರಿ ಮಂಡಳಿಯಿಂದ ಖರೀದಿ ಮಾಡುವುದಾಗಿ ಜನವರಿ 27ರಂದು ಸರ್ಕಾರ ಪ್ರಕಟಿಸಿತ್ತು. ಆದರೆ, ಈವರೆಗೂ ಖರೀದಿ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ~ ಎಂದು ದೂರಿದರು.

ತೊಗರಿ ಮಂಡಳಿಯಲ್ಲಿ ಸಿಬ್ಬಂದಿಯ ಕೊರತೆ, ತೊಗರಿ ಖರೀದಿ ಪ್ರಕ್ರಿಯೆ ಆರಂಭವಾಗದೇ ಇರುವುದರಿಂದ ರೈತರಿಗೆ ಆಗಿರುವ ತೊಂದರೆಗಳು, ಸಾಲಗಾರರ ಕಾಟ ಮತ್ತಿತರ ಸಮಸ್ಯೆಗಳನ್ನು ಅಲ್ಲಮಪ್ರಭು ಅವರು ಎಳೆಎಳೆಯಾಗಿ ಬಿಡಿಸಿಟ್ಟರು. 22,000 ಕ್ವಿಂಟಲ್ ತೊಗರಿ ಲಭ್ಯವಿದ್ದು, ಖರೀದಿಗಾಗಿ ಕೇವಲ ರೂ 2 ಕೋಟಿಯನ್ನು ಮಂಡಳಿಗೆ ನೀಡಲಾಗಿದೆ. ಇದರಿಂದ ರೈತರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಮಧ್ಯ ಪ್ರವೇಶಿಸಿದ ಕೃಷಿ ಸಚಿವ ಉಮೇಶ್ ಕತ್ತಿ ಅವರು, ಕೇಂದ್ರ ಸರ್ಕಾರ ತೊಗರಿ ಆಮದಿಗೆ ಅವಕಾಶ ನೀಡಿರುವುದರಿಂದ ತೊಗರಿ ಬೆಲೆ ಕುಸಿದಿದೆ. ಆಮದು ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅಲ್ಲದೇ ಕೇಂದ್ರ ಸರ್ಕಾರವೇ ಪ್ರತಿ ಕ್ವಿಂಟಲ್ ತೊಗರಿಗೆ ರೂ 3,200 ಬೆಂಬಲ ಬೆಲೆ ನಿಗದಿಮಾಡಿದೆ. ಕಟಾವು ಅವಧಿಯ ಮೊದಲ ಎರಡು ತಿಂಗಳಲ್ಲಿ ರೂ 500 ಪ್ರೋತ್ಸಾಹ ಧನ ಘೋಷಿಸಿದೆ. ಅದರ ಜೊತೆ ರಾಜ್ಯ ಸರ್ಕಾರದ ವತಿಯಿಂದ ರೂ 300 ಪ್ರೋತ್ಸಾಹ ಧನ ಘೋಷಿಸಲಾಗಿದೆ ಎಂದರು.

ಆದರೆ, ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಪಾಟೀಲ್ ಚರ್ಚೆ ಮುಂದುವರೆಸಿದರು. ಆದರೆ ಕತ್ತಿ ಮತ್ತು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಸದಸ್ಯರ ಮಾತಿಗೆ ಕಿವಿಗೊಡದೆ ನಗುತ್ತಾ, ತಮಾಷೆಯಲ್ಲಿ ನಿರತರಾಗಿದ್ದರು. ಇದರಿಂದ ಬೇಸರಗೊಂಡ ಪಾಟೀಲ್, `ರೈತರ ಕಷ್ಟ ನಿಮಗೆ ಗೊತ್ತಾಗುವುದಿಲ್ಲ. ಹೀಗೆಯೇ ಆದರೆ ತೊಗರಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅವರ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ~ ಎಂದು ಕಣ್ಣೀರಿಟ್ಟರು.

ಪ್ರತಿಪಕ್ಷ ನಾಯಕಿ ಮೋಟಮ್ಮ, ಉಪ ನಾಯಕ ಎಸ್.ಆರ್.ಪಾಟೀಲ್ ಮತ್ತಿತರರು ಅಲ್ಲಮಪ್ರಭು ಪಾಟೀಲ್ ಅವರನ್ನು ಸಮಾಧಾನಪಡಿಸಿದರು. ಆದರೂ, ದೀರ್ಘಕಾಲ ಅವರ ಮುಖದಲ್ಲಿ ದುಃಖದ ಛಾಯೆಯಿತ್ತು. ನಂತರ ಮಾತನಾಡಿದ ಎಸ್.ಆರ್.ಪಾಟೀಲ್ ಕೂಡ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ, ವಾಗ್ದಾಳಿ ನಡೆಸಿದರು.

ನಂತರ ಉತ್ತರ ನೀಡಿದ ಕತ್ತಿ ಅವರು, ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದಲ್ಲೇ ಬುಧವಾರದಿಂದಲೇ ತೊಗರಿ ಖರೀದಿ ನಡೆಯಲಿದೆ. ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆ ಇದ್ದಾಗ ಮಾತ್ರ ಖರೀದಿ ನಡೆಸಲಾಗುವುದು. ದರ ಹೆಚ್ಚಳ ಮತ್ತು ಆಮದು ನಿಯಂತ್ರಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ನಿಯೋಗ ಕರೆದೊಯ್ಯಲಾಗುವುದು ಎಂದರು. ಸಚಿವರ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT