ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾನಂದಗೌಡ ಬದಲಾವಣೆ; ಗಡ್ಕರಿ ಸಂಧಾನ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ನಾಯಕತ್ವ ಬದಲಾವಣೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಪಕ್ಷದ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ನಾಯಕತ್ವ ಬದಲಾವಣೆಗೆ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಅನುಮತಿ ಅಗತ್ಯವಾಗಿದ್ದು, ತಂಟೆತಕರಾರಿಲ್ಲದೆ ಈ ಸಂಬಂಧದ ತೀರ್ಮಾನಕ್ಕೆ ಒಪ್ಪಿಗೆ ಪಡೆಯುವ ಉದ್ದೇಶದಿಂದ ಎಲ್ಲ ಮುಖಂಡರ ಜತೆ ಚರ್ಚೆ ನಡೆಸುವ ಪೂರ್ವಭಾವಿ ಕಸರತ್ತು ಆರಂಭವಾಗಿದೆ. ಜುಲೈ 10ರೊಳಗೆ ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಅಧಿಕೃತವಾಗಿ ತನ್ನ ನಿರ್ಧಾರ ಪ್ರಕಟಿಸಲಿದೆ. ಇದಕ್ಕೂ ಮೊದಲು ಸಂಸದೀಯ ಮಂಡಳಿಯ ಸಭೆ ನಡೆಯಲಿದೆ.
ಪೃಥ್ವಿರಾಜ್ ಮಾರ್ಗದಲ್ಲಿರುವ ಅಡ್ವಾಣಿ ಮನೆಗೆ ಧಾವಿಸಿದ ಗಡ್ಕರಿ ಕರ್ನಾಟಕದ ಬೆಳವಣಿಗೆ ಕುರಿತು ವಿವರಿಸಿದರು.

ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರನ್ನು ಬದಲಾವಣೆ ಮಾಡಿ ಜಗದಿಶ್ ಶೆಟ್ಟರ್ ಅವರನ್ನು ನೇಮಕ ಮಾಡಬೇಕಾದ ಅಗತ್ಯ ಕುರಿತು ಮನವರಿಕೆ ಮಾಡಿದರು. ಅನಂತರ ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಲೋಕಸಭಾ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು.

ಗಡ್ಕರಿ, ಸುಷ್ಮಾ  ಜತೆಗೂ ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಅಡ್ವಾಣಿ ಬಣದಲ್ಲಿರುವ ಸುಷ್ಮಾ ನಾಯಕತ್ವ ಬದಲಾವಣೆ ಬೇಡ ಎಂಬ ನಿಲುವು ತಾಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಮುಖಾಮುಖಿ ಆಗಲಿದ್ದಾರೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಗಡ್ಕರಿ, ಅನಂತ ಕುಮಾರ್ ಹಾಗೂ ಪ್ರಧಾನ್ ಬುಧವಾರ ರಾತ್ರಿ ಸಭೆ ಸೇರಿ ಸಮಾಲೋಚಿಸಿದರು. ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ, ಒಕ್ಕಲಿಗ ಮತ್ತು ಕುರುಬ ಜಾತಿಗೆ ಸಮಾನ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚಿಸಿದರು. ಶೆಟ್ಟರ್ ಮುಖ್ಯಮಂತ್ರಿ, ಕೆ.ಎಸ್. ಈಶ್ವರಪ್ಪ ಅಥವಾ ಆರ್. ಅಶೋಕ್ ಉಪ ಮುಖ್ಯಮಂತ್ರಿ. ಆದರೆ, ತಮಗೆ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಬಿಜೆಪಿ ಅಧ್ಯಕ್ಷರಾಗೇ ಮುಂದುವರಿಯಲು ಈಶ್ವರಪ್ಪ ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮೂರು ದಿನಗಳಿಂದ ದೆಹಲಿಯಲ್ಲಿದ್ದು ವರಿಷ್ಠರನ್ನು ಭೇಟಿ ಮಾಡಿದ ಜಗದೀಶ್ ಶೆಟ್ಟರ್ ಗುರುವಾರ ಬೆಳಗಿನ ಜಾವ ಬೆಂಗಳೂರಿಗೆ ಹಿಂತಿರುಗಿದರು. ಅಡ್ವಾಣಿ ಅವರನ್ನು ಕಂಡು ತಮಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಲು ಚಿಂತಿಸಿದ್ದರು. ಅನಂತ ಕುಮಾರ್ ಜತೆಗೂಡಿ ಹಿರಿಯ ನಾಯಕನನ್ನು ಕಾಣುವ ಉದ್ದೇಶವಿತ್ತು. ಆದರೆ, ಅನಂತ ಕುಮಾರ್ ಅವರು, ಪಕ್ಷವು ನಾಯಕತ್ವ ಬದಲಾವಣೆ ಪ್ರಸ್ತಾವನೆ ಕಳುಹಿಸಿದ ಬಳಿಕವೇ ಭೇಟಿ ಮಾಡುವುದು ಸೂಕ್ತ ಎಂದು ಸಲಹೆ ಮಾಡಿದರು.

ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಅಡ್ವಾಣಿ ಅಸಮಾಧಾನಗೊಂಡಿದ್ದಾರೆ. ಬ್ಯ್ಲಾಕ್ ಮೇಲ್ ತಂತ್ರಗಳಿಗೆ ಮಣೆ ಹಾಕುವ ಬದಲು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದೇ ಲೇಸು ಎಂಬ ನಿಲುವನ್ನು ಅವರು ಹೊಂದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಶೆಟ್ಟರ್ ಉಳಿದ ಸಚಿವರ ಜತೆಗೂಡಿ ರಾಜೀನಾಮೆ ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಿದ ಬಗೆಗೆ ಅಡ್ವಾಣಿ ಆಪ್ತರ ಬಳಿ ಅತೃಪ್ತಿ ತೋಡಿಕೊಂಡಿದ್ದಾರೆ.

`ಶೆಟ್ಟರ್ ಅವರಿಗೆ ಪಕ್ಷದ ಶಿಸ್ತು ಗೊತ್ತಿಲ್ಲವೇ. ಅವರಿಗೂ ನಾವು ಇದನ್ನು ಹೇಳಿಕೊಡಬೇಕೇ?~ ಎಂದು `ಗರಂ~ ಆಗಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈಗ ಅಡ್ವಾಣಿ  ಅವರನ್ನು ಸಮಾಧಾನಪಡಿಸುವ ಜವಾಬ್ದಾರಿ ಗಡ್ಕರಿ, ಜೇಟ್ಲಿ, ಅನಂತ ಕುಮಾರ್ ಹೆಗಲಿಗೆ ಬಿದ್ದಿದೆ. ಸಮಸ್ಯೆ ಸುಸೂತ್ರವಾಗಿ ಬಗೆಹರಿದು ಮುಂದಿನ ವಾರ ರಾಜ್ಯ ಹೊಸ ಮುಖ್ಯಮಂತ್ರಿಯನ್ನು ಕಾಣಲಿದೆ ಎಂಬ ವಿಶ್ವಾಸವನ್ನು ಮೂಲಗಳು ವ್ಯಕ್ತಪಡಿಸಿವೆ.
 

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT