ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದ ಶಿವನ ಸೇವೆಗೆ ಶತಕ

Last Updated 21 ಫೆಬ್ರುವರಿ 2012, 6:00 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಯಾರಿಂದಲೂ ಒಂದು ರೂಪಾಯಿ ಸ್ವೀಕರಿಸದೇ ಶಿವನ ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ಜನರಿಗೆ ನೀಡುತ್ತಾ ಶಿವರಾತ್ರಿ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿರುವ ಕುಟುಂಬ ಪಟ್ಟಣದಲ್ಲಿದೆ.

ಎಲ್ಲಿಂದಲೋ ಪವಿತ್ರ ಪತ್ರಿ, ಉತ್ರಾಣಿ ಕಡ್ಡಿ, ಹೂವು, ನರಗುಂದದಿಂದ ಹತ್ತಿ ತಂದು ಅದರಲ್ಲಿಯ ಬೀಜಗಳನ್ನು ಓಣಿಯ ನಿವಾಸಿಗಳ ಸಹಕಾರದೊಂದಿಗೆ ಬಿಡಿಸಿ ಶುದ್ಧ ಅರಳಿ ಮಾಡಿ. ಸ್ವತಃ ಮನೆ ಮಂದಿಯೆಲ್ಲ ಕುಳಿತು ಶ್ರದ್ಧೆಯಿಂದ ಹೂ, ಬತ್ತಿ ಉತ್ರಾಣಿ ಕಡ್ಡಿಗಳ ಜೋಡಿಸುವ, ಹತ್ತಾರು ಲೀಟರ್ ಹಾಲು ತಂದು, ಜೇನು ತುಪ್ಪ, ಆಕಳ ತುಪ್ಪ, ಬಾಳೆಹಣ್ಣಿನ ಪ್ರಸಾದ ಪಂಚಾಮೃತ ತಯಾರಿಸಿ ಅದನ್ನು ಸಹ ಅತ್ಯಂತ ಪ್ರೀತಿಯಿಂದಲೇ ಬಂದ ಜನರಿಗೆಲ್ಲ ವಿತರಿಸುವ ಕಾರ್ಯವನ್ನು ನೂರು ವರ್ಷಗಳಿಂದ ಮಾಡುತ್ತ ಬಂದ ಕುಟುಂಬ. ಅದು ರಾವ ಸಾಹೇಬ್ ಎಂದು ಬ್ರಿಟಿಷರಿಂದ ಗೌರವ ಪಡೆದ ಮೋಟಗಿ ಅವರ ಮನೆತನ.

ಮಹಾಶಿವರಾತ್ರಿಯಂದು ಶಿವನ ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ಮಾರುಕಟ್ಟೆಯಲ್ಲಿ ಹತ್ತಾರು ರೂ. ಕೊಟ್ಟು ತಂದು ಶಿವನನ್ನು ಪೂಜಿಸುವ ಕಾಲ ಇದು. ಆದರೆ ಕಳೆದ ನೂರು ವರ್ಷಗಳಿಂದ ಶಿವರಾತ್ರಿ ಆಚರಣೆಗೆ ಬೇಕಾಗುವ ಪವಿತ್ರ ಕೃಷ್ಣಾ ನದಿ (ಗಂಗಾಜಲ) ನೀರನ್ನು ತಂದು ವಿತರಿಸುವ ಕಾರ್ಯ ಇದು.

ಶಿವರಾತ್ರಿ ಬರುತ್ತದೆ ಎನ್ನುವ ಎರಡು ತಿಂಗಳು ಇರುವಾಗಲೇ ತೋಟದಿಂದ ಉತ್ರಾಣಿ ಕಡ್ಡಿ ಸಂಗ್ರಹಿಸುವ ಕೆಲಸ ಶುರುವಾಗುತ್ತದೆ. ಅದಕ್ಕೆ ಪವಿತ್ರ (ಹೊಸದಾದ ಶುದ್ಧ) ಅರಳಿ ಸುತ್ತಿ ಒಂದೆಡೆ ಇಡುವ, ಬೇರೆ ಬೇರೆ ಹೂ ತಂದು ಅವುಗಳನ್ನು ಬಾಡದಂತೆ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿಡುವ, ಕೆಲಸ ನಡೆಯುತ್ತದೆ.

ಕೃಷ್ಣಾ ನದಿಯ ನೀರಿನಿಂದಲೇ ಬಾಳೆ ಹಣ್ಣು ಹಾಗೂ ಹಾಲಿನಿಂದ ಪಂಚಾಮೃತ ತಯಾರಿಸುವ, ಜೊತೆಗೆ ವಿಭೂತಿಯನ್ನು, ಶುದ್ಧೀಕರಿಸಿದ ಲಿಂಗವನ್ನು ಸದ್ಭಕ್ತರಿಗೆ ನೀಡುವ ಕಾಯಕ ಸಹ ಈ ಮನೆತನದ್ದು.

1910ರಿಂದ 1940ರವರೆಗೆ `ರಾವ್‌ಸಾಹೇಬ್~ ಗುರುಲಿಂಗಪ್ಪ ಮೋಟಗಿ ಅವರಿಂದ ಆರಂಭವಾದ ಈ ಕಾರ್ಯ ಮೊದಲು ಮನೆ ದೇವರಿಗೆ ಹಾಗೂ ಸುತ್ತಲಿದ್ದ ಬಡಾವಣೆಯ ನಿವಾಸಿಗಳಿಗೆ ಮೀಸಲಿತ್ತು. ಹತ್ತಾರು ವರ್ಷಗಳಲ್ಲಿಯೇ ಕೃಷ್ಣಾ ನದಿಯ ಪವಿತ್ರ ಗಂಗೆಯನ್ನು ವಿತರಿಸುತ್ತಾರೆ ಎಂದು ಜನರು ಬಂದಂತೆಲ್ಲ ಅವರನ್ನು ನಿರಾಕರಿಸಿ ಬರಿಗೈಯಲ್ಲಿ ಕಳಿಸುವ ಮನಸ್ಸು ಮಾಡದೇ ಬಂದವರಿಗೆಲ್ಲ ಎಲ್ಲ ಸಾಮಗ್ರಿ ವಿತರಿಸುವ ವ್ಯವಸ್ಥೆ ಮಾಡಿದರು.

ನಂತರ ಹಿರಿಯರ ಸೇವೆಯನ್ನು ಸಂಗಪ್ಪ ಮೋಟಗಿಯವರು 1940ರಿಂದ 1970ರವರೆಗೆ ನಿರ್ವಹಿಸಿದರು. ನಂತರ 1970ರಿಂದ ಮುರಿಗೆಪ್ಪ ಮೋಟಗಿ  ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 96 ವರ್ಷಗಳಿಂದ ಎತ್ತಿನ ಬಂಡಿಯಲ್ಲಿ ನದಿ ನೀರು ತಂದು ವಿತರಿಸುತ್ತಿದ್ದುದು ಈಗ ವಾಹನದಲ್ಲಿ ಗಂಗಾ ಜಲವನ್ನು ವಿತರಿಸುವ ಕಾರ್ಯ ನಡೆದಿದೆ.

ಹಿರಿಯರು ಮಾಡಿಕೊಂಡು ಬಂದ ಈ ಸೇವೆಯಲ್ಲಿ ನನಗೆ ಬಹಳ ತೃಪ್ತಿ, ನೆಮ್ಮದಿ ಸಿಕ್ಕಿದೆ, ದೇವರ ಸೇವೆ ಇದು. ಬಸವಣ್ಣ ಸಹ ಇದನ್ನೇ ಹೇಳಿದ್ದಾನೆ. ಜನರ ಸಂತಸವೇ ನಮ್ಮೆಲ್ಲರ ಸಂತಸವಡಗಿದೆ ಎನ್ನುತ್ತಾರೆ ಮುರಿಗೆಪ್ಪ.
ಪತ್ನಿ ಸುಮಂಗಲಾ ಮೋಟಗಿ, ಸಹೋದರರಾದ  ನೀಲಕಂಠಪ್ಪ ಮೋಟಗಿ, ರೇವಣಸಿದ್ದಪ್ಪ ಮೋಟಗಿ ಮತ್ತು ಅವರ ಮಕ್ಕಳಾದ ಪ್ರಶಾಂತ ಮೋಟಗಿ, ಮೊಮ್ಮಕ್ಕಳಾದ ವೇದಾ, ಪಲ್ಲವಿ ಸೇರಿದಂತೆ ಇಡೀ ಬಡಾವಣೆಯ ಜನರೆಲ್ಲ ಈ ಸೇವೆಯಲ್ಲಿ ನನ್ನ ಜೊತೆಗಿದ್ದಾರೆ ಎಂದು ಅವರು ತಿಳಿಸಿದರು. ಮುರಿಗೆಪ್ಪ ಖಜಾನೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT