ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾತ್ಯಾಗ: ಬಿಎಸ್‌ವೈ ಹಿಂಬಾಲಿಸಿದ ಬಿಜೆಪಿ

ವಿಧಾನ ಮಂಡಲ ಕಲಾಪ
Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸದನದಲ್ಲಿ ಸಚಿವರು ಮತ್ತು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಲಿಲ್ಲ ಎಂದು ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಸಭಾತ್ಯಾಗ ಮಾಡಿದ ತಕ್ಷಣ ಅವರನ್ನು ಬಿಜೆಪಿ ಸದಸ್ಯರು ಕೂಡ ಹಿಂಬಾಲಿಸಿದ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಭೋಜನ ವಿರಾಮದ ನಂತರ ಕಲಾಪ ಆರಂಭವಾದ ಗೃಹ ಸಚಿವ ಕೆ.ಜೆ.ಜಾರ್ಜ್ ಬಿಟ್ಟರೆ ಬೇರೆ ಯಾವ ಸಚಿವರೂ ಸದನದಲ್ಲಿ ಇರಲಿಲ್ಲ. ಅಧಿಕಾರಿಗಳ ಗ್ಯಾಲರಿ ಕೂಡ ಖಾಲಿ. ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಕಾಣಿಸುತ್ತಿದ್ದರು.

ಇದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. `ಸರ್ಕಾರ ರಚನೆಯಾಗಿ ಇನ್ನೂ 2 ತಿಂಗಳಾಗಿಲ್ಲ. ಆಗಲೇ ಏಕೆ ಈ ಬೇಜವಾಬ್ದಾರಿ. ಸಚಿವರಲ್ಲಿ ಉತ್ಸಾಹವೇ ಕಾಣುತ್ತಿಲ್ಲ' ಎಂದು ಜಗದೀಶ ಶೆಟ್ಟರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಡಿ.ಎನ್. ಜೀವರಾಜ್, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಸೇರಿದಂತೆ ಇತರರು ಕೂಡ ಆಕ್ಷೇಪ ವ್ಯಕ್ತಪಡಿಸಿ, ಸದನವನ್ನು ಅರ್ಧ ಗಂಟೆ ಮುಂದೂಡುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಇದನ್ನು ಕೇಳಿಸಿಕೊಳ್ಳದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು `ಆಯ್ತು ಸ್ವಲ್ಪ ಹೊತ್ತಿನಲ್ಲಿ ಸಚಿವರು ಬರುತ್ತಾರೆ. ಭಾಷಣ ಆರಂಭಿಸಿ' ಎಂದು ಶೆಟ್ಟರ್ ಅವರನ್ನು ಕೋರಿದರು. ಅದಕ್ಕೆ ಶೆಟ್ಟರ್ ಒಪ್ಪಲಿಲ್ಲ. ಕಾಂಗ್ರೆಸ್‌ನ ಶಿವಮೂರ್ತಿ ಮಾತನಾಡಿ, `ಗೃಹ ಸಚಿವರು ಪ್ರಬಲರಿದ್ದಾರೆ. ಅವರು ನೀವು ಕೇಳುವ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತಾರೆ' ಎಂದರು.

ಹೀಗೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಯಡಿಯೂರಪ್ಪ ಅವರು `ಇದೇನು, ಸದನದಲ್ಲಿ ಮುಖ್ಯಮಂತ್ರಿ ಇಲ್ಲ, ಸಚಿವರಿಲ್ಲ, ಅಧಿಕಾರಿಗಳೂ ಇಲ್ಲ. ಇದು ಸದನ ನಡೆಸುವ ರೀತಿಯೇ? ಪ್ರಮುಖ ವಿರೋಧ ಪಕ್ಷದ ಮುಖಂಡರು ಸದನದಲ್ಲಿ ಮಾತನಾಡುವಾಗ ಇವರೆಲ್ಲ ಇಲ್ಲದಿದ್ದರೆ ಹೇಗೆ? ಇದನ್ನು ಒಪ್ಪಲು ಸಿದ್ಧ ಇಲ್ಲ. ನಾವಂತೂ ಸಭಾತ್ಯಾಗ ಮಾಡುತ್ತೇವೆ' ಎಂದು ಹೊರ ನಡೆದರು. ಅವರನ್ನು ಶೆಟ್ಟರ್ ಸೇರಿದಂತೆ ಬಿಜೆಪಿಯ ಇತರ ಸದಸ್ಯರು ಕೂಡ ಹಿಂಬಾಲಿಸಿದರು.

ಕೆಜೆಪಿಯಲ್ಲಿ ವಿಲೀನ: ಕೆಜೆಪಿ- ಬಿಜೆಪಿ ಸದಸ್ಯರು ಹೀಗೆ ಒಟ್ಟಿಗೇ ಸಭಾತ್ಯಾಗ ಮಾಡಿದ್ದನ್ನು ನೋಡಿದ ಕಾಂಗ್ರೆಸ್‌ನ ಎ.ಮಂಜು ಅವರು `ಕೆಜೆಪಿಯಲ್ಲೇ ಬಿಜೆಪಿ ವಿಲೀನ ಆದಂತಾಗಿದೆ' ಎಂದು ಕೆಣಕಿದರು.

ಬೇಸರ: ಸಚಿವರು ಮತ್ತು ಅಧಿಕಾರಿಗಳ ಗೈರುಹಾಜರಿಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ ಅವರು, `ಸದಸ್ಯರ ದಿನಭತ್ಯೆಯನ್ನು ಈ ಸಚಿವರು ಮತ್ತು ಅಧಿಕಾರಿಗಳಿಂದ ವಸೂಲಿ ಮಾಡಬೇಕು' ಎಂದು ಎಚ್ಚರಿಸಿದರು.

ಜವಾಬ್ದಾರಿ ಬೇಡವೇ: `ಜನರಿಂದ ಕಾಡಿಬೇಡಿ ಮತ ಪಡೆದು ಆಯ್ಕೆಯಾಗಿ ಬಂದಿರುವ ಸಚಿವರಿಗೆ ಜವಾಬ್ದಾರಿ ಬೇಡವೇ?  ಚರ್ಚೆ ಇಲ್ಲದೆ ಬಜೆಟ್ ಅಂಗೀಕರಿಸುವುದು ತರವಲ್ಲ. ಕಾಟಾಚಾರಕ್ಕೆ ಸದನ ಏಕೆ ನಡೆಸಬೇಕು' ಎಂದು ರಮೇಶಕುಮಾರ್ ಪ್ರಶ್ನಿಸಿದರು. `ಈ ರೀತಿ ಆದರೆ ಸದನಕ್ಕೆ ಗೌರವ ಬರುವುದಿಲ್ಲ. ಸಮಯಕ್ಕೆ ಸರಿಯಾಗಿ ಸಚಿವರು ಬರಬೇಕು. ಅಧಿಕಾರಿಗಳಿಗೂ ಈ ಬಗ್ಗೆ ಸೂಚನೆ ನೀಡಿ' ಎಂದು ಸ್ಪೀಕರ್ ಸದನದಲ್ಲಿ ಹಾಜರಿದ್ದ ಸಚಿವರಿಗೆ ಸೂಚಿಸಿದರು.

ಸಚಿವರು ಮತ್ತು ಅಧಿಕಾರಿಗಳ ಗೈರುಹಾಜರಿಯನ್ನು ಪಕ್ಷಬೇಧ ಮರೆತು ಎಲ್ಲರೂ ಟೀಕೆ ಮಾಡಿದ್ದರಿಂದ ಸ್ಪೀಕರ್ ಅವರು ಸದನವನ್ನು 5 ನಿಮಿಷ ಮುಂದೂಡಿದರು.

ಮತ್ತೆ ಸೇರುವ ವೇಳೆಗೆ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಎಲ್ಲರನ್ನು ಕರೆತಂದು ಸದನದಲ್ಲಿ ಕೂರಿಸಿದ್ದರು. `ಗೂಟದ ಕಾರಿನವರು ಇಲ್ಲ ಎನ್ನುವ ಕಾರಣಕ್ಕೆ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ' ಎಂದು ಅಶೋಕ ವಿಧಾನಸಭೆಯ ಮೊಗಸಾಲೆಯಲ್ಲಿ ಹಾಸ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT