ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿ ಪದ್ಧತಿ ಯೋಜನೆ, ಯೋಚನೆ ಅಗತ್ಯ

Last Updated 10 ಅಕ್ಟೋಬರ್ 2012, 8:10 IST
ಅಕ್ಷರ ಗಾತ್ರ

ಬ್ರಹ್ಮಾವರ:  ಸಮಗ್ರ ಕೃಷಿಯಲ್ಲಿ ಲಾಭ ಪಡೆಯಬೇಕೆಂದರೆ ಭವಿಷ್ಯದ ಬಗ್ಗೆ ಯೋಜನೆ, ಯೋಚನೆ, ಕಾರ್ಯ ಯೋಜನೆ ಅತೀ ಅಗತ್ಯ ಮಾಡಬೇಕು ಎಂದು ಬೆಳ್ತಂಗಡಿಯ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಸೂರ್ಯ ಕೃಷಿಕರಿಗೆ ಸಲಹೆ ನೀಡಿದರು.

ಬ್ರಹ್ಮಾವರದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಅವರು ಮಂಗಳವಾರ ಲಾಭದಾಯಕ ಹೈನುಗಾರಿಕೆ ಮತ್ತು ಇತರೆ ಕೃಷಿ ಉಪ ಕಸುಬುಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.ಇರುವ ಕಡಿಮೆ ಕೃಷಿ ಭೂಮಿಯಲ್ಲಿ ನಿರಂತರ ಆದಾಯ ಬರುವ ಬೆಳೆಗಳನ್ನು ಬೆಳೆಸಬೇಕು. ಒಂದು ದಿನದಿಂದ ಹಿಡಿದು ಹತ್ತು ವರ್ಷಗಳ ನಂತರವೂ ಆದಾಯ ತರಬಲ್ಲ ವ್ಯವಸ್ಥೆಯ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು.

ಕೃಷಿಕ ಯಜಮಾನನಾಗಿ, ಕೃಷಿ ಕಾರ್ಮಿಕನಾಗಿ, ವ್ಯಾಪಾರಿಯಾಗಿ ಕೆಲಸ ನಿರ್ವಹಿಸಿದಲ್ಲಿ ಆರ್ಥಿಕವಾಗಿ ಮುಂದೆ ಬರಬಹುದು. ಪ್ರಾರಂಭದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಮೇಲೆ ತೆಂಗು, ಅಡಿಕೆ, ಬಾಳೆ, ಸುವರ್ಣಗಡ್ಡೆ, ಶುಂಠಿ, ಹುಲ್ಲಿನ ತಳಿ, ಅಜೊಲ್ಲಾ, ಮಲ್ಲಿಗೆ, ತರಕಾರಿ, ದ್ವಿದಳ ಧಾನ್ಯಗಳು, ಕೊಕ್ಕೋ, ಕಾಳುಮೆಣಸು, ಎರೆಹುಳ ಗೊಬ್ಬರ ಹೀಗೆ ನಿರಂತರವಾಗಿ 15ವರ್ಷಗಳ ಕಾಲ ಒಂದೊಂದೇ ಬೆಳೆ, ಕೃಷಿ ಉತ್ಪನ್ನಗಳನ್ನು ಬಳಸಿ, ಬೆಳೆಸಿ ಸಮಗ್ರ ಕೃಷಿಯನ್ನು ಅವಲಂಬಿಸಿ ಕೃಷಿಯಲ್ಲಿ ಸಂತೃಪ್ತಿ ಹೊಂದಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಉಡುಪಿ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಡಿ.ಪ್ರಭುಲಿಂಗು, ಡಾ.ಹನುಮಂತಪ್ಪ, ಡಾ.ಆನಂದ್, ನಾರಾಯಣ ಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ಪವರ್ ಪಾಯಿಂಟ್ .
ಪ್ರಗತಿಪರ ಕೃಷಿಕರಾದ ಮಯ್ಯ ಅವರು ತಮ್ಮ ಅನುಭವಗಳನ್ನು ಪವರ್ ಪಾಯಿಂಟ್ ಮೂಲಕ ತೋರಿಸಿ ಕೃಷಿಕರೂ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಸಾಬೀತುಪಡಿಸಿದರು. ಇನ್ನೊಂದೆಡೆ ಪ್ರತೀ ವರ್ಷ ಕೃಷಿ ಮೇಳದ ಸಂದರ್ಭ ನಡೆಯುತ್ತಿದ್ದ ವಿಚಾರಗೋಷ್ಠಿಗೆ ರೈತರೇ ಭಾಗವಹಿಸುತ್ತಿರಲಿಲ್ಲ. ಆದರೆ ಈ ಬಾರಿ ಕೃಷಿ ಮೇಳಕ್ಕೆ ಯಾವ ರೀತಿ ಆಸಕ್ತಿ ತೋರಿಸಿದ್ದರೋ ಅದೇ ರೀತಿ ವಿಚಾರಗೋಷ್ಠಿಗೂ ಅಷ್ಟೇ ಆಸಕ್ತಿ ರೈತರು ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT