ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಯೋಜನೆ ತಯಾರಿಗೆ ಕೋರ್ ಕಮಿಟಿ

Last Updated 4 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿ ತಡೆಯಲು ಸಮಗ್ರವಾದ ಯೋಜನೆಯೊಂದನ್ನು ರೂಪಿಸಿ ಸರ್ಕಾರಕ್ಕೆ ಕಳುಹಿಸಲು ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬೇಲೂರು ತಾಲ್ಲೂಕಿನ ಆನಗಳಲೆಯಲ್ಲಿ ಈಚೆಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೂಡಿಹಾಕಿದ್ದ ಗ್ರಾಮಸ್ಥರನ್ನು ಸಮಾಧಾನಪಡಿಸಲು ನೀಡಿದ ಭರವಸೆಯಂತೆ ಶನಿವಾರ ಸಭೆ ಆಯೋಜಿಸಲಾಗಿತ್ತು.

`ಜಿಲ್ಲೆಯ ಎಲ್ಲ ಭಾಗಗಳಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿಸ್ತಾರವಾಗಿ ಚರ್ಚಿಸಿ ಸಮಗ್ರವಾದ ವರದಿಯೊಂದನ್ನು ಸರ್ಕಾರಕ್ಕೆ ನೀಡಲು ಕೋರ್ ಕಮಿಟಿಯೊಂದನ್ನು ರಚಿಸಲಾಗುವುದು. ಮುಂದಿನ ಒಂದೆರಡು ದಿನಗಳಲ್ಲೇ ಈ ಕೋರ್ ಕಮಿಟಿ ಸಭೆ ಆಯೋಜಿಸಲಾಗುವುದು. ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ನಾಗರಿಕರು ಎಲ್ಲರ ಅಭಿಪ್ರಾಯಗಳನ್ನೂ ಸಂಗ್ರಹಿಸಿ ಸೂಕ್ತವಾದ ಒಂದು ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು~ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ತಿಳಿಸಿದರು.

ಸಭೆಯ ಆರಂಭದಲ್ಲಿಯೇ ಸರ್ಕಾರ, ಜಿಲ್ಲಾಡಳಿತ  ಹಾಗೂ ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪ್ಲಾಂಟರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಉದಯಕುಮಾರ್, `25 ವರ್ಷಗಳ ಅವಧಿಯಲ್ಲಿ ಆನೆ ದಾಳಿಗೆ ಜಿಲ್ಲೆಯಲ್ಲಿ 48 ಮಂದಿ ಬಲಿಯಾಗಿದ್ದಾರೆ. ಆದರೆ ಸರ್ಕಾರ ಆನೆಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವ ಯಾವುದೇ ಕ್ರಮ ಕೈಗೊಂಡಿಲ್ಲ.

ಹಲವು ಸಭೆಗಳಾಗಿದ್ದರೂ ಪರಿಣಾಮ ಶೂನ್ಯವಾಗಿರುವುದರಿಂದ ನಮಗೆ ಸಭೆಗಳ ಮೇಲಿನ ವಿಶ್ವಾಸವೇ ಕಳೆದುಹೋಗಿದೆ. ಜಿಲ್ಲೆಯಲ್ಲಿ ಆನೆಗಳ ಸಮಸ್ಯೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿ 2007ರಲ್ಲೇ ಅಯ್ಯಪ್ಪ ವರದಿಯನ್ನು ಸರ್ಕಾರಕ್ಕೆ ನೀಡಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ವರ್ಷ - ಎರಡು ವರ್ಷಕ್ಕೊಮ್ಮೆ ಒಂದೆರಡು ಆನೆಗಳನ್ನು ಹಿಡಿದು ಸ್ಥಳಾಂತರಿಸುವುದರಿಂದ ಸಮಸ್ಯೆ ಪರಿಹಾರ ವಾಗುವುದಿಲ್ಲ. ಶಾಶ್ವತ ಪರಿಹಾರ ಒದಗಿಸಲು ಬಯಸುವುದಾದರೆ ಅಯ್ಯಪ್ಪ ವರದಿ ಜಾರಿಮಾಡ ಲೇಬೇಕು~ ಎಂದರು. ಆನೆ ಹಾವಳಿ ಪ್ರದೇಶದಲ್ಲಿರುವ ರೈತರಿಗೆ ಗನ್ ಲೈಸೆನ್ಸ್ ನೀಡಲು ಅಡ್ಡಿ ಮಾಡಬಾ ರದರು ಎಂದೂ ಅವರು ಒತ್ತಾಯಿಸಿದರು.

ಸಭೆ ಅನಗತ್ಯ
`ಇಂಥ ಸಭೆಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ  ಮತ್ತು ಸಭೆಯ ಅಗತ್ಯವೂ ಇಲ್ಲ~ ಎಂದು ಪ್ರತಿಪಾದಿಸಿದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, `ಜಿಲ್ಲೆಯ ಆನೆ ಸಮಸ್ಯೆ ಅಂಗೈಯಷ್ಟೇ ಸ್ಪಷ್ಟವಾಗಿದೆ. ಏನಾಗಬೇಕು ಎಂಬುದನ್ನು ಅಯ್ಯಪ್ಪ ವರದಿ ಹೇಳಿದೆ, ಸರ್ಕಾರದ ಉನ್ನತ ಮಟ್ಟದಲ್ಲಿ ಹಲವು ಸಭೆಗಳಾಗಿವೆ, ವಿಧಾನಸೌಧದಲ್ಲಿ ಸಭೆಯಾಗಿದೆ. ವಿಧಾನಸಭೆಯಲ್ಲಿ ಹಲವು ಗಂಟೆಗಳ ಕಾಲ ಚರ್ಚೆಯಾಗಿದೆ. ಈ ಸಮಸ್ಯೆಗೆ ಸರ್ಕಾರವೇ ಪರಿಹಾರ ಕಂಡುಕೊಳ್ಳಬೇಕೇ ವಿನಾ ಜಿಲ್ಲಾಡಳಿತ ಏನು ಮಾಡಲೂ ಬರುವುದಿಲ್ಲ~ ಎಂದರು.

ಮುಖ್ಯಮಂತ್ರಿ ಅಧ್ಯಕ್ಷತೆ, ಸಂಸದ, ಮಾಜಿ ಪ್ರಧಾನಿ ದೇವೇಗೌಡ ಅವರ ಉಪಸ್ಥಿತಿಯಲ್ಲಿ ಒಂದು ಉನ್ನತ ಮಟ್ಟದ ಸಭೆ ಕರೆದು ಒಂದು ಸ್ಪಷ್ಟ ಯೋಜನೆ ರೂಪಿಸಿ ಕೇಂದ್ರದ ಮೇಲೆ ಒತ್ತಡ ಹೇರುವ ಕಾರ್ಯ ಮಾಡಬೇಕು. ಹಾವಳಿ ಇರುವ ಪ್ರದೇಶದ ರೈತರನ್ನು ಸ್ಥಳಾಂತರಿಸುವ ಬಗ್ಗೆ ಪ್ರಸ್ತಾಪ ಮಾಡಿರುವುದು ಹಾಸ್ಯಾಸ್ಪದ ಎನಿಸುತ್ತದೆ. ಒಂದೆಡೆ ರೈತರ ಸ್ಥಳಾಂತರದ ಬಗ್ಗೆ ಮಾತನಾಡುತ್ತೀರಿ, ಇನ್ನೊಂದೆಡೆ ದಟ್ಟ ಅರಣ್ಯದೊಳಗೆ ಜಲವಿದ್ಯುತ್ ಯೋಜನೆಗಳಿಗೆ ಪರವಾನಿಗೆ ನೀಡಿ ಆನೆಗಳು ಹೊರಗೆ ಬರುವಂತೆ ಮಾಡುತ್ತೀರಿ. ಈ ನೀತಿಯಿಂದ ಏನೂ ಸಾಧನೆ ಆಗಲ್ಲ. ಪಶ್ಚಿಮ ಘಟ್ಟದ ಅರಣ್ಯದಲ್ಲಿ ಎಲ್ಲ ವಿದ್ಯುತ್ ಯೋಜನೆಗಳನ್ನೂ ಸ್ಥಗಿತಗೊಳಿಸಬೇಕು~ ಎಂದು ಅವರು ವಾದಿಸಿದರು.

ಇದೇ ವಾದವನ್ನು ಪುಷ್ಟೀಕರಿಸಿದ ಮಲೆನಾಡು ಜನಪರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಕಿಶೋರ್, `ಆಲೂರು ಹಾಗೂ ಸಕಲೇಶಪುರಗಳ ಸಮಸ್ಯೆ ಸಂಪೂರ್ಣವಾಗಿ ಭಿನ್ನವಾದವು. ಆಲೂರಿನಲ್ಲಿರುವ ಆನೆಗಳನ್ನು ಸ್ಥಳಾಂತರಿಸುವುದೊಂದೇ ದಾರಿ. ಆದರೆ ಸಕಲೇಶಪುರದಲ್ಲಿ ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡು ಆನೆ ಕಾರಿಡಾರ್ ನಿರ್ಮಿಸಿದರೆ ಯಾರಿಗೂ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸಬಹುದು.

ರೈತರೂ ಸಹ ಸ್ವಯಂ ಪ್ರೇರಣೆಯಿಂದ ಜಮೀನು ನೀಡಲು ಮುಂದಾಗಿದ್ದಾರೆ. ಸುಮಾರು ಎರಡು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಕಂದಾಯ ಇಲಾಖೆಯ ಜಾಗವನ್ನೂ ಅರಣ್ಯ ಇಲಾಖೆಗೆ ವರ್ಗಾಯಿಸಬಹುದು. ಒಟ್ಟಾರೆ ಮೂರು ಸಾವಿರ ಎಕರೆಗೂ ಹೆಚ್ಚು ಅರಣ್ಯ ಲಭಿಸುತ್ತದೆ. ಇದು ಆನೆ ಕಾರಿಡಾರ್‌ಗೆ ಬಳಸಬಹುದು~ ಎಂದರು. ಪರಿಸರವಾದಿ ಎಚ್.ಪಿ. ಮೋಹನ್, ಅತ್ತಿಹಳ್ಳಿ ದೇವರಾಜ್ ಮತ್ತಿತರರು ಸಹ ಸಲಹೆ ಸೂಚನೆಗಳನ್ನು ನೀಡಿದರು.

ಬಸ್, ಬೀದಿ ದೀಪ ವ್ಯವಸ್ಥೆಯಾಗಲಿ
ಎಲ್ಲರ ಸಮಸ್ಯೆ, ಸಲಹೆ-ಸೂಚನೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, `ಈ ಸಭೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗದಿದ್ದರೂ ಜಿಲ್ಲಾಡಳಿತವೇ ಕಲ್ಪಿಸಬಹುದಾದ ಕೆಲವು ತಾತ್ಕಾಲಿಕ ಪರಿಹಾರಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಜನರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ನಿರ್ಲಕ್ಷಿಸಲಾಗುತ್ತಿದೆ.

ಆನೆ ಹಾವಳಿ  ಇರುವ ಕೆಲವು ಗ್ರಾಮಗಳಿಗೆ ಬಸ್ ಸಂಚಾರ ವಿಸ್ತರಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವುಬಾರಿ ಮನವಿ ಮಾಡಿದ್ದರೂ ಅವರು ಗಮನಹರಿಸಿಲ್ಲ. ಅವರಿಗೆ `ಆದಾಯದ ದೆವ್ವ~ ಹಿಡಿದಿದೆ. ಇತ್ತ ಗ್ರಾಮಗಳಲ್ಲಿ ಬೀದಿ ದೀಪಗಳನ್ನಾದರೂ ಕೊಡಿ ಅಂದ್ರೆ ಅದನ್ನೂ ಮಾಡುತ್ತಿಲ್ಲ. 

ಆನೆ ಹಾವಳಿ ಪ್ರದೇಶಕ್ಕೆ ವಿಶೇಷ ತಂಡಗಳನ್ನು ರಚಿಸಿ ಎಂದು ಅರಣ್ಯ ಇಲಾಖೆಗೆ ನೀಡಿರುವ ಸಲಹೆ ಸರಿಯಾಗಿ ಕಾರ್ಯಗತವಾಗಿಲ್ಲ. ಹಾನಿ ಅನುಭವಿಸಿದ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇಂಥ ಸಣ್ಣಪುಟ್ಟ ವಿಚಾರಗಳತ್ತ ಕೂಡಲೇ ಗಮನಹರಿಸಬೇಕು~ ಎಂದರು. ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿಎಫ್‌ಓ ಅಂಬಾಡಿ ಮಾಧವ, ಎಸಿಎಫ್ ಚಂದ್ರೇಗೌಡ ರೈತರು ಮತ್ತಿತರರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT