ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥನೀಯ ಪ್ರತಿಭಟನೆ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಂಡವಾಳಶಾಹಿ ವ್ಯವಸ್ಥೆಯ ಆರಾಧಕ ದೇಶವಾದ ಅಮೆರಿಕದಲ್ಲಿಯೇ ಅದರ ವಿರುದ್ಧ ಜನರು ದನಿ ಎತ್ತಿರುವುದು ವಿಶ್ವದ ಇತ್ತೀಚಿನ ಮಹತ್ವದ ಬೆಳವಣಿಗೆ. ಕಮ್ಯುನಿಸ್ಟ್ ದೇಶಗಳ ಕೇಂದ್ರೀಕೃತ ಸಮಾಜವಾದಿ ಆರ್ಥಿಕ ವ್ಯವಸ್ಥೆ ಕುಸಿದ ನಂತರ ಕುಣಿದು ಕುಪ್ಪಳಿಸಿದ ಅಮೆರಿಕ ನೇತೃತ್ವದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಪ್ರತಿಪಾದಕರ ಉಸಿರು ಇದೀಗ ಕಟ್ಟಿದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಿಂದ ಲಾಭ ಪಡೆದವರು ಕೆಲವೇ ಬಂಡವಾಳಶಾಹಿಗಳು, ಶ್ರೀಮಂತರು, ಬಹುರಾಷ್ಟ್ರೀಯ ಸಂಸ್ಥೆಗಳು, ಆರ್ಥಿಕ ವಹಿವಾಟು ಸಂಸ್ಥೆಗಳು ಎಂಬುದು ಇದೀಗ ಸಾಮಾನ್ಯ ಜನರಿಗೆ ಮತ್ತಷ್ಟು ಸ್ಪಷ್ಟವಾಗಿ ಗೊತ್ತಾಗಿದೆ.

ಹೀಗಾಗಿಯೇ ಅಮೆರಿಕದ ಆರ್ಥಿಕ ಚಟುವಟಿಕೆಯ ಮುಖ್ಯ ವಲಯವಾದ ನ್ಯೂಯಾರ್ಕ್‌ನ ವಾಲ್ ಸ್ಟ್ರೀಟ್‌ನಲ್ಲಿ ಸಾಮಾನ್ಯ ಜನರು ಕಳೆದ ತಿಂಗಳ 17ರಂದು ಆರಂಭಿಸಿದ ಪ್ರತಿಭಟನೆಯ ಅಲೆ (ವಾಲ್ ಸ್ಟ್ರೀಟ್ ಮುತ್ತಿಗೆ) ಇದೀಗ ವಿಶ್ವದ ನಾನಾ ನಗರಗಳಿಗೆ ಹಬ್ಬಿದೆ. ಇದು ಬಲಗೊಳ್ಳುವ ಮತ್ತಷ್ಟು ಸೂಚನೆಗಳು ಕಾಣುತ್ತಿವೆ. ಈ ಚಳವಳಿಗೆ ಜನರೇ ನಾಯಕರು. ಅವರ ಸಂಕಷ್ಟದ ಅನುಭವಗಳೇ ಮಾರ್ಗದರ್ಶಿ. ಈ ಪ್ರತಿಭಟನೆಯ ಗುರಿ ಸರಳವಾಗಿದೆ- ನಿರುದ್ಯೋಗಕ್ಕೆ, ಸಾಲದ ಬಿಕ್ಕಟ್ಟಿಗೆ ಒಟ್ಟಾರೆ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವ ಆರ್ಥಿಕ ವ್ಯವಸ್ಥೆ ಬದಲಾಗಬೇಕು. ಈ ಅವ್ಯವಸ್ಥೆಗೆ ಕಾರಣವಾಗಿರುವ ಬಂಡವಾಳಶಾಹಿ ಪದ್ಧತಿ, ಮಾರುಕಟ್ಟೆ ಆರ್ಥಿಕ ವ್ಯವಸ್ಥೆ, ಕೊಳ್ಳುಬಾಕ ಸಂಸ್ಕೃತಿ ನಾಶವಾಗಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸುತ್ತಿರುವುದು ಈ ಕಾಲದ ಅತಿ ದೊಡ್ಡ ಮನವರಿಕೆಯ ಪ್ರತೀಕವಾಗಿದೆ.

 ಇಡೀ ವಿಶ್ವ ಹಿಂದೆಂದೂ ಕಾಣದಂಥ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಮೆರಿಕ ಕಳೆದ ಐದು ವರ್ಷಗಳಲ್ಲಿ ಎರಡನೆಯ ಬಾರಿಗೆ ಆರ್ಥಿಕ ಕುಸಿತಕ್ಕೆ ಒಳಗಾಗಿದೆ. ಆರ್ಥಿಕ ಕುಸಿತದಿಂದ ಯೂರೋಪ್ ಎಚ್ಚೆತ್ತುಕೊಳ್ಳಬಹುದಾದ ಯಾವ ಸೂಚನೆಗಳೂ ಇಲ್ಲ.

ಯೂರೋಪಿನ ಹಲವು ದೇಶಗಳು ದಿವಾಳಿಯೆದ್ದಿವೆ. ಮುಂದೇನು ಮಾಡಬೇಕು ಎಂಬುದು ಗೊತ್ತಾಗದೆ ಪರದಾಡುತ್ತಿವೆ. ಈ ಬಂಡವಾಳಶಾಹಿ ವ್ಯವಸ್ಥೆಯಿಂದ ತೀವ್ರ ಆಘಾತಕ್ಕೊಳಗಾದವರು ನೂರರಲ್ಲಿ 99 ಜನ. ಈ ವ್ಯವಸ್ಥೆಯಿಂದ ಲಾಭ ಮಾಡಿಕೊಳ್ಳುತ್ತಿರುವವರು ಉಳಿದ ಶೇ ಒಂದು ಭಾಗದ ಜನ. ಒಂದು ರೀತಿಯಲ್ಲಿ ಈ ವ್ಯವಸ್ಥೆ ಅವರಿಗಾಗಿಯೇ ರೂಪಿತವಾಗಿದೆಯೇನೋ ಎನ್ನುವಂತಿದೆ.
 
ಈ ಆರ್ಥಿಕ ವ್ಯವಸ್ಥೆಯಿಂದ ನೂರರಲ್ಲಿ ಶೇ 99 ಭಾಗ ಜನರಿಗೆ ಅನುಕೂಲ ಇಲ್ಲ ಎನ್ನುವುದಾದರೆ ಅದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಜನರಿಗೆ ಒಳ್ಳೆಯದನ್ನು ಮಾಡಬಲ್ಲಂಥ ಮಾದರಿ ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕಾದ ಜವಾಬ್ದಾರಿ ಇದೀಗ ಎಲ್ಲರ ಮೇಲಿದೆ. ಆ ದಿಸೆಯಲ್ಲಿ ಅಭಿವೃದ್ಧಿ ದೇಶಗಳು ತುರ್ತಾಗಿ ಯೋಚಿಸಬೇಕಿದೆ.

ಭಾರತದ ಆರ್ಥಿಕ ಪರಿಸ್ಥಿತಿ ಅಮೆರಿಕದಷ್ಟು ಕೆಟ್ಟಿಲ್ಲ ಎಂಬುದೇ ಸಮಾಧಾನದ ಸಂಗತಿ. ಜಗತ್ತಿನ ಇಂದಿನ ಪರಿಸ್ಥಿತಿಯಿಂದ ಭಾರತ ಪಾಠ ಕಲಿಯಬೇಕು. ಭಾರತದ ಆಡಳಿತಗಾರರು ಇನ್ನಾದರೂ ಅಮೆರಿಕದ ಬಾಲ ಆಗುವುದಕ್ಕೆ ಹೋಗುವುದನ್ನು ಮತ್ತು  ಆದರ್ಶ ದೇಶವೆಂದು ಅದನ್ನು ಹಿಂಬಾಲಿಸುವುದನ್ನು ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT