ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಎದುರಿಸಿ ಯಶಸ್ಸು ಕಾಣುವವನೇ ಶರಣ

‘ವರ್ಷದ ಹರ್ಷ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Last Updated 2 ಜನವರಿ 2014, 10:21 IST
ಅಕ್ಷರ ಗಾತ್ರ

ಹೊಸದುರ್ಗ: ಜೀವನದಲ್ಲಿ ಎದುರಾಗುವ ಸಮಸ್ಯೆ ಎದುರಿಸಿ ಯಶಸ್ಸು ಕಾಣುವವನೇ ಶರಣ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶಿವಕುಮಾರ ಸ್ವಾಮೀಜಿ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವರ್ಷದ ಹರ್ಷ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು  ಮಾತನಾಡಿದರು.

ಹೊಸ ವರ್ಷವನ್ನು ಹಲವು ರೀತಿಯಲ್ಲಿ ಹಲವರು ರೆಸಾರ್ಟ್‌ಗಳಲ್ಲಿ ಆಚರಿಸುವುದು ಉಂಟು. ಆದರೆ, ರಂಗಭೂಮಿಯ ಆಕರ್ಷಣೆ ಎಲ್ಲ ಆಕರ್ಷಣೆಗಳಿಗಿಂತಲೂ ಮೀರಿದ್ದು. ಇದಕ್ಕೆ ಸಾಕ್ಷಿ ಇಲ್ಲಿ ನೆರೆದಿರುವ ದೂರದೂರಿನಿಂದ ಬಂದಿರುವ ಪ್ರೇಕ್ಷಕರು ಎಂದರು. ಮನುಷ್ಯ ಪ್ರಕೃತಿಯ ಮೇಲೆ ಮಾಡಿದಂಥ ಅನಾಚಾರದ ಫಲವೇ ಈ ವರ್ಷ ನಡೆದಂತಹ ಪ್ರಾಕೃತಿಕ ವಿಕೋಪಗಳಿಗೆ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.

ಸಚಿವ ಎಚ್.ಆಂಜನೇಯ ಮಾತನಾಡಿ, ಈ ವರ್ಷದ ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಶಿವದೇಶ ಸಂಚಾರ ತನ್ನದೇ ಆದ ಹೆಗ್ಗುರತನ್ನು ಮೂಡಿಸಿದೆ. ಇದು ದೇಶದ ಈ ವರ್ಷದ ಮಹತ್ತರ ಘಟನೆಗಳಲ್ಲಿ ಒಂದು. ಈ ವರ್ಷ ಜಗತ್ತು ಕಳೆದುಕೊಂಡ ಗಣ್ಯರಲ್ಲಿ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ನಿಧನರಾಗಿದ್ದು ದುಃಖದ ಸಂಗತಿ ಎಂದರು.

‘ಮರಣವೇ ಮಹಾನವಮಿ’ ನಾಟಕವನ್ನು ‘ಶಿವ ಶರಣ ಮಾದಾರ ಹರಳಯ್ಯ’ ಹೆಸರಿನಲ್ಲಿ ಶಿವಕುಮಾರ ಕಲಾಸಂಘ ಪ್ರದರ್ಶಿಸುವುದಾದರೆ ಆ ನಾಟಕವನ್ನು ರಾಜ್ಯದ ೩೦ ಜಿಲ್ಲೆಗಳಲ್ಲಿ ಪ್ರದರ್ಶನಗೊಳಿಸುವ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮಾಡಿಸಲಾಗುವುದು. ಹೊಸವರ್ಷ ನಾಡಿನ ಎಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಖ್ಯಾತ ರಂಗಸಂಘಟಕ  ಶ್ರೀನಿವಾಸ ಜಿ.ಕಪ್ಪಣ್ಣ,  ಚಿತ್ರದುರ್ಗ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿದರು. ಶಾಸಕ ಬಿ.ಜಿ.ಗೋವಿಂದಪ್ಪ, ಎಚ್.ಎಸ್. ನಾಗರಾಜು, ಜ್ಯೋತಿ, ದಾಕ್ಷಾಯಣಿ  ಇದ್ದರು. ದಾವಣಗೆರೆಯ ಸೌಮ್ಯಾ, ಬೆಂಗಳೂರಿನ ಆಶಾ, ಹಿರಿಯೂರಿನ ನಿರ್ಮಲಾ ಆಕರ್ಷಕ ನೃತ್ಯರೂಪಕಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT