ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಸಾದೊಳಲು

Last Updated 13 ಫೆಬ್ರುವರಿ 2013, 10:58 IST
ಅಕ್ಷರ ಗಾತ್ರ

ಮದ್ದೂರು: ರಸ್ತೆ, ಚರಂಡಿ ಸೇರಿದಂತೆ ಹಲವು ಸಮಸ್ಯೆಗಳನ್ನು ತಾಲ್ಲೂಕಿನ ಸಾದೊಳಲು ಗ್ರಾಮದ ಜನರು ನಿತ್ಯ ಎದುರಿಸುತ್ತಿದ್ದಾರೆ.

ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಸಾದೊಳಲು ಗ್ರಾಮದ ಜನಸಂಖ್ಯೆ 2 ಸಾವಿರ ದಾಟಿದೆ. ಇಲ್ಲಿ ಗ್ರಾಮ ಪಂಚಾಯಿತಿಯೂ ಇದೆ. ಐವರೂ ಸದಸ್ಯರು ಇದ್ದಾರೆ. ಆದರೆ, ಗ್ರಾಮದಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. 

ಗೆಜ್ಜಲಗೆರೆಯಿಂದ ಸಾದೊಳಲು ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆ ಡಾಂಬರು ಕಂಡು ದಶಕವೇ ಉರುಳಿದೆ. ಡಾಂಬರು ಕಿತ್ತು ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ರಸ್ತೆ ದುರಸ್ತಿಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

ಇಂದಿಗೂ ಗ್ರಾಮದಲ್ಲಿನ ಬಹುತೇಕ ಬೀದಿಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿಯೇ ಇಲ್ಲ. ಕೆಲವು ರಸ್ತೆಗಳಲ್ಲಿ ಈ ಹಿಂದೆ ಚರಂಡಿಗಳನ್ನು ನಿರ್ಮಿಸಲಾಗಿದೆ. ಅವುಗಳು ನಿರ್ವಹಣೆ ಕೊರತೆಯಿಂದಾಗಿ ಹೂಳು ತುಂಬಿಕೊಂಡಿವೆ. ನೀರು ನಿಂತಲ್ಲಿಯೇ ನಿಲ್ಲುವುದರಿಂದ ರೋಗಗಳ ತಾಣವಾಗುವ ಅಪಾಯವಿದೆ.

ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ, ಗ್ರಾಮದಲ್ಲಿರುವ ಮೇಜರ್ ವಾಟರ್ ಟ್ಯಾಂಕ್ ಶಿಥಿಲಗೊಂಡಿದೆ. ಶೀಘ್ರ ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಜತೆಗೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಜನರು ದೂರುತ್ತಾರೆ.

ಗ್ರಾಮದ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಗ್ರಾಮ ಪಂಚಾಯಿತಿಗೆ ಬರುವ ಬಹುತೇಕ ಹಣ ಕುಡಿಯುವ ನೀರಿನ ವಿದ್ಯುತ್ ಬಿಲ್‌ಗೆ ಸಂದಾಯವಾಗುತ್ತಿರುವ ಕಾರಣ ಮೂಲ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಪರದಾಡಬೇಕಾದ ಪರಿಸ್ಥಿತಿ ಒದಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT