ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಬೆಂಬಲ ಇದ್ದರೂ ನೇಕಾರರ ಬದುಕು ಕತ್ತಲೆಯಲ್ಲಿ

Last Updated 10 ಮೇ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯಲ್ಲಿ `ನೇಕಾರ~ರೆಂದು ಕರೆಸಿಕೊಳ್ಳುತ್ತಿರುವವರು ಹಲವಾರು ಮಗ್ಗಗಳ ಕಾರ್ಖಾನೆಗಳನ್ನು ನಡೆಸುತ್ತಿರುವ ಮಾಲೀಕರು. ಸರ್ಕಾರದಿಂದ  ಸಿಗುವ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಿರುವವರು ಈ ಮಗ್ಗಗಳ ಮಾಲೀಕರೇ. ಮಗ್ಗಗಳ ಮಾಲೀಕರೇ ನೇಕಾರರು.

ಅವರಿಗೆ ಮಗ್ಗಕ್ಕೆ ಲಾಳಿ ಕೂರಿಸಲು ಬಾರದು.ನೇಕಾರರ ಸಮಸ್ಯೆಯ ಅರಿವೇ ಇರದವರು. ಅಂಥವರಿಗೆ ಸರ್ಕಾರ `ನೇಕಾರ ರತ~್ನ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಡುವ ಶೇ.3ರ ಬಡ್ಡಿ ದರದ ಸಾಲ, ಯೂನಿಟ್ ಒಂದಕ್ಕೆ 1.25ರೂ ವಿದ್ಯುತ್ ಸೌಲಭ್ಯ, ಸಬ್ಸಿಡಿ, ಸಾಲ ಮನ್ನಾ ಅಲ್ಲದೇ ಇನ್ನೂ ಹಲವು ಸೌಲಭ್ಯಗಳ ನೇರ ಫಲಾನುಭವಿಗಳು ಇವರೇ.

ಆದರೆ  ನಿಜವಾದ ಸಮಸ್ಯೆ ಎದುರಿಸುತ್ತಿರುವವರು ಈ ಮಗ್ಗಗಳಲ್ಲಿ ದುಡಿಯುತ್ತಿರುವ ನೇಕಾರ ಕೂಲಿ ಕಾರ್ಮಿಕರು ಮತ್ತು ದೊಡ್ಡ ಮಾಲೀಕರನ್ನೇ ಅವಲಂಬಿಸಿ ಒಂದೋ ಎರಡೋ ಮಗ್ಗಗಳನ್ನು ಹಾಕಿಕೊಂಡು `ಸ್ವಂತ ಉದ್ಯೋಗ ಮಾಡುತ್ತಿದ್ದೇವೆ~ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವವರು.

ಬೆಳಗಾವಿ ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಗ್ಗಗಳಿವೆ. ಬೆಳಗಾವಿ ನಗರದಲ್ಲಿ 20ರಿಂದ ನೂರಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿರುವ ಕಾರ್ಖಾನೆಗಳು 200ಕ್ಕೂ ಹೆಚ್ಚಿವೆ. ಈ ಕಾರ್ಖಾನೆಗಳಲ್ಲಿ ಕೂಲಿ ಮಾಡುತ್ತಿರುವ 15 ಸಾವಿರಕ್ಕೂ ಹೆಚ್ಚಿನ ನೇಕಾರ ಕಾರ್ಮಿಕರಿದ್ದಾರೆ. ನೇಕಾರಿಕೆ ಅವರ ಕುಲ ಕಸುಬು. `ನೇಕಾರಿಕೆಯಲ್ಲಿ ಲಾಭವಿಲ್ಲ~ ಎಂದು ಬಿಂಬಿಸುತ್ತ ಕೂಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ.
 
ಕುಲ ಕಸುಬನ್ನು ಹೊರತುಪಡಿಸಿ ಬೇರೆ ಕೆಲಸ ಬಾರದ ಕಾರಣ ಕಾರ್ಮಿಕರು ಅದನ್ನೇ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.ಹಿಂದೆ ನೇಕಾರಿಕೆಯಲ್ಲಿ ಲಾಭವಿಲ್ಲದೆ ಸಾಲ ಮಾಡಿ ಹಾಕಿದ್ದ ಮಗ್ಗಗಳನ್ನು ಮಾರಿ ಗುಳೆ ಹೋಗುವ ಪರಿಸ್ಥಿತಿ ಇತ್ತು. ಆದರೆ ಇಲ್ಲಿನ ಸೀರೆಗಳಿಗೆ ಮುಂಬೈ, ಸೂರತ್ ಬೆಂಗಳೂರು ಸೇರಿದಂತೆ ವಿದೇಶಗಳಲ್ಲೂ ಬೇಡಿಕೆ ಇದೆ. `ನೇಕಾರಿಕೆ ಮುಗ್ಗರಿಸಿದೆ~ ಎಂದು ಹೇಳಿ ಹಲವು ಸೌಲಭ್ಯಗಳನ್ನು ಪಡೆದಿರುವ ಮಾಲೀಕರ ಉತ್ಪಾದನೆಗೆ ಈಗ ಹೆಚ್ಚಿನ ಬೇಡಿಕೆ ಇದೆ.

ನೇಕಾರ ಕಾರ್ಮಿಕರಿಗೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಸಸತ ಕೆಲಸ. ಊಟ, ತಿಂಡಿ ತಿನ್ನುವ ಸಮಯವೇ ವಿರಾಮ. ಹಿಂದೆ ನೇಕಾರಿಕೆಯ ಪೂರಕ ಕೆಲಸಗಳಾದ ಕಂಡಿಕೆ ಸುತ್ತುವುದು (ಸೀರೆಗಳನ್ನು ನೇಯಲು ಬೇಕಾದ ಎಳೆಗಳನ್ನು ಕೊಳವೆಯಾಕಾರದ ಒಂದು ಗಣಿಗೆ ನೂಲು ಸುತ್ತುವ ಕೆಲಸ), ಬುಟ್ಟಾ ಕತ್ತರಿಸುವುದಕ್ಕೆ ಪ್ರತ್ಯೇಕ ಕೆಲಸಗಾರರು ಇರುತ್ತಿದ್ದರು. ಆದರೆ ಈಗ ಸುತ್ತುವ ಯಂತ್ರವನ್ನು ಮಗ್ಗದ ಮೇಲೆ ಅಳವಡಿಸಲಾಗಿದೆ.

ಬುಟ್ಟ ಕತ್ತರಿಸುವುದು ಸೇರಿದಂತೆ ಈ ಕೆಲಸವೂ ಕಾರ್ಮಿಕರದೇ ಆಗಿದೆ. ಈ ಕೆಲಸವನ್ನು ಮಾಡುತ್ತಿದ್ದ ಮಹಿಳೆಯರು ಈಗ ನಿರುದ್ಯೋಗಿಗಳು. ಅವರು ಶ್ರೀಮಂತರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಾರೆ. ನೇಕಾರರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಇಷ್ಟು ದುಡಿದರೂ ಅವರಿಗೆ ಸಿಗುವ ಕೂಲಿಗೂ ಮಗ್ಗಗಳ ಮಾಲೀಕರು ಮತ್ತು ದಲ್ಲಾಳಿಗಳು ಪಡೆಯುವ ಲಾಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಒಂದು ಸೀರೆ ನೇಯುವ ಕಾರ್ಮಿಕನಿಗೆ 4ರಿಂದ 5ಗಂಟೆ ಬೇಕು. ಒಂದು ಸೀರೆ ನೇಯ್ದು ಕೊಟ್ಟರೆ ಸಿಗುವ ಕೂಲಿ 60ರಿಂದ 90ರೂ. ತಿಂಗಳಿಗೆ 25 ದಿನ ಕೆಲಸ ಮಾಡಿದರೆ ಕಾರ್ಮಿಕನೊಬ್ಬನಿಗೆ ಸಿಗುವ ತಿಂಗಳ ಪಗಾರ 4 ಸಾವಿರ ರೂ. ಅಷ್ಟರಲ್ಲಿ ನಾಲ್ಕೈದು ಮಂದಿ ಇರುವ ಅವನ ಸಂಸಾರ ನಡೆಯಬೇಕು. ಅವರು ನೇಯ್ದು ಕೊಟ್ಟ ಸೀರೆಗಳ ದರ ದೊಡ್ಡ ನಗರಗಳ ಶೋ ರೂಂಗಳಲ್ಲಿ ಅವರ ಕೂಲಿಯ 10 ರಿಂದ 20 ಪಟ್ಟು ಹೆಚ್ಚಾಗಿರುತ್ತದೆ. ದೇಶದ ಜನತೆಗೆ ಬಟ್ಟೆ ನೇಯುವ ಈ ಕಾರ್ಮಿಕರ ಬದುಕು ಇಲ್ಲಿ ಬೆತ್ತಲಾಗಿ ಹೋಗಿದೆ!

ಇಂತಹ ಆರ್ಥಿಕ ಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ, 12-13 ವರ್ಷ ತುಂಬುವುದರೊಳಗೆ ಮನೆ ಕೆಲಸದಲ್ಲಿ ಅವರನ್ನು ತೊಡಗಿಸಿಕೊಂಡು ನೆರವು ಪಡೆಯುತ್ತಾರೆ. ಹೆಣ್ಣು ಮಕ್ಕಳಿದ್ದರೆ ಮದುವೆ ಮಾಡಿ ಬಿಡುತ್ತಾರೆ. ಗಂಡು ಮಕ್ಕಳಿದ್ದರೆ ಅವರಿಗೆ ಒಂದೆರಡು ಮಗ್ಗ ಹಾಕಿಕೊಡುತ್ತಾರೆ.

ಇಷ್ಟೇ ಅವರ ಮಕ್ಕಳ ಭವಿಷ್ಯ. ಅದಕ್ಕಾಗಿ ಬದುಕನ್ನೇ  ಪಣಕ್ಕಿಟ್ಟು  ಹೆಣಗಾಡುತ್ತಿರುವ ಕುಟುಂಬಗಳೇ ಹೆಚ್ಚು. 10 ಜನ ಕಾರ್ಮಿಕರನ್ನು ಇಟ್ಟುಕೊಂಡು ಉತ್ಪಾದನೆ ಮಾಡುತ್ತಿರುವ ಎಲ್ಲ ಕಾರ್ಖಾನೆಗಳಿಗೂ ಕಾರ್ಖಾನೆ ಕಾನೂನು ಅನ್ವಯವಾಗುತ್ತದೆ. ಆದರೆ ತಮ್ಮದು  ಗುಡಿ ಕೈಗಾರಿಕೆ ಎಂದು ಹೇಳುತ್ತ ಕಾಯಿದೆ ಪ್ರಕಾರ ಸಿಗುವ ನೇಮಕಾತಿ ಪತ್ರ, ಹಾಜರಾತಿ ಪುಸ್ತಕ, 8ಗಂಟೆಯ ದುಡಿಮೆಯ ಸಮಯ ಇತ್ಯಾದಿ ಯಾವ ಸೌಲಭ್ಯವನ್ನೂ ನೀಡಲು ಮಾಲೀಕರು ನಿರಾಕರಿಸುತ್ತಾರೆ.

ತಮಿಳುನಾಡು ಮತ್ತು ಗುಜರಾತ್‌ಗಳಲ್ಲಿ ಕೂಲಿ ನೇಕಾರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿವೆ. ಅವುಗಳ ಉಸ್ತುವಾರಿಗೆ ಪ್ರತ್ಯೇಕ ಮಂಡಳಿಗಳಿವೆ. ಆ ರಾಜ್ಯಗಳಲ್ಲಿ ನೇಕಾರರ ಕನಿಷ್ಠ ಕೂಲಿ ಜಾರಿಯಲ್ಲಿದೆ. ನೇಕಾರರಿಗೆ ಸಿಗುವ ಕೂಲಿ 190ರಿಂದ 250 ರೂಗಳಷ್ಟೇ. ವಿಮೆ ಸೌಲಭ್ಯ, ಇಎಸ್‌ಐ, ಪಿಎಫ್ ಇತ್ಯಾದಿ ಸೌಲಭ್ಯಗಳೆಲ್ಲವನ್ನು ಅಲ್ಲಿನ ಕಾರ್ಮಿಕರು ಪಡೆಯುತ್ತಿದ್ದಾರೆ.

ತಮಿಳುನಾಡು ಒಂದರಲ್ಲೇ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಬಗೆಯ 54 ಕಲ್ಯಾಣ ಬೋರ್ಡ್‌ಗಳು ಕೆಲಸ ನಿರ್ವಹಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರನ್ನು ಹೊರತುಪಡಿಸಿ ಬೇರಾವುದೇ ಅಸಂಘಟಿತ ಕಾರ್ಮಿಕರ ಬೋರ್ಡ್‌ಗಳಿಲ್ಲ.
 
ಬೆಳಗಾವಿ ನಗರ ಪಾಲಿಯೆಸ್ಟರ್ ಸೀರೆಗಳಿಗೆ ಜನಪ್ರಿಯವಾಗಿದೆ. ಇಲ್ಲಿ ಹತ್ತಿ ಮತ್ತು ರೇಷ್ಮೆ ಸೀರೆಗಳಿಗೆ ಬಿಟ್ಟರೆ ಪಾಲಿಸ್ಟರ್ ಸೀರೆಗಳಿಗೆ ಕನಿಷ್ಠ ಕೂಲಿಯಿಲ್ಲ. ಅಲ್ಲದೆ ನಿಗದಿತ 8 ತಾಸಿನ ದುಡಿಮೆ ಸಮಯ, ವಾರ್ಷಿಕ ಶೇ 8.3ರಷ್ಟು ಬೋನಸ್ ಸಹ ನೇಕಾರ ಕಾರ್ಮಿಕರಿಗೆ ನೀಡುತ್ತಿಲ್ಲ.

ಈ ಬೇಡಿಕೆಗಳನ್ನಿಟ್ಟು 70ರ ದಶಕದಿಂದಲೂ ಹೋರಾಟಗಳು ನಡೆಯುತ್ತಿದ್ದರೂ ಯಾವುದೇ ಬದಲಾವಣೆ ಆಗಿಲ್ಲ. ಪ್ರಾರಂಭದಲ್ಲಿ ಉತ್ಸುಕರಾಗಿ ಚಳವಳಿಗಳಲ್ಲಿ ಪಾಲ್ಗೊಳ್ಳುವ ನೇಕಾರ ಕಾರ್ಮಿಕರು, ದಿನಕಳೆದಂತೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಮತ್ತೆ ಮಾಲೀಕರಿಗೆ ಸಲಾಂ ಹೊಡೆಯುತ್ತಲೇ ಬದುಕುವ ಅನಿವಾರ್ಯತೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT