ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ

Last Updated 15 ಫೆಬ್ರುವರಿ 2012, 10:10 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ಬಹುತೇಕ ಕಡೆ ಜನತೆಯನ್ನು `ಬರ~ ಕಾಡುತ್ತಿದ್ದರೂ; ಸರ್ಕಾರ ಅದರ ಗಂಭೀರತೆ ಅರಿಯದೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮಕ್ಕೆ ಖಾಸಗಿ ಭೇಟಿ ಹಿನ್ನೆಲೆಯಲ್ಲಿ ಮಂಗಳವಾರ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಎದುರಿಸುತ್ತಿರುವ ಬರದ ಬಗ್ಗೆ ಸದನದಲ್ಲಿ ಎರಡು ಬಾರಿ ಚರ್ಚೆ ನಡೆದಿದೆ. ಕೇಂದ್ರದ ಸಿ.ಆರ್.ಎಫ್ ನಿಧಿ 145 ಕೋಟಿ ಇದೆ. ಅದಕ್ಕೆ ರಾಜ್ಯ ಸರ್ಕಾರದ ಪಾಲಾದ 26 ಕೋಟಿ ಸೇರಿದಂತೆ ಒಟ್ಟು ರೂ.171 ಕೋಟಿ ವೆಚ್ಚ ಮಾಡಬೇಕಾಗಿತ್ತು. ಆದರೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಪಾವತಿ ಮಾಡದ ಕಾರಣ ಕೇಂದ್ರ ಸರ್ಕಾರದ ಹಣ ಬಿಡುಗಡೆಯಾಗದೆ ವಾಪಸ್ ಹೋಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ; ಅದರ ಯಶಸ್ಸು ಯುಪಿಎ ಸರ್ಕಾರಕ್ಕೆ ಸಿಕ್ಕುತ್ತದೆ ಎಂಬ ಏಕೈಕ ಕಾರಣದಿಂದ ಕೇಂದ್ರದ ಯೋಜನೆ ಅನುಷ್ಠಾನಗೊಳಿಸುತ್ತಿಲ್ಲ ಎಂದು ದೂರಿದರು.

ರಾಜ್ಯದ ಎಲ್ಲೆಡೆ ಗೋಶಾಲೆ ಆರಂಭವಾಗಿಲ್ಲ. ಆರಂಭವಾಗಿರುವ ಕಡೆ ಗೋವುಗಳಿಗೆ ಸಮರ್ಪಕವಾದ ಮೇವು ಇಲ್ಲವಾಗಿದೆ. ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾದ ಸಚಿವರು ಸದನದಲ್ಲಿ ಅಶ್ಲೀಲ ಚಿತ್ರ ನೋಡುತ್ತಾ ಕೂರುತ್ತಾರೆ. ಇಂಥ ಮಾನಗೆಟ್ಟ ಸಚಿವರನ್ನು ಈವರೆಗೂ ಕಂಡಿರಲಿಲ್ಲ ಎಂದರು. ಇಂತಹವರನ್ನು ಮನೆಗೆ ಕರೆಯುವುದಕ್ಕೂ ಮುಜುಗರವಾಗುತ್ತದೆ ಎಂದರು.

ಮುಖ್ಯಮಂತ್ರಿ ಸದಾನಂದಗೌಡರ ಕಾರ್ಯ ವೈಖರಿ ಖಂಡಿಸಿದ ಸಿದ್ದು, ಸಿಎಂ ಬರ ಎದುರಿಸುವಲ್ಲಿ ವಿಫಲರಾಗಿದ್ದಾರೆ. ಕನಿಷ್ಠ ಲೋಕಾಯುಕ್ತರನ್ನು ನೇಮಕ ಮಾಡುವಲ್ಲಿಯೂ ವೈಫಲ್ಯ ಹೊಂದಿದ್ದಾರೆ ಎಂದು ಟೀಕಿಸಿದರು.

ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್ ಮಾತನಾಡಿ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು, ಕಾಂಗ್ರೆಸ್ ಮುಖಂಡರಾದ ಸಿ.ಗಂಗಾಧರ್ ಯಕ್ಬಾಲ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಬ್ಯಾಟಪ್ಪ, ಪಾರ್ಥಸಾರಥಿ, ಅಬ್ದುಲ್ ಖಯ್ಯೂಂ, ಜಾಪ್ರೂಲ್ಲಾ, ಚಂಗೋಲಿ ನಾರಾಯಣಸ್ವಾಮಿ, ಅಂಚೆ ಅಶ್ವಥ್, ಪಿ.ಎಚ್.ನಾಗರಾಜ, ಗೋಪಾಲಗೌಡ, ವೈ.ಶಿವಕುಮಾರ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT