ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಮತ್ತು ರೋಮಾಂಚನದ ನಡುವೆ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ವೇಗ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?

ಆದರೆ ಆ ವೇಗದಲ್ಲಿರುವ ರೋಚಕತೆಯ ಸವಾಲು ಮಾತ್ರ ಜೀವಕ್ಕೆ ಕುತ್ತು ತರುವಂಥದ್ದು. ಹಾಗಾಗಿ ಸಾವು ಹಾಗೂ ಮೋಟಾರ್ ರೇಸ್ ಜೊತೆಜೊತೆಯಾಗಿಯೇ ಸಾಗುತ್ತಿರುತ್ತವೆ ಎನ್ನುವ ಮಾತಿದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮಕೈಗೊಂಡರೂ ವಿಧಿ ಎಲ್ಲಿಂದಲೋ ಬಂದು ಅಪ್ಪಳಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ರೇಸ್ ಭಾಷೆಯಲ್ಲಿ ವೇಗ ಹಾಗೂ ಅಪಾಯವನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ.

ಇಷ್ಟು ಹೇಳಲು ಕಾರಣ ಜಮ್ಮು ಮತ್ತು ಕಾಶ್ಮೀರದ ಮುಘಲ್ ಕಾರು ರ್ಯಾಲಿಯಲ್ಲಿ ಸಂಭವಿಸಿದ ದುರಂತ. ಅನಂತನಾಗ್ ಇಲ್ಲೆಯ ಸಿಮ್ತಾನ್ ಬಳಿ ನಡೆದ ದುರ್ಘಟನೆಯಲ್ಲಿ ಬೆಂಗಳೂರು ಮೂಲದ ಚಾಲಕ ಜಿತೇಂದ್ರ ಶುಕ್ಲಾ ಹಾಗೂ ನೇವಿಗೇಟರ್ ಆಶಿಶ್ ಮಹಾಜನ್ ಮೃತಪಟ್ಟಿದ್ದಾರೆ. ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಆಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ರೇಸಿಂಗ್ ವಲಯವಂತೂ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ.

`ರೇಸ್‌ಗಳು ರೋಚಕತೆಯಿಂದಲೂ ಕೂಡಿರಬೇಕು. ರಕ್ಷಣಾತ್ಮಕವಾಗಿಯೂ ಇರಬೇಕು ಎಂದರೆ ಹೇಗೆ?~ ಎಂದು ಪ್ರಶ್ನಿಸುತ್ತಾರೆ ರ್ಯಾಲಿಯ ಸಂಘಟಕರೊಬ್ಬರು. `ಆದರೆ ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ರೋಚಕತೆಯನ್ನು ಉಳಿಸಿಕೊಂಡು ಜೀವವನ್ನೂ ರಕ್ಷಿಸಿಕೊಳ್ಳಬಹುದು~ ಎಂಬುದು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಯೊಬ್ಬರ ತಿರುಗೇಟು. ಕೆಲ ರ್ಯಾಲಿಗಳಲ್ಲಿ ಸರಿಯಾದ ಸುರಕ್ಷಿತ ವಿಧಾನ ಪಾಲಿಸುವುದಿಲ್ಲ ಎನ್ನುವುದು ಮತ್ತೊಬ್ಬ ಚಾಲಕನ ಆರೋಪ. ತುರ್ತು ಸಮಯದಲ್ಲಿ ಕಾರಿನ ಹಾದಿಯನ್ನು ಗುರುತಿಸುವ ಜಿಪಿಎಸ್ ಪದ್ಧತಿಯನ್ನು ಕೆಲವೆಡೆ ಬಳಸುವುದಿಲ್ಲ ಎನ್ನಲಾಗುತ್ತಿದೆ. ಮುಂದಿನ ರೇಸ್‌ಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡುತ್ತಾರೆ ಭಾರತ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಫೆಡರೇಷನ್‌ನ ಮುಖ್ಯಸ್ಥ ವಿಕಿ ಚಾಂಧೋಕ್.

ಮೃತಪಟ್ಟ ಶುಕ್ಲಾ ಹಾಗೂ ಮಹಾಜನ್ ಎಂಡ್ಯುರೊ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅವರು ಗುರಿ ತಲುಪುವ ಸನಿಹದಲ್ಲಿದ್ದಾಗ ಈ ದುರಂತಕ್ಕೆ ಬಲಿಯಾಗಿದ್ದಾರೆ. 600 ಕಿ.ಮೀ. ದೂರದ ರೇಸ್ ಅವರ ದಣಿವಿಗೆ ಕಾರಣವಾಗಿರಬಹುದು ಎಂಬುದು ರೇಸಿಂಗ್ ವಲಯದ ಅಭಿಪ್ರಾಯ. ಏಕೆಂದರೆ ಸುಮಾರು 20 ಗಂಟೆಯ ಈ ರೇಸ್ ಹುಡುಗಾಟದ ವಿಷಯವಲ್ಲ.

ರೇಸಿಂಗ್ ವೇಳೆ ಕೆಲವೆಡೆ ಅಪಾಯಕಾರಿ ತಿರುವುಗಳು, ಪ್ರಪಾತಗಳು ಎದುರಾಗುತ್ತವೆ. ಮಳೆ, ಇಬ್ಬನಿ, ದಟ್ಟ ಕಾಡಿನಿಂದ ಕತ್ತಲು ಆವರಿಸಿಬಿಡುತ್ತದೆ. ರಾತ್ರಿ ವೇಳೆ ನಡೆಯುವ ಸ್ಪರ್ಧೆಗಳು ಹಾಗೂ ದೀರ್ಘ ದೂರದ ರೇಸ್‌ಗಳು ಇಂತಹ ಅಪಘಾತಕ್ಕೆ ಕಾರಣವಾಗುತ್ತವೆ. `ಟೈಮ್ ಸ್ಪೀಡ್ ಡಿಸ್ಟೆನ್ಸ್~ (ಟಿಡಿಎಸ್) ವಿಭಾಗದ ಸ್ಪರ್ಧೆಗಳು ಇನ್ನೂ ಅಪಾಯಕಾರಿ. ಈ ಮುನ್ನ `ರೇಡ್ ಡಿ ಹಿಮಾಲಯ ರೇಸ್~ನಲ್ಲೂ ಮೂವರು ಸಾವನ್ನಪ್ಪಿದ್ದ ಉದಾಹರಣೆ ಇದೆ. ಮೊಘಲ್ ರ್ಯಾಲಿ ವೇಳೆ ಬೆಂಗಳೂರಿನವರೇ ಆದ ಸನ್ನಿ ಸಿದ್ಧು ಹಾಗೂ ಪಿ.ವಿ.ಎಸ್.ಮೂರ್ತಿ ಕೂಡ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT