ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಕಾಶಿಗೆ `ಪುಷ್ಪಪ್ರಿಯರ' ಸಂಖ್ಯೆ ಕುಸಿತ

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆ ವಿವಾದ
Last Updated 20 ಜನವರಿ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು: `ಸಸ್ಯಕಾಶಿ'ಯೊಳಗೆ ವಾಹನ ನಿಲುಗಡೆ ಮಾಡಲು ಅವಕಾಶ ನೀಡಬೇಕು ಎಂದು `ಪುಷ್ಪಪ್ರಿಯರು' ಪೊಲೀಸರಲ್ಲಿ ವಿನಂತಿಸಿದರು. ಜಗಳ ಕಾಯ್ದರು. ಪೊಲೀಸರು ಮನವೊಲಿಸಲು ಯತ್ನಿಸಿದರು. ಹತಾಶರಾದ ಜನರು ಬೇಸರದಿಂದಲೇ ದೂರದ ವಾಹನ ನಿಲುಗಡೆ ತಾಣದತ್ತ ವಾಹನ ತಿರುಗಿಸಿದರು.

ನಗರದ ಲಾಲ್‌ಬಾಗ್ ಉದ್ಯಾನವನದ ಹೊರಭಾಗದಲ್ಲಿ ಕಳೆದ ಮೂರು ದಿನಗಳಿಂದ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯವಿದು. ರಜಾ ದಿನವಾದ ಭಾನುವಾರ ಜನರನ್ನು ಮನವೊಲಿಸುವ ವೇಳೆಗೆ ಪೊಲೀಸರು ಸುಸ್ತಾದರು. `ಪಾರ್ಕಿಂಗ್ ಅವಕಾಶ ನೀಡದೆ ಎಲ್ಲಿಗೆ ಹೋಗುತ್ತಾರೆ' ಎಂದು ಪ್ರವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. 

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ವಿಶೇಷ ಫಲಪುಷ್ಪ ಪ್ರದರ್ಶನದಲ್ಲಿ ಹೂವಿಗಿಂತಲೂ ಉದ್ಯಾನದೊಳಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸದಿರುವುದೇ ಚರ್ಚೆಯ ವಸ್ತುವಾಗಿದೆ. ತೋಟಗಾರಿಕಾ ಇಲಾಖೆಯ ಈ ನಿರ್ಧಾರ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಾಹನ ನಿಲುಗಡೆ ನಿಷೇಧದಿಂದಾಗಿ ಫಲಪುಷ್ಪ ಪ್ರದರ್ಶನಕ್ಕೆ ಬರುವವರ ಸಂಖ್ಯೆಯಲ್ಲೂ ಕುಸಿತ ಕಂಡಿದೆ.

ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು/ ಪ್ರವಾಸಿಗರು ತಮ್ಮ ವಾಹನಗಳನ್ನು ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು. ಜೆ.ಸಿ.ರಸ್ತೆಯ ಕಡೆಯಿಂದ ಬರುವ ವಾಹನಗಳು ಜೆ.ಸಿ. ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿ ಇರುವ, ಬಿಬಿಎಂಪಿಯ ಬಹು ಮಹಡಿಯ ವಾಹನ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

`ಕಳೆದ 3-4 ವರ್ಷಗಳಿಂದ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದೇನೆ. ಇಲ್ಲಿನ ಪರಿಕಲ್ಪನೆ ಚೆನ್ನಾಗಿದೆ. ಉದ್ಯಾನದೊಳಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸದೆ ಇರುವುದು ತಪ್ಪು. ಒಂದೂವರೆ ಕಿ.ಮೀ. ದೂರದಲ್ಲಿ ವಾಹನ ನಿಲ್ಲಿಸಿ ಗಾಜಿನಮನೆಗೆ ಬರುವಾಗ ಸುಸ್ತಾಗಿರುತ್ತದೆ. ಮತ್ತೆ ಹೂಗಳ ಚೆಲುವನ್ನು ಆಸ್ವಾದಿಸುವ ಆಸಕ್ತಿಯೇ ಉಳಿದಿರುವುದಿಲ್ಲ' ಎಂದು ಉತ್ತರ ಕನ್ನಡದ ಅಂಕೋಲಾದ ಗಜಾನನ್ ಬೇಸರ ವ್ಯಕ್ತಪಡಿಸಿದರು.

`ಲಾಲ್‌ಬಾಗ್ ಆಸುಪಾಸಿನ ಪ್ರದೇಶದಲ್ಲಿ ಸಾಮಾನ್ಯವಾಗಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಈಗಂತೂ ವಿಪರೀತವಾಗಿದೆ. ಈ ಸಂಚಾರ ದಟ್ಟಣೆಯಲ್ಲಿ ಮಕ್ಕಳು ಹಾಗೂ ವೃದ್ಧರು ಜತೆಗಿದ್ದರೆ ದೇವರೇ ಗತಿ. ಇಂತಹ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು' ಎಂದು ವಿದ್ಯಾರ್ಥಿ ನವೀನ್ ಅಭಿಪ್ರಾಯ ವ್ಯಕ್ತಪಡಿಸಿದರು.

`ಕಳೆದ ವರ್ಷಕ್ಕಿಂತ ಈ ಬಾರಿ ಜನಸಾಗರ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ' ಎಂದು ಕಾನ್‌ಸ್ಟೇಬಲ್ ಅರುಣ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. `ಪ್ರತಿವರ್ಷ ಉದ್ಯಾನದೊಳಗೆ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಈ ಬಾರಿ ವಾಹನ ನಿಲುಗಡೆಗೆ ಅವಕಾಶ ನೀಡದಿರುವುದು ಉತ್ತಮ ನಿರ್ಧಾರ. ಒಂದು ವರ್ಗದ ಜನರಿಗೆ ತೊಂದರೆಯಾಗಿರುವುದು ನಿಜ. ಆದರೆ, ಈ ನಿರ್ಧಾರದಿಂದ ಉಳಿದವರಿಗೆ ಉಪಕಾರವಾಗಿದೆ' ಎಂದು ಗೃಹಿಣಿ ಅರುಣಾ ಇಲಾಖೆಯ ನಿರ್ಧಾರವನ್ನು ಸಮರ್ಥಿಸಿಕೊಂಡರು.

`ಜನರ ಮನವೊಲಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಉದ್ಯಾನದೊಳಗೆ ಬಿಡಬೇಕು ಎಂದು ಹೆಚ್ಚಿನವರು ವಾದ ಮಾಡುತ್ತಾರೆ. ದೂರದಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆಯ ಈ ಮಾರ್ಗದಲ್ಲಿ ಕುಟುಂಬ ಸದಸ್ಯರೊಂದಿಗೆ ಉದ್ಯಾನಕ್ಕೆ ಬರುವುದೇ ದೊಡ್ಡ ಸಾಹಸದ ಕೆಲಸ. ಗಾಜಿನ ಮನೆಗೆ ತೆರಳುವಾಗ ಜನರಿಗೆ ಸುಸ್ತಾಗಿರುತ್ತದೆ. ಇಲ್ಲಿನ ವೈವಿಧ್ಯಮಯ ಹೂಗಳೇ ಅವರ ಮನಸ್ಸನ್ನು ಅರಳಿಸಬೇಕಿದೆ' ಎಂದು ಪಿಎಸ್‌ಐ (ಸಂಚಾರ) ಸತ್ಯನಾರಾಯಣ ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT