ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ತತ್ವದಡಿ ಪರಿಹಾರ

Last Updated 15 ಆಗಸ್ಟ್ 2011, 16:25 IST
ಅಕ್ಷರ ಗಾತ್ರ

ಬೆಂಗಳೂರು: `ನನ್ನ ಮುಂದಿರುವ ಎಲ್ಲ ಸವಾಲುಗಳಿಗೆ ಸಹಕಾರ ತತ್ವದಡಿ ಪರಿಹಾರ ಕಂಡುಕೊಳ್ಳುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೋಮವಾರ ಇಲ್ಲಿ ತಿಳಿಸಿದರು.             
 
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹೊರ ತಂದಿರುವ ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆಯನ್ನು ತಮ್ಮ ಗೃಹ ಕಚೇರಿ `ಕೃಷ್ಣಾ~ದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಮುಖ್ಯಮಂತ್ರಿ ಮುಂದೆ ಈಗ ಇರುವ ಸವಾಲುಗಳ ಸ್ವರೂಪವೇ ಬೇರೆ. ಅವು ಏನು ಎಂಬುದು ಮಾಧ್ಯಮದವರಿಗೂ ಗೊತ್ತಿದೆ. ಅವುಗಳನ್ನು ಸಹಕಾರ ತತ್ವದಡಿ ಪರಿಹರಿಸಲಾಗುವುದು~ ಎಂದು ಪರೋಕ್ಷವಾಗಿ ಪಕ್ಷದ ಅಂತಃಕಲಹವನ್ನು ಪ್ರಸ್ತಾಪಿಸಿದರು. `ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಅದೇ ರೀತಿ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸುತ್ತೇನೆ. ಸಹಕಾರ ಸಂಘಗಳ ಹಿನ್ನೆಲೆಯಿಂದಲೇ ರಾಜಕೀಯವಾಗಿ ಬೆಳೆದು ಬಂದಿರುವ ನನಗೆ ಸಹಕಾರ ತತ್ವಗಳಲ್ಲಿ ಅಪಾರವಾದ ನಂಬಿಕೆ ಇದೆ~ ಎಂದರು.

ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವುದರಿಂದಲೇ ಭಾರತದ ಮೇಲೆ ಆರ್ಥಿಕ ಹಿಂಜರಿತದ ಪರಿಣಾಮ ಬೀರಿಲ್ಲ. ಸಹಕಾರ ತತ್ವಗಳ ಪಾಲನೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸರ್ಕಾರ ಮೂರು ವರ್ಷಗಳಿಂದ ಸಹಕಾರ ವಲಯಕ್ಕೆ ವಿಶೇಷ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲೂ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ಸಾಹಿತಿ ದೇ.ಜವರೇಗೌಡ ಮಾತನಾಡಿ, ಸದಾನಂದ ಗೌಡ ಅವರಿಗೆ ಆರು ತಿಂಗಳ ಕಾಲಾವಕಾಶ ನೀಡಿ ನಂತರ ಅವರ ಕಾರ್ಯವೈಖರಿ ಬಗ್ಗೆ ವಿಮರ್ಶೆ ಮಾಡಬೇಕು. ಗಾಜಿನ ಮನೆಯಲ್ಲಿ ಕುಳಿತು, ಬೇರೆಯವರ ಮನೆಯ ಮೇಲೆ ಕಲ್ಲು ಎಸೆಯುವುದು ಒಳ್ಳೆಯದಲ್ಲ ಎಂದರು. ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ, ರಾಜ್ಯ ವಸತಿ ಮಹಾಮಂಡಲದ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT