ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂತಾ ವೇಷಧಾರಿಯ ಅಂತರಾಳ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಸಂಭ್ರಮದ ಹಬ್ಬ ಕ್ರಿಸ್‌ಮಸ್‌ಗೆ ನಗರ ರಂಗೇರಿದೆ. ಎಲ್ಲೆಲ್ಲೂ ಕ್ರಿಸ್‌ಮಸ್ ಟ್ರೀ, ಕ್ಯಾಂಡಲ್ಸ್, ಕ್ಯಾರಲ್ಸ್‌ಗಳದ್ದೇ ಕಲರವ. ಈ ಸಂತಸಕ್ಕೆ ರೆಕ್ಕೆ ಕಟ್ಟುವ ಸಾಂತಾಕ್ಲಾಸ್ ಕೂಡ ಮಕ್ಕಳನ್ನು ನಕ್ಕು ನಗಿಸಲೆಂದೇ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಉದ್ದದ ಬಿಳಿ ಗಡ್ಡ, ಅದೇ ಬಣ್ಣದ ಮೀಸೆ, ಹುಬ್ಬು. ಕೆಂಪು ನಿಲುವಂಗಿ. ಜೊತೆಗೆ ಬಿಳಿಯ ಪಟ್ಟೆ ಉಡುಗೆ ತೊಡುವ ಸಾಂತಾಗೆ ಇರುವುದು ದೊಡ್ಡ ಹೊಟ್ಟೆ. ಹಾಸ್ಯದ ಹೊನಲು ಹರಿಸುವ ನಡಿಗೆ, ತುಂಟತನದ ನೋಟ. ನೋಡಿದೊಡನೆ ಕಂಡವರ ಮುಖದಲ್ಲಿ ನಗು ಮೂಡಿಸುವಂಥ ರೂಪ.

ಅಂದಹಾಗೆ ಕ್ರಿಸ್‌ಮಸ್‌ಗೆಂದು ಆಯಾ ಚರ್ಚ್‌ನ ಪರಿಧಿಯಲ್ಲಿ ಆಯ್ಕೆಯಾಗಿ ಸಾಂತಾ ವೇಷ ಧರಿಸುವವರಿದ್ದಾರೆ. ಕೆಲವರು ಖುಷಿಗಾಗಿ ಸಾಂತಾ ಪಾತ್ರ ಧರಿಸಿ ಇತರರನ್ನು ಸಂತೋಷಪಡಿಸುತ್ತಾರೆ. ಪ್ರತಿ ವರ್ಷ ಸಾಂತಾ ಪಾತ್ರಧಾರಿಗಳೂ ಬದಲಾಗುವುದಿದೆ. ಆದರೆ ಇಲ್ಲೊಬ್ಬರು ನಾಲ್ಕು ವರ್ಷದಿಂದ ಸಾಂತಾ ವೇಷ ಧರಿಸಿ ಮಕ್ಕಳಿಗೆ ಖುಷಿ ಹಂಚುತ್ತಿದ್ದಾರೆ.

ಅವರೇ ವಿಜಯ್ ಪ್ರವೀಣ್. ಸಾಂತಾ ಅಂದರೆ ಬಿಳಿಯ ಗಡ್ಡದ ವಯಸ್ಸಾದ ವ್ಯಕ್ತಿ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಇವರಿಗಿನ್ನೂ 31 ವರ್ಷ. ಈಗಾಗಲೇ ನಾಲ್ಕು ಬಾರಿ ಸಾಂತಾಕ್ಲಾಸ್ ವೇಷ ಹಾಕಿದ ಅನುಭವ ಇವರದ್ದು. `ಸಾಂತಾ ಪಾತ್ರವನ್ನು ನಾನು ನಿರ್ವಹಿಸಬೇಕು ಎಂದು ಎಲ್ಲರೂ ಒತ್ತಾಯಿಸಿದಾಗ ನನಗೆ ಒಲ್ಲೆ ಎನ್ನಲಾಗಲಿಲ್ಲ. ಮೊದಲಿನಿಂದಲೂ ನಕ್ಕು ನಗಿಸುವುದು ನನ್ನ ಗುಣ. ಸಾಂತಾ ವೇಷದಲ್ಲಿ ನಾನೂ ಕುಣಿದು ಮಕ್ಕಳನ್ನೂ ಕುಣಿಸುವ ಅವಕಾಶ ಖುಷಿ ನೀಡಿತು; ಒಪ್ಪಿಕೊಂಡೆ' ಎನ್ನುತ್ತಾರೆ ವಿಜಯ್ ಪ್ರವೀಣ್.

ಆಕ್ಸೆಂಚರ್‌ನಲ್ಲಿ ಉದ್ಯೋಗಿಯಾಗಿರುವ ಇವರು ಸಾಂತಾ ಪಾತ್ರ ಧರಿಸುವುದಕ್ಕೂ ಮುನ್ನ ಮನೆಯಲ್ಲಿ ಸ್ವಲ್ಪ ತಯಾರಿ ಮಾಡಿಕೊಳ್ಳುತ್ತಾರಂತೆ. ಇದಕ್ಕೆ  ಅವರ ಪತ್ನಿ ದಿವ್ಯಾ ಸಹಾಯ ಮಾಡುತ್ತಾರೆ. ಸಾಂತಾ ರೀತಿ ನಡೆಯುವುದನ್ನು ಹೇಳಿಕೊಟ್ಟಿದ್ದು ಅವರೇ. ಕಾರ್ಯಕ್ರಮಕ್ಕೂ ಮುಂಚೆ ಅಭ್ಯಾಸ ಮಾಡುವುದು ಅವರೇ ಹಾಕಿಕೊಂಡ ನಿಯಮ.

`ಸಾಂತಾ ಆಗುವ ಖುಷಿಯೇ ಬೇರೆ. ಆ ಪಾತ್ರದಲ್ಲಿ ಎಲ್ಲರನ್ನೂ ನಗಿಸಬೇಕು. ನಾನು ಮಾಡುವ ಚೇಷ್ಟೆಗಳಿಗೆ ಜನರ ಮುಖದಲ್ಲಿ ನಗು ಮಿಂಚಿದಾಗ ಅವ್ಯಕ್ತ ಸಂತೋಷ ಸಿಗುತ್ತದೆ. ಹಾಗಾಗಿ ಸಾಂತಾ ವೇಷ ಧರಿಸಲು ಅವಕಾಶ ಸಿಕ್ಕಾಗ ಮನತುಂಬಿ ಒಪ್ಪಿಗೆ ಸೂಚಿಸುತ್ತೇನೆ' ಎನ್ನುತ್ತಾರೆ ವಿಜಯ್. ಮಕ್ಕಳಿಗಾಗಿ ಹೆಚ್ಚಾಗಿ ಕ್ಯಾಂಡೀಸ್, ಚಾಕೊಲೇಟ್ ಹಾಗೂ ಗೊಂಬೆಗಳನ್ನು ಇವರು ಉಡುಗೊರೆಯಾಗಿ ನೀಡುತ್ತಾರಂತೆ. ಎಲ್ಲರನ್ನು ನಗಿಸಲು ಅವರು ಹುಡುಕಿಕೊಂಡ ದಾರಿ ನೃತ್ಯ. ತಾವೂ ಕುಣಿಯುವುದರೊಂದಿಗೆ ನೆರೆದವರನ್ನೂ ಕುಣಿಸುವುದು ಅವರ ವಿಶೇಷತೆ.

ಇಂದಿರಾನಗರದ ಮೆಥಡಿಸ್ಟ್ ಚರ್ಚ್ ನಡೆಸುವ ಕಾರ್ಯಕ್ರಮದಲ್ಲಿ ಸಾಂತಾ ಆಗುವ ಇವರು ಕನಿಷ್ಠ ಎರಡು ಗಂಟೆ ಆ ಪಾತ್ರದಲ್ಲಿ ಮಿಂಚುತ್ತಾರೆ. ಮಾಡುವ ಕೆಲಸವನ್ನು ಆನಂದಿಸುವುದರಿಂದ ಇದು ಕಷ್ಟದ ಕೆಲಸ ಎನಿಸಿಲ್ಲವಂತೆ. `ಪ್ರತಿ ವರ್ಷವೂ ಕ್ರಿಸ್‌ಮಸ್ ಅನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಈ ಬಾರಿಯ ಕ್ರಿಸ್‌ಮಸ್ ಆಚರಣೆಗೆ ನನ್ನ ಮಗ ಕೂಡ ಸೇರಿಕೊಂಡಿದ್ದಾನೆ. ಸಾಂತಾ ಪಾತ್ರದಲ್ಲಿ ನಾನು ಹೇಗೆ ಇರುತ್ತೇನೆ ಎಂಬುದನ್ನು ಅವನೂ ನೋಡಲಿದ್ದಾನೆ. ಹೀಗಾಗಿ ನನ್ನ ಖುಷಿ ದುಪ್ಪಟ್ಟಾಗಿದೆ' ಎಂದು ಸಂತೋಷ ಹಂಚಿಕೊಂಡರು ವಿಜಯ್ ಪ್ರವೀಣ್.

ಸಾಂತಾಕ್ಲಾಸ್ ಇತಿಹಾಸ
ಸಾಂತಾಕ್ಲಾಸ್ ಸೇಂಟ್ ನಿಕೋಲಸ್ ಎಂದೂ ಪ್ರಖ್ಯಾತ. `ಫಾದರ್ ಕ್ರಿಸ್‌ಮಸ್' ಎಂದೂ ಕರೆಯುವ ವಾಡಿಕೆ ಇದೆ. ಹೆಚ್ಚಿನವರ ನಂಬಿಕೆ ಪ್ರಕಾರ ಡಿ.24ರ ಸಂಜೆ ಅಥವಾ ರಾತ್ರಿ ಸನ್ನಡತೆ ಇರುವ ಮಕ್ಕಳ ಮನೆಗೆ ಚಾಕೊಲೇಟ್ ಹಾಗೂ ಉಡುಗೊರೆಯನ್ನು ಸಾಂತಾ ತಂದುಕೊಡುತ್ತಾನೆ. ಉತ್ತಮ ನಡವಳಿಕೆ ಗುರುತಿಸಿ ಹರಸುವುದು ಅವನ ವಿಶೇಷತೆ. ಅಂದಹಾಗೆ, ಡಚ್ ಮೂಲದ `ಸಿಂಟೆರ್‌ಕ್ಲಾಸ್' ಪದವೇ `ಸಾಂತಾಕ್ಲಾಸ್' ಪದದ ಮೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT