ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆಯಿಂದ ದೇಶದ ಅಭಿವೃದ್ಧಿ ಸಾಧ್ಯ

Last Updated 3 ಆಗಸ್ಟ್ 2011, 8:40 IST
ಅಕ್ಷರ ಗಾತ್ರ

ಹೊಳಲ್ಕೆರೆ: ಸಾಕ್ಷರತೆಯಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅಕ್ಷರವಾಣಿ ಜಿಲ್ಲಾ ಸಂಯೋಜಕಿ ಮಮತಾ ಹೇಳಿದರು.ಸಾಕ್ಷರ ಭಾರತ್ ವತಿಯಿಂದ ಪಟ್ಟಣದ ವೀರಸೌಧದಲ್ಲಿ ಮಂಗಳವಾರ ಗ್ರಾ.ಪಂ. ಸದಸ್ಯೆಯರಿಗೆ ಏರ್ಪಡಿಸಿದ್ದ 18 ದಿನಗಳ ಸಾಕ್ಷರತೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರಗಳಿಗಿಂತ ಹಳ್ಳಿಗಳಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ ಇದೆ. ಈಗ ಶಿಕ್ಷಣಕ್ಕಾಗಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದರೂ, ಶೇ.100ರಷ್ಟು ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಜನ ಸಾಕ್ಷರರಾಗುವುದರಿಂದ ತಮ್ಮ ವೈಯಕ್ತಿಕ ಜೀವನ ಮಟ್ಟ ಸುಧಾರಿಸುತ್ತದೆ. ಮತ್ತೊಬ್ಬರಿಂದ ವಂಚನೆಗೆ ಒಳಗಾಗುವುದು ತಪ್ಪುತ್ತದೆ.

ಶಿಕ್ಷಣದೊಂದಿಗೆ ತರಬೇತಿಗಳನ್ನು ಪಡೆಯುವುದರಿಂದ ಸೂಕ್ತ ಉದ್ಯೋಗವನ್ನೂ ಪಡೆಯಬಹುದು. ಸುಧಾರಿತ ಕೃಷಿ, ಗೃಹ ಕೈಗಾರಿಕೆಗಳನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬಹುದು. ಸುಶಿಕ್ಷಿತರಾಗುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಗಳಿಸಬಹುದು ಎಂದರು.
ಕಾರ್ಯಾಗಾರದ ಆರಂಭದ ದಿನಗಳಲ್ಲಿ ಸದಸ್ಯೆಯರು ಕಲಿಕೆಯಲ್ಲಿ ನಿರಾಸಕ್ತಿ ತೋರಿಸಿದ್ದರು.

ಆದರೆ ಬರಬರುತ್ತಾ ಎಲ್ಲಾ ಸದಸ್ಯೆಯರೂ ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಅನಕ್ಷರಸ್ಥರು ಪಾಪಪ್ರಜ್ಞೆ ಇಟ್ಟುಕೊಳ್ಳಬಾರದು. ಸಾಕ್ಷರರನ್ನು ಕಂಡು ನಾವೂ ವಿದ್ಯಾವಂತರಾಗುವ ನಿರ್ಧಾರ ಕೈಗೊಳ್ಳಬೇಕು. ಕನಿಷ್ಠ ಕಲಿಕೆಗಳಾದ ಓದು, ಬರಹ, ಲೆಕ್ಕಾಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನವ ಸಾಕ್ಷರರಾದ ಅರೇಹಳ್ಳಿ ಗ್ರಾ.ಪಂ. ಸದಸ್ಯೆ ಶರಾವತಿ ಕಾರ್ಯಾಗಾರದ ಅನುಭವಗಳ ಕುರಿತು ಮಾತನಾಡಿ, ಕಾರ್ಯಾಗಾರದಲ್ಲಿ ಸಾಕ್ಷರತೆಯ ಬಗ್ಗೆ ತಿಳಿದುಕೊಂಡಿದ್ದೇನೆ. ಹಿಂದೆ ಪಂಚಾಯ್ತಿ ಸಭೆಗಳಲ್ಲಿ ಮಾತನಾಡಲು ಧೈರ್ಯ ಇರಲಿಲ್ಲ. ಅಲ್ಲಿನ ಅಂಕಿ ಅಂಶಗಳ ಬಗ್ಗೆಯೂ ಅರ್ಥವಾಗುತ್ತಿರಲಿಲ್ಲ. ಅನುದಾನ, ಹಣಕಾಸುಗಳ ಬಗ್ಗೆ ತಿಳಿಯುತ್ತಿರಲಿಲ್ಲ. ಈಗ ಆ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆ ಎಂದರು.

ಸಾಕ್ಷರ ಭಾರತ್ ಕಾರ್ಯಕ್ರಮದ ತಾಲ್ಲೂಕು ಅನುಷ್ಠಾನ ಅಧಿಕಾರಿ ಕೆ.ಎನ್. ರಂಗಸ್ವಾಮಿ, ಸಂಯೋಜಕಿ ಪ್ರೇಮಾ, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT