ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಿಸುವ ಛಲ ಇರುವವರು ಅಂಗವಿಕಲರಲ್ಲ

ಮಾಜಿ ಕ್ರಿಕೆಟ್ ಆಟಗಾರ ಬಿ.ಎಸ್. ಚಂದ್ರಶೇಖರ್ ಅಭಿಮತ
Last Updated 20 ಡಿಸೆಂಬರ್ 2012, 8:06 IST
ಅಕ್ಷರ ಗಾತ್ರ

ಮೈಸೂರು: ಸಾಧಿಸುವ ಛಲ ಮತ್ತು ಆಸಕ್ತಿ ಇರುವ ಯಾರೂ ಅಂಗವಿಕಲರಲ್ಲ. ಪರಿಶ್ರಮ ಮತ್ತು ಆತ್ಮ ವಿಶ್ವಾದಿಂದ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು  ಅಂತರರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಬಿ.ಎಸ್. ಚಂದ್ರಶೇಖರ್ (ಚಂದ್ರಾ) ಹೇಳಿದರು.

ಅಂಗವಿಕಲರ ಕಲ್ಯಾಣ ಮತ್ತು ಸಬಲೀಕರಣ ಮೈಸೂರು ಜಿಲ್ಲಾ ಪೇರೆಂಟ್ಸ್ ಸಂಸ್ಥೆ (ಎಂಇಪಿಎ ಇಡಿಡಿ), ದೈಹಿಕ ವಿಶೇಷ ಸಾಮರ್ಥ್ಯ ಉಳ್ಳವರ ಕ್ರೀಡೆ ಮತ್ತು ಸಾಂಸ್ಕೃತಿಕ ಅಕಾಡೆಮಿ ಮತ್ತು ರೋಟರಿ ಮಿಡ್‌ಟೌನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಿಯುಪಿಎಲ್ -2012 (ಕಾರ್ಪೊರೇಟ್ ಯುನಿಫೈಡ್ ಪ್ರೀಮಿಯರ್ ಲೀಗ್) ಟೂರ್ನಿಯನ್ನು ಬುಧವಾರ ಎಸ್‌ಜೆಸಿಇ ಮೈದಾನದಲ್ಲಿ ಅವರು ಉದ್ಘಾಟಿಸಿದರು.

`ನಾನು ಐದನೇ ವಯಸ್ಸಿನಲ್ಲಿ ಪೊಲಿಯೋ ಸಮಸ್ಯೆಯಿಂದ ಬಳಲಿದ್ದೇನೆ. ಆದರೆ ಅದನ್ನು ನಾನು ಮರೆತು ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ವಹಿಸಿದೆ. ಸಾಕಷ್ಟು ಪರಿಶ್ರಮಪಟ್ಟು ಅಭ್ಯಾಸ ಮಾಡಿದೆ. ಅದರಿಂದಾಗಿ ಇವತ್ತು ನಾನು ಈ ಸ್ಥಿತಿಯಲ್ಲಿದ್ದೇನೆ' ಎಂದು ಸ್ಮರಿಸಿದರು.

`ಎರಡು ವಾರಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಅಂಧರ ವಿಶ್ವಕಪ್ ಕ್ರಿಕೆಟ್ ನಡೆಯಿತು. ಅದರಲ್ಲಿ ಭಾರತ ತಂಡವು ವಿಶ್ವಕಪ್ ಗೆದ್ದುಕೊಂಡಿತ್ತು. ಅವರು ಆಡುತ್ತಿದ್ದ ರೀತಿ ಮತ್ತು ಅವರ ಆತ್ಮವಿಶ್ವಾಸ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್ ಸಮಯದಲ್ಲಿ ಬರುತ್ತಿದ್ದ ಚೆಂಡಿನ ಸದ್ದು ಎಲ್ಲರಿಗೂ ದೊಡ್ಡ ಸ್ಫೂರ್ತಿಯಾಗಿತ್ತು. ವಿಶೇಷ ಸಾಮರ್ಥ್ಯದ ವ್ಯಕ್ತಿಗಳೂ ಎಲ್ಲವನ್ನೂ ಸಾಧಿಸಬಲ್ಲ ಸಂದೇಶ ಆ ಸದ್ದಿನಲ್ಲಿತ್ತು' ಎಂದು ಬಣ್ಣಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ `ದೈಹಿಕ ವಿಶೇಷ ಸಾಮರ್ಥ್ಯ ಉಳ್ಳವರಿಗಾಗಿ ವಿಶೇಷ ತರಬೇತಿ ಶಾಲೆ ಆರಂಭಿಸಲು ಮುಡಾದಿಂದ ಸಿಎ ನಿವೇಶನ ಕೊಡಿಸಲು ಶಿಫಾರಸು ಮಾಡಲಾಗುವುದು' ಎಂದು ಭರವಸೆ ನೀಡಿದರು.

ರೋಟರಿ ಮಿಡ್‌ಟೌನ್ ಅಧ್ಯಕ್ಷ ಆರ್.ಎಸ್. ವಿಶ್ವನಾಥ್, ಸಿಯುಪಿಎಲ್ ಅಧ್ಯಕ್ಷ ಸತ್ಯನಾರಾಯಣ ನಾಡಿಗ, ಎಂಡಿಪಿಎಇಡಿಡಿ ಅಧ್ಯಕ್ಷ ಅರಕ್ಕಲ್ ಬಶೀರ್, ಎಸ್‌ಎಸಿಎಡಿಎ ಕಾರ್ಯದರ್ಶಿ ಅಮರೇಂದ್ರ ಹಾಜರಿದ್ದರು. ಮೂರು ದಿನಗಳ ಟೂರ್ನಿಯ ಪಂದ್ಯಗಳು ಗುರುವಾರದಿಂದ ನಡೆಯಲಿವೆ.
ಸಿಯುಪಿಎಲ್ ಕಾರ್ಯದರ್ಶಿ ಅನುರಾಧಾ ನಂದಕುಮಾರ್ ಮಾತನಾಡಿದರು. ಕೆ.ನರೇಂದ್ರನಾಥ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT