ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಕಡೆಗೆ ಮುಗಿದ ನಡಿಗೆ

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಕಾಪಾಡುವ ಭರವಸೆ ನೀಡಿದ ಕಾಂಗ್ರೆಸ್‌ನ ಹಿರಿಯ ಮುಖಂಡರು, ಉಳ್ಳಾಲದಲ್ಲಿ ಜನವರಿ 29ರಂದು ಆರಂಭವಾಗಿದ್ದ `ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ನಾಲ್ಕು ದಿನಗಳ ಪಾದಯಾತ್ರೆಯನ್ನು ಉಡುಪಿಯ ಮಲ್ಪೆಯಲ್ಲಿ ಶುಕ್ರವಾರ ಮುಕ್ತಾಯಗೊಳಿಸಿದರು.

`ನೈತಿಕ ಪೊಲೀಸ್‌ಗಿರಿ' ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ಸ್ವಾತಂತ್ರ್ಯ ಹರಣದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಮಾಡಿದ ಭಾಷಣ ಜನರಲ್ಲಿ ಜಾಗೃತಿ ಮೂಡಿಸುವ ಹಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದಕ್ಕೆಲ್ಲ ಕಡಿವಾಣ ಹಾಕುವ ಮತ್ತು ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ  ಕಾಪಾಡುವ ಭರವಸೆ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.

ಜಿಲ್ಲೆಯ ಪ್ರಮುಖ ಸಮುದಾಯಗಳಾದ ಮೊಗವೀರ, ಬಿಲ್ಲವ ಮುಂತಾದ ಹಿಂದುಳಿದ ಜಾತಿಗಳ ಜನರನ್ನು ಕಾಂಗ್ರೆಸ್‌ನತ್ತ ಸೆಳೆಯಲೂ ಮುಖಂಡರು ಯತ್ನಿಸಿದರು. ಬಿಜೆಪಿ ಯಾವತ್ತೂ ಹಿಂದುಳಿದವರ ಪರವಾಗಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಮಂಗಳೂರಿನ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಬದಲು ಮಾಡುವ ಶಕ್ತಿ ಇರುವ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೂ ನಾಂದಿ ಹಾಡಿದರು.

ಉಡುಪಿ ಜಿಲ್ಲೆಯ ಗಡಿ ಹೆಜಮಾಡಿಯನ್ನು ಪಾದಯಾತ್ರೆಯು ಜ. 31ರಂದು ಪ್ರವೇಶಿಸಿತ್ತು. ನೂರಾರು ಕಾರ್ಯಕರ್ತರು  ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ ಕೋರುವ ಮೂಲಕ ಬರ ಮಾಡಿಕೊಂಡಿದ್ದರು. ಕಾಪುವಿನಲ್ಲಿ ನಡೆದ ಸಾರ್ವಜನಿಕ ಸಭೆಗೆ ಜನ ಸಾಗರ ಹರಿದು ಬಂದಿತ್ತು. ಮಲ್ಪೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿಯೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT