ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಮಾಜಿಕ ಅಸಮಾನತೆ ಅಪಾಯಕಾರಿ'

Last Updated 24 ಡಿಸೆಂಬರ್ 2012, 5:35 IST
ಅಕ್ಷರ ಗಾತ್ರ

ಮದ್ದೂರು: ದಲಿತರಿಗೆ ಮೀಸಲಾತಿ ನೀಡುವುದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುವುದಿಲ್ಲವೇ? ಸಾಮಾಜಿಕ ಅಸಮಾನತೆ ತೊಡೆಯಲು ಮೀಸಲಾತಿಯೊಂದೇ ಮಾರ್ಗವೇ?, ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರದಲ್ಲಿಯೇ ಸರಿಯಾದ ಉತ್ತರವಿಲ್ಲವೇಕೇ?. ವೈಜ್ಞಾನಿಕ ಯುಗದಲ್ಲೂ ಮಾಧ್ಯಮಗಳು ಮೌಢ್ಯವನ್ನು ಬಿತ್ತುತ್ತಿವೆ ಏಕೆ? ಇದಕ್ಕೆ ಪರಿಹಾರ ಇಲ್ಲವೇ?...

ಇದು ಕೆ.ಹೊನ್ನಲಗೆರೆ ಕೌಟಿಲ್ಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಾ.ಕೃ.ಹೊನ್ನುಡಿ ಸಾಂಸ್ಕೃತಿಕ ಉತ್ಸವದಲ್ಲಿ ನಡೆದ `ಸಾಮಾಜಿಕ ಅಸಮಾನತೆಗೆ ನಾನು ಪ್ರಶ್ನೆಯೋ? ಉತ್ತರವೋ?' ಸಂವಾದ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕೇಳಿ ಬಂದ ಪ್ರಶ್ನೆಗಳು.

ರಾಜ್ಯದ ವಿವಿಧ ಆರು ಜಿಲ್ಲೆಗಳ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ್ದ 24 ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಪತ್ರಕರ್ತ ಬಿ.ಎಂ.ಹನೀಫ್, ಸಾಹಿತಿ ಡಾ.ತುಕರಾಂ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು.

ಡಾ.ಸಿದ್ಧಲಿಂಗಯ್ಯ ಮಾತನಾಡಿ, ಸಾಮಾಜಿಕ ಅಸಮಾನತೆ ತುಂಬಾ ಅಪಾಯಕಾರಿ. ಸಮಾಜ ಹಾಗೂ ಮನುಷ್ಯರ ಮನಸ್ಸನ್ನು ಒಡೆಯುವ ಶಕ್ತಿ ಈ ಸಾಮಾಜಿಕ ಅಸಮಾನತೆಗೆ ಇದೆ. ತುಳಿತಕ್ಕೆ ಒಳಗಾದವರನ್ನು ಮೇಲೇತ್ತುವ ನಿಟ್ಟಿನಲ್ಲಿ ಮೀಸಲಾತಿಯನ್ನು ಸರ್ಕಾರ ಜಾರಿಗೆ ತಂದಿದೆ. ಬಹಳ ಹಿಂದುಳಿದ ದಲಿತರಿಗೆ ಶೆ.18ರಷ್ಟು ಮಾತ್ರ ಮೀಸಲಾತಿ ನೀಡಿದೆ. ಇನ್ನುಳಿದಂತೆ ಶೆ.82ರಷ್ಟು ಮೀಸಲಾತಿಯನ್ನು ಪ್ರತಿಭಾವಂತರಿಗೆ ಮೀಸಲಿಟ್ಟಿದೆ. ಹೀಗಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುವುದೇ ನೀವೇ ಯೋಚಿಸಿ? ಎಂದು ಮರುಪ್ರಶ್ನೆ ಎಸೆದರು.

ಜಾತಿ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬುದ್ಧ, ಅಂಬೇಡ್ಕರ್, ರಾಮಮನೋಹರ್ ಲೋಹಿಯಾ, ಕುವೆಂಪು ಅವರ ವಿಚಾರಧಾರೆಗಳನ್ನು ಯುವಜನತೆ ಹೆಚ್ಚು ಓದಬೇಕು ಹಾಗೂ ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವಜನರು ಹೆಚ್ಚು ಜಾಗೃತಗೊಂಡಾಗ ಮಾತ್ರ ಈ ಅಸಮಾನತೆ ನಿವಾರಣೆಗೆ ಪ್ರೇರಣೆ ದೊರಕುತ್ತದೆ ಎಂದರು.

ವೈಜ್ಞಾನಿಕ ಬೆಳೆದಂತೆಯೇ ನಮ್ಮಲ್ಲಿ ಅಂತರ್ಗತವಾಗಿರುವ ಮೌಢ್ಯಗಳು ಹೆಚ್ಚು ಜಾಗೃತಗೊಂಡಿವೆ. ಮಡೆಸ್ನಾನದಂತೆ ಅನಿಷ್ಟ ಮೌಢ್ಯ ಪದ್ಧತಿಗಳು ಇಂದಿಗೂ ಜೀವಂತವಾಗಿವೆ. ಇಂತಹ ಮೌಢ್ಯಗಳನ್ನು ಕೆಲವು ಮಠಾಧೀಶರು ಬೆಂಬಲಸುತ್ತಿದ್ದರೆ, ಕೆಲವು ಮಠಾಧೀಶರು ಇದರ ವಿರುದ್ಧ ಧ್ವನಿ ಎತ್ತಿರುವುದು ಸ್ವಲ್ಪವಾದರೂ ಸಮಾಧಾನ ತಂದಿದೆ ಎಂದು ಹೇಳಿದರು.  ಸಾಹಿತಿ ಡಾ.ತುಕರಾಂ ಮಾತನಾಡಿ, ಮೀಸಲಾತಿಯಿಂದಲೇ ಹಿಂದುಳಿದವರ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎನ್ನುವುದು ಒಂದು ಅವಕಾಶವೇ ಹೊರತು, ಯಾರೇ ಯಾವುದೇ ಮಟ್ಟಕ್ಕೆ ಬೆಳೆಯಲು ಅವರೊಳಗಿನ ಅಂರ್ತಗತ ಪ್ರತಿಭೆ, ಇಚ್ಛಾಶಕ್ತಿಯೇ ಮೂಲಪ್ರೇರಣೆ ಎನ್ನುವುದನ್ನು ಯಾರೂ ಮರೆಯಬಾರದು ಎಂದರು.

ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಮೀಸಲಾತಿ ಜಾರಿಗೊಳಿಸಿದ್ದರಿಂದ ಜಾತಿ ಅಸಮಾನತೆ ಸಂಪೂರ್ಣ ನಿವಾರಣೆಯಾಗಲಿದೆ ಎಂಬುದು ಕೇವಲ ಮಾತಷ್ಟೆ ಮಾತ್ರ. ಇಂದಿಗೂ ನಗರ ಪ್ರದೇಶಗಳಲ್ಲಿ ಜಾತಿ ಕೇಳಿ ಬಾಡಿಗೆ ಮನೆ ನೀಡುವ ಪರಿಸ್ಥಿತಿ ಇದೆ.

ಸಾಮಾಜಿಕ ಅಸಮಾನತೆ ತೊಡೆಯಲು ಕೇವಲ ಮೀಸಲಾತಿಯೊಂದೆ ಮಾರ್ಗ ಅಲ್ಲ. ಇದಕ್ಕಿಂತಲೂ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಪ್ರತಿಯೊಬ್ಬರು ಸಕರಾತ್ಮಕವಾಗಿ ಚಿಂತನೆ ನಡೆಸಬೇಕಿದೆ. ಅದರಲ್ಲೂ ನಿಮ್ಮಂತಹ ಯುವ ಮನಸ್ಸುಗಳು ಈ ನಿಟ್ಟಿನಲ್ಲಿ ಸಶಕ್ತವಾದ ನಿರ್ಧಾರ ಕೈಗೊಳ್ಳಬೇಕಿದೆ. ಬದಲಾವಣೆ ನಿಮ್ಮಿಂದಲೇ ಆರಂಭಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ದೃಶ್ಯ ಮಾಧ್ಯಮಗಳು ಮೌಢ್ಯವನ್ನು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಜನರಲ್ಲಿ ಬಿತ್ತುತ್ತಿವೆ. ನಿಮ್ಮೆಲ್ಲ ಕನಸುಗಳು ಈಡೇರಲು ಸರ್ಕಾರ ಮತದಾನದ ಹಕ್ಕನ್ನು 15ವರ್ಷಗಳಿಗೆ ಇಳಿಕೆ ಮಾಡಬೇಕಿದೆ. ಈ ಮೂಲಕ ನಿಮ್ಮಳಗಿನ ಸಾಮಾಜಿಕ ಬದಲಾವಣೆಯ ಆಶಯಗಳಿಗೆ ಶಕ್ತಿ ತುಂಬಬೇಕಿದೆ ಎಂದರು.

ಸಂಸ್ಥೆ ಕಾರ್ಯಾಧ್ಯಕ್ಷ ಎನ್.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಕಾರ್ಯಕ್ರಮದ ಆಶಯಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ, ಕಾರ್ಯದರ್ಶಿ ಪಿ.ಚಂದ್ರಕಲಾ ರಾಮಕೃಷ್ಣ, ಸಂಸ್ಥೆಯ ಆಡಳಿತಾಧಿಕಾರಿ ಶಿವಣ್ಣೇಗೌಡ, ಸಂಯೋಜನಾಧಿಕಾರಿ ಕೆ.ಎಸ್.ಮಹಾದೇವೇಗೌಡ, ಟ್ರಸ್ಟಿಗಳಾದ ಶಿವಲಿಂಗೇಗೌಡ, ಕೆಂಪಣ್ಣ, ಗ್ರಾಮೀಣ ಸಂಸ್ಥೆ ಅಧ್ಯಕ್ಷ ಬಿ.ರಾಜು, ಶ್ರೀಧರಮೂರ್ತಿ, ಪ್ರಾಂಶುಪಾಲ ಲೋಕಪ್ರಕಾಶನಾರಾಯಣ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಭಾಷಣ ಸ್ಪರ್ಧೆ ವಿಜೇತರು: ಬಾಲಕಿಯರ ವಿಭಾಗ- ಬಿ.ಸ್ವಾತಿ(ಪ್ರಥಮ), ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜು, ಮೈಸೂರು. ತೇಜಶ್ರೀ(ದ್ವಿತೀಯ) ಬಿ.ಜಿ.ಎಸ್.ಪದವಿ ಪೂರ್ವ ಕಾಲೇಜು, ಬೇಲೂರು, ಹಾಸನಜಿಲ್ಲೆ. ಬಾಲಕರ ವಿಭಾಗ- ಎನ್.ಮನು(ಪ್ರಥಮ), ಶ್ರೀಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಮರಿಯಾಲ, ಚಾಮರಾಜನಗರಜಿಲ್ಲೆ.

ಆರ್.ಪೃಥ್ವಿರಾಜ್(ದ್ವಿತೀಯ), ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು, ಕೆ.ಆರ್.ನಗರ, ಮೈಸೂರು. ಬಿ.ಮಹಾಲಕ್ಷ್ಮಿ, ಸರ್ಕಾರಿ ಪದವಿ ಪೂರ್ವಕಾಲೇಜು, ಶಾಂತಿಗ್ರಾಮ, ಹಾಸನ, ಎಲ್.ಎಸ್.ಪೂರ್ಣಿಮ, ಕೌಟಿಲ್ಯ ಪದವಿ ಪೂರ್ವ ಕಾಲೇಜು, ಕೆ.ಹೊನ್ನಲಗೆರೆ, ಮಂಡ್ಯ ಜಿಲ್ಲೆ.(ಸಮಾಧಾನಕರ ಬಹುಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT