ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಪದವಿಗಳಲ್ಲೂ ವೃತ್ತಿ ಶಿಕ್ಷಣದ ಅವಕಾಶ

Last Updated 20 ಜೂನ್ 2012, 5:10 IST
ಅಕ್ಷರ ಗಾತ್ರ

ಬಳ್ಳಾರಿ: `ಎಂಜಿನಿಯರಿಂಗ್, ಮೆಡಿಕಲ್, ಬಿಬಿಎಂ, ಬಿಸಿಎ ಮತ್ತಿತರ ಪದವಿಗಳನ್ನು ಪಡೆದರೆ ಮಾತ್ರ ಉದ್ಯೋಗ ದೊರೆಯುತ್ತದೆ. ಅಂತಹ  ಅಭ್ಯರ್ಥಿಗಳಿಗೆ ಮಾತ್ರ ಬೇಡಿಕೆ ಇದೆ ಎಂಬ ನಂಬಿಕೆ ಯುವ ಸಮುದಾಯದಲ್ಲಿ ಮನೆ ಮಾಡಿದೆ~.

`ಜಾಗತೀಕರಣ ಮತ್ತು ಉದಾರೀಕರಣ ನೀತಿಯಿಂದಾಗಿ ಪ್ರತಿ ಕ್ಷೇತ್ರದಲ್ಲೂ ವಿಪುಲ ಉದ್ಯೋಗಾವಕಾಶಗಳಿವೆ. ಬಗ್ಗೆ ಸೂಕ್ತ ತಿಳಿವಳಿಕೆ ತರಬೇತಿ ಹೊಂದಿದವರ ಪಾಲಾಗುತ್ತವೆ. ಆದರೆ, ಆ ಕುರಿತು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಕೊರತೆಯೇ ಯುವಕರನ್ನು ಕಾಡುತ್ತಿದೆ~.

ಪದವಿಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸಹೊಸ ಕೋರ್ಸ್‌ಗಳನ್ನು ಪರಿಚಯಿಸಿರುವ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜಪ್ಪ ಹೊಸಮನೆ ಅವರು ಹೇಳುವ ಮಾತಿದು.

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಕರೆಯಿಸಿಕೊಳ್ಳುವ ಪಿಯುಸಿಯ ನಂತರ ಮುಂದೇನು? ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಸೂಕ್ತ ಮಾರ್ಗದರ್ಶನ ನೀಡಿದರೆ ಮೂರು ವರ್ಷಗಳ ಪದವಿ ಶಿಕ್ಷಣದ ನಂತರ ಸೂಕ್ತ, ಕೈತುಂಬ ಸಂಬಳ ದೊರೆಯುವ ನೌಕರಿ ಪಡೆಯಬಹುದಾಗಿದೆ. ಆದರೆ, ಅನೇಕರು ವೃತ್ತಿಪರ ಪದವಿಗಳೆಂದು ಕರೆಯಿಸಿಕೊಳ್ಳುವ ಕೋರ್ಸ್‌ಗಳನ್ನು ಬಿಟ್ಟು ಬಿಎ, ಬಿಕಾಂಗೇ ಜೋತು ಬೀಳುವುದರಿಂದ ನಿರುದ್ಯೋಗ ಸಮಸ್ಯೆ ತಲೆದೋರುತ್ತದೆ. ಪದವಿ ಪಡೆದರೂ ಪ್ರಯೋಜನವಿಲ್ಲ ಎಂಬ ಸ್ಥಿತಿಯನ್ನು ಯುವಸಮೂಹ ಎದುರಿಸುವಂತಾಗುತ್ತದೆ ಎಂಬುದು ಅವರ ಹೇಳಿಕೆ.

ಮೂರು ವರ್ಷದ ಓದು ಮುಗಿದ ಕೂಡಲೇ ಉದ್ಯೋಗವನ್ನು ದೊರಕಿಸಿಕೊಡುವ ಪದವಿಗಳು ಯಾವುವು? ಎಂಬುದನ್ನೂ ಅವರು ವಿವರಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಪದವಿ (ಬಿಕಾಂ)ಗೆ ಬೇಡಿಕೆ ಹೆಚ್ಚಿದೆ. ಖಾಸಗಿ  (ಕಾರ್ಪೋರೇಟ್) ವಲಯದಲ್ಲಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ಲೆಕ್ಕಶಾಸ್ತ್ರದಲ್ಲಿ ಪರಿಣತಿ ಹೊಂದಿದವರು,  ಚಾರ್ಟರ್ಡ್ ಅಕೌಂಟಂಟ್‌ಗಳು ಇಲ್ಲಿ ಉತ್ತಮ ಸಂಬಳ, ಸೌಲಭ್ಯ ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳ ಯುವಕರೂ ಈ ಅವಕಾಶಗಳನ್ನು ಪಡೆಯಬಹುದಾಗಿದೆ ಎಂಬುದು ಅವರ ಕಳಕಳಿ.

ಅನೇಕರು ಕೇವಲ ಪದವಿ ಓದಿದರೆ ಪ್ರಯೋಜನವಿಲ್ಲ ಎಂಬ ಕಾರಣದಿಂದ ನಂತರ ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಪದವಿಯನ್ನೂ ಪಡೆಯುತ್ತಾರೆ. ಪದವಿ ಓದಿದವರಿಗೆಲ್ಲ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರಗಳಲ್ಲಿ ಸ್ನಾತಕೋತ್ತರ ಪದವಿ ಕಲಿಯಲು ಅವಕಾಶಗಳು ಸಿಗುವುದು ವಿರಳ. ಅಲ್ಲದೆ, ಉದ್ಯೋಗಾವಕಾಶಗಳೂ ವಿರಳ. ಅದಕ್ಕೆಂದೇ ವೃತ್ತಿಶಿಕ್ಷಣಕ್ಕೆ ಮಹತ್ವ ಬಂದಿದೆ. ಉದ್ಯೋಗ ಖಚಿತವಾಗಿ ದೊರಕಿಸಿಕೊಡುವ ಪದವಿಗಳು ಸಾಕಷ್ಟಿದ್ದು, ಪ್ರಥಮ ದರ್ಜೆ ಕಾಲೇಜುಗಳೂ ಅಂತಹ ಕೋರ್ಸ್‌ಗಳನ್ನು ಆರಂಭಿಸುವತ್ತ ಆಲೋಚಿಸಬೇಕು ಎಂದೂ ಅವರು ಹೇಳುತ್ತಾರೆ.

ಮಾಧ್ಯಮ ಕ್ಷೇತ್ರವೂ ವಿಸ್ತೃತಗೊಂಡಿದೆ. ಪತ್ರಿಕೋದ್ಯಮದಲ್ಲೂ ಬೆಳವಣಿಗೆಗಳಾಗಿದ್ದು, ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ. ವರದಿಗಾರಿಕೆಯಲ್ಲಿ ಆಸಕ್ತಿ ಇರುವವರು, ಬರೆಯಲು ಬರುವವರು ಈ ಕ್ಷೇತ್ರದಲ್ಲಿ ಕಾಪಿ ಎಡಿಟರ್‌ಗಳಾಗಿ ಕೆಲಸ ಪಡೆಯಬಹುದಾಗಿದೆ. ಸ್ಫುಟವಾಗಿ ಮಾತನಾಡಲು ಬರುವವರೂ ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕರಾಗಿ, ವರದಿಗಾರರಾಗಿ ನೌಕರಿ ಗಿಟ್ಟಿಸಿಕೊಳ್ಳಬಹುದು.

ಇದಕ್ಕೆ ಭಾಷೆಯ ಮೇಲೆ ಹಿಡಿತ ಸಾಧಿಸಬೇಕಾದದ್ದು ಅಗತ್ಯ. ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಇತಿಹಾಸ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಪ್ರಚಲಿತ ವಿದ್ಯಮಾನಗಳ ಕುರಿತು ಅರಿತವರಿಗೆ ಈ ಕ್ಷೇತ್ರದಲ್ಲಿ ಅವಕಾಶಗಳ ಮಹಾಪೂರವೇ ಇದೆ. ಬಳ್ಳಾರಿ ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಮಾತ್ರ ಪತ್ರಿಕೋದ್ಯಮ ವಿಷಯದ ಪದವಿ ಇದೆ. ಅಲ್ಲೆಲ್ಲ ಓದುವ ವಿದ್ಯಾರ್ಥಿಗಳು ಹಳೆಯ, ಸಾಂಪ್ರದಾಯಿಕ ವಿಷಯಗಳಿಗೇ ಜೋತುಬೀಳದೆ, ಹೊಸತನಕ್ಕೆ ಹಾತೊರೆಯಬೇಕಿದೆ. ಆ ಮೂಲಕ ಉದ್ಯೋಗ ದಕ್ಕಿಸಿಕೊಳ್ಳಬಹುದಾಗಿದೆ ಎಂದೂ ಅವರು ವಿವರಿಸುತ್ತಾರೆ.

ಬಳ್ಳಾರಿಯ ಸರಳಾದೇವಿ ಸತೀಶಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆಯಬಹುದು. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿದವರು, ಜೆಓಸಿಯಂತಹ ಕೋರ್ಸ್ ಮಾಡಿದವರೂ ಈ ಪದವಿ ಪಡೆಯಬಹುದಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿದಲ್ಲಿ, ಸಾಹಿತ್ಯವನ್ನು ಅಭ್ಯಸಿಸಿದಲ್ಲಿ ನೌಕರಿ ಖಂಡಿತ ಖಾತರಿ ಎಂಬುದಂತೂ ಸತ್ಯ ಎಂಬುದು ಡಾ.ಮಂಜಪ್ಪ ಅವರ ಅನಿಸಿಕೆ.

ಬಿ.ಕಾಂನಲ್ಲಿ ಅಕೌಂಟಿಂಗ್, ಕಂಪ್ಯೂಟರ್ಸ್, ಫ್ಯಾಷನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತಿತರ ಕೋರ್ಸ್‌ಗಳಲ್ಲೂ ಪದವಿ ಪಡೆಯುವ ಅವಕಾಶವಿದೆ. ವಿದ್ಯಾರ್ಥಿಗಳು ಈ ಕಡೆ ಆಕರ್ಷಿತರಾಗಬೇಕಿದೆ ಎಂದೂ ಅವರು  ಹೇಳುತ್ತಾರೆ.

ಬಿಎ ಪದವಿಯಲ್ಲಿ ಅರ್ಥಶಾಸ್ತ್ರ, ಕನ್ನಡ, ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಇಂಗ್ಲಿಷ್ ವಿಷಯಗಳನ್ನು ಓದುವುದೂ ಮುಖ್ಯ ಅದರೊಂದಿಗೇ ವಿಶೇಷವಾದ, ಹೊಸ ಮಾದರಿಯ ಕೋರ್ಸ್‌ಗಳಲ್ಲಿ ಅಭ್ಯಸಿಸುವುದೂ ಅಗತ್ಯ. ವಿಷಯದ ಮೇಲೆ ಆಸಕ್ತಿ ಇದ್ದಲ್ಲಿ ಅಸಾಧ್ಯ ಎಂಬುದು ಇಲ್ಲ.

ಪದವಿಯ ನಂತರ ನಾಗರಿಕ ಸೇವಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಸ್ಫರ್ಧಾತ್ಮಕ ಪರೀಕ್ಷೆ ಎದುರಿಸುವುದಕ್ಕೂ ಈ ಎಲ್ಲ ವಿಷಯಗಳ ಮೇಲಿನ ಆಸಕ್ತಿ ನೆರವಾಗುತ್ತದೆ ಎಂಬುದು ಅವರ ಕಿವಿಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT