ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹದ ತದನಂತರ

Last Updated 10 ಅಕ್ಟೋಬರ್ 2011, 5:50 IST
ಅಕ್ಷರ ಗಾತ್ರ

ಗದಗ: ಭಾನುವಾರ ಮಧ್ಯಾಹ್ನ ಎರಡು ಗಂಟೆಯವರೆಗೆ ಅಂದರೆ ಸರಿ ಸುಮಾರು ನಾಲ್ಕು ತಾಸುಗಳ ಕಾಲ ವಿದ್ಯಾದಾನ ಸಮಿತಿಯ ಮೈದಾನದ ಬೃಹತ್ ಪೆಂಡಾಲ್ ಮದುವೆ ಮಂಟಪವಾಗಿತ್ತು. ತಾಳಿ ಕಟ್ಟಿ, ಶಾಸ್ತ್ರೋಕ್ತ ಪೂಜಾ ಕಾರ್ಯಕ್ರಮಗಳು ಮುಗಿದ ತರುವಾಯದ ತದನಂತರದಲ್ಲಿ ಗದುಗಿನ ಎಪಿಎಂಸಿ ಪ್ರಾಗಂಣ, ಕೆ.ಎಚ್.ಪಾಟೀಲ ಸಭಾಭವನ ಅಲ್ಲದೇ ಗಲ್ಲಿ-ಗಲ್ಲಿಗಳಲ್ಲಿ ಇದ್ದ ಸಣ್ಣ ಮೈದಾನ, ಮರದಡಿಗಳು ಮದುವೆ ಮಂಟಪಗಳಾಗಿ ಪರಿವರ್ತನೆಗೊಂಡವು. ತನ್ಮೂಲಕ ಮುದ್ರಣಕಾಶಿಯ ಎತ್ತ ನೋಡಿದರು ಮದುವೆಯ ದಿಬ್ಬಣವೇ ಎನ್ನುವಂತಾಗಿತ್ತು.

ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ನಡೆದ ಸಾಮೂಹಿಕ ವಿವಾಹದಲ್ಲಿ 750 ಜೋಡಿಗಳು ಸತಿ-ಪತಿಗಳಾದರು. ಸರಳವಾಗಿ ಮದುವೆಯಾದರೂ ಸಂಪ್ರದಾಯ-ಶಾಸ್ತ್ರಗಳನ್ನು ಬಿಡದೆ, ವಿಧಿವತ್ತಾಗಿ ಮದುವೆ ಕಾರ್ಯವನ್ನು ನಡೆಸಿಕೊಂಡರು ಗಂಡು-ಹೆಣ್ಣಿನ ಕಡೆಯವರು. ಅದು ಒಟ್ಟಾಗಿ ಸೇರಿಕೊಂಡು.

ಕೆ.ಎಚ್.ಪಾಟೀಲ ಸಭಾಭವನ, ಎಪಿಎಂಸಿಯ ಪ್ರಾಗಂಣದಲ್ಲಿ ಅಲ್ಲಲ್ಲಿ ಪೆಂಡಾಲ್‌ಗಳನ್ನು ಹಾಕಿ, ಮದುಮಕ್ಕಳನ್ನು ಅರತಕ್ಷತೆಗೆ ಕುಳ್ಳಿರಿಸಲಾಗಿತ್ತು. ಮದುವೆಗೆ ಬಂದಿದ್ದ ನೆಂಟರು- ಬಂಧುಗಳು, ಸ್ನೇಹಿತರು, ಸಂಬಂಧಿಗಳು ಎಲ್ಲರೂ ಬಂದು ನೂತನ ದಂಪತಿ ತಲೆ ಮೇಲೆ ಅಕ್ಷತೆ ಹಾಕಿ ಶುಭ ಹಾರೈಸಿದರು. ಮಾರು ದೂರದಲ್ಲಿ ಪುಸ್ತಕ ಹಿಡಿದು ಕುಳಿತ್ತಿದ್ದ ಹಿರಿಯರ ಹತ್ತಿರ ಹೋಗಿ ಆಯರ್ (ಮುಯ್ಯಿ) ಮಾಡಿದರು. ನಂತರ ವೀರೇಶ್ವರ ಪುಣ್ಯಾಶ್ರಮದ ಅಂಚಿನಲ್ಲಿ ಏರ್ಪಡಿಸಿದ್ದ ಸಾಮೂಹಿಕ ಭೋಜನದಲ್ಲಿ ಬೂಂದೆ, ಅನ್ನ-ಸಂಬಾರ್ ಸ್ವೀಕರಿಸಿದರು.

ಅರತಕ್ಷತೆ ಮುಗಿದ ನಂತರ  ಮದು ಮಕ್ಕಳ ತಂದೆ-ತಾಯಿ ಅವರು ಪರಸ್ಪರ `ಬೀಗರ ವಸ್ತ್ರ~ಗಳನ್ನು ಉಡುಗೊರೆಯಾಗಿ ನೀಡಿದರು. ಅಷ್ಟರಲ್ಲಿ ಟ್ರ್ಯಾಕ್ಟರ್ ಮೇಲೆ ಅಡುಗೆ ಸಾಮಗ್ರಿ, ಗೃಹೋಪಯೋಗಿ ಸಾಮಾನುಗಳನ್ನು ಏರಿಕೊಂಡು ಇಬ್ಬರು ಹೆಣ್ಣು-ಗಂಡು ವೇಷಧಾರಿಗಳು ಆಗಮಿಸಿದರು. ಸ್ವಲ್ಪ ಹೊತ್ತು ತಮಾಷೆ ಮಾಡುತ್ತಾ ವರನಿಗೆ ಗೃಹೋಪಯೋಗಿ ಸಾಮಗ್ರಿಗಳನ್ನು ನೀಡಿದರು. ಇದಕ್ಕೆ ಸಂತೃಪ್ತನಾದ ವರ ಖುಷಿಯಿಂದ ತನ್ನ ಕೈಲಾದಷ್ಟು `ಕಾಣಿಕೆ~ಯನ್ನು ಕೊಟ್ಟನು.

ಹೀಗೆ ಸಾಮೂಹಿಕ ವಿವಾಹದ ಬೆಳಕಿನ ಅಡಿಯಲ್ಲಿಯೇ ಮದುವೆಯ ಶಾಸ್ತ್ರಗಳನ್ನು ಮುಗಿಸಿಕೊಂಡ ಜನರು ಸೂರ‌್ಯ ಮರೆಯಾಗುವ ಮೊದಲೇ ಊರಿನತ್ತ ಮುಖಮಾಡಿದರು.

ಕೆಲವೊಂದು ಮದುವೆ ದಿಬ್ಬಣದವರು ಲಾರಿ- ಗೂಡ್ಸ್ ಟೆಂಪೋಗಳನ್ನು ವ್ಯವಸ್ಥೆ ಮಾಡಿದ್ದರು. ಟಾಟಾ ಏಸ್ ವಾಹನದ ಮುಂದೆ ಇಂತಹವರ ಕುಟುಂಬದ ಮದುವೆ ಎನ್ನುವ ನಾಮಫಲಕ ಹಾಕಿಕೊಂಡಿದ್ದರು. ಈ ಎಲ್ಲ ವಾಹನಗಳಲ್ಲಿ ಮದುಮಕ್ಕಳು, ಮದುವೆಗೆ ಬಂದಿದ್ದ ಜನರನ್ನು ತಮ್ಮ-ತಮ್ಮ ಊರಿಗೆ ಕರೆದುಕೊಂಡು ಹೋದರು.

ಕೊಪ್ಪಳ ಜಿಲ್ಲೆಯ ಹಲವಾಗಲಿ ಗ್ರಾಮದ ರಾಜಭಕ್ಷಿ ಮತ್ತು ಹುಸೇನಬಿ ಅವರು `ಪ್ರಜಾವಾಣಿ~ ಜೊತೆ ಮಾತನಾಡಿ, ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ. ತಾಳಿ, ವಸ್ತ್ರಕ್ಕೆ ಸಹಸ್ರಾರು ರೂಪಾಯಿ ಖರ್ಚಾಗುವ ಈ ಕಾಲದಲ್ಲಿ ಸಾಮೂಹಿಕ ವಿವಾಹಗಳೇ ಪರ್ಯಾಯವಾಗಬೇಕು ಎಂದರು.

ಟಾಕೀಸ್- ಬಾರ್ ಹೌಸ್‌ಫುಲ್:ಸಾಮೂಹಿಕ ಮದುವೆಗೆ ಬಂದಿದ್ದ ಅಕ್ಕಪಕ್ಕ ಜಿಲ್ಲೆ, ಗದಗ ಜಿಲ್ಲೆಯ ಜನರು ಊಟವಾದ ಬಳಿಕ ಸಮೀಪದಲ್ಲಿಯೇ ಇದ್ದ ಟಾಕೀಸಿನತ್ತ ಮುಖ ಮಾಡಿದರು. ಕೆಲವರು ಊಟಕ್ಕೂ ಮೊದಲೇ ಬಾರ್‌ಗಳತ್ತ ಆಕರ್ಷಿತರಾಗಿದ್ದರು. ಇದರಿಂದಾಗಿ ಮಧ್ಯಾಹ್ನದ ಹೊತ್ತೇ ಎಲ್ಲ ಬಾರ್‌ಗಳು ಹೌಸ್‌ಫುಲ್ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT