ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ನೀಡದಿದ್ದರೆ ಸಹಿಸಲ್ಲ: ಉಮೇಶ ಕತ್ತಿ

Last Updated 21 ಸೆಪ್ಟೆಂಬರ್ 2011, 8:40 IST
ಅಕ್ಷರ ಗಾತ್ರ

ಬೆಳಗಾವಿ: ಸಾಲ ನೀಡುತ್ತೇವೆ ಎಂದು ಬ್ಯಾಂಕುಗಳಲ್ಲಿ ಫಲಕ ಹಾಕುತ್ತೀರಿ. ಆದರೆ ಸರ್ಕಾರಿ ಯೋಜನೆಯ ಫಲಾನುಭವಿಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತೀರಿ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಎಚ್ಚರಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬ್ಯಾಂಕರ್ಸ್‌ ಸಭೆಯಲ್ಲಿ ಅವರು ಮಾತನಾಡಿದರು. `ಸಾಲ ನೀಡಲು ಏನು ಸಮಸ್ಯೆ ಎಂಬುದನ್ನು ತಿಳಿಸಿರಿ. ಅದು ಬಿಟ್ಟು ಅರ್ಜಿಗಳನ್ನು ನಿಮ್ಮಲ್ಲಿಯೇ ಇಟ್ಟುಕೊಂಡು ಕೂಡಬೇಡಿ. ಪ್ರತಿ ಸಭೆಯಲ್ಲಿ ನಕಾರಾತ್ಮಕ ಉತ್ತರ ಬರುತ್ತಿದೆ. ಈ ಧೋರಣೆ ಸರಿಯಲ್ಲ~ ಎಂದು ಅವರು ತರಾಟೆಗೆ ತೆಗೆದುಕೊಂಡರು.

`ನಗರ ವಸತಿ ಯೋಜನೆಯಡಿ ಇಲ್ಲಿಯವರೆಗೆ 266 ಅರ್ಜಿಗಳನ್ನು ವಿವಿಧ ಬ್ಯಾಂಕಿನವರಿಗೆ ಕಳುಹಿಸಿ ಕೊಡಲಾಗಿದೆ. ಆದರೆ ಅವರು ಮಾತ್ರ ಸಾಲಕ್ಕೆ ಮಂಜೂರಾತಿ ನೀಡಲ್ಲ~ ಎಂದು ಜಿಲ್ಲಾಧಿಕಾರಿ ಏಕ್‌ರೂಪ ಕೌರ್ ತಿಳಿಸಿದರು.

ಬ್ಯಾಂಕ್ ಅಧಿಕಾರಿಗಳು ಮಾತನಾಡಿ, ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. ಆದರೆ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ. ಆದ್ದರಿಂದ ಸಾಲ ನೀಡಿಲ್ಲ~ ಎಂದರು. `ಸೂಕ್ತ ದಾಖಲೆ ನೀಡಿಲ್ಲ ಎಂದು ತಿಳಿಸಿಲ್ಲ. ಈ ಕುರಿತು ಪತ್ರ ಬರೆದರೂ ಉತ್ತರ ನೀಡಿಲ್ಲ~ ಎಂದು ಪಾಲಿಕೆ ಎಂಜಿನಿಯರ್ ಆರ್.ಎಸ್. ನಾಯಕ ತಿಳಿಸಿದರು.

`ಕುಂಟು ನೆಪಗಳನ್ನು ಕೇಳಲು ಆಗುವುದಿಲ್ಲ. ಮುಂದಿನ ತಿಂಗಳು ಈ ಕುರಿತು ಚರ್ಚಿಸಲು ಮತ್ತೊಂದು ಸಭೆ ಕರೆಯಲಾಗುವುದು. ಆ ಸಭೆಗೆ ಮಂಜೂರಾತಿ ನೀಡಿದ ಸಮಗ್ರ ಮಾಹಿತಿಯೊಂದಿಗೆ ಆಗಮಿಸಬೇಕು~ ಎಂದು ಸಚಿವರು ಸೂಚಿಸಿದರು.

ಸರ್ವ ಶಿಕ್ಷಣ ಅಭಿಯಾನ: ಪ್ರಸಕ್ತ ವರ್ಷದ ಸರ್ವ ಶಿಕ್ಷಣ ಅಭಿಯಾನ ಯೋಜನೆಯ 11,381 ಲಕ್ಷ ರೂಪಾಯಿಯ ಕ್ರಿಯಾ ಯೋಜನೆಗೆ ಸಭೆ ಒಪ್ಪಿಗೆ ನೀಡಿತು. ಶಾಲಾ ಕಟ್ಟಡ, ಕೊಠಡಿ ನಿರ್ಮಾಣ, ಶಿಕ್ಷಕರ ವೇತನ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಡಿ.ಎಂ. ದಾನೋಜಿ ವಿವರಿಸಿದರು.

`ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿರುವುದರಿಂದಾಗಿ ಒಬ್ಬರು ಅಥವಾ ಇಬ್ಬರು ಶಿಕ್ಷಕರಿರುವ ಶಾಲೆಗಳಲ್ಲಿ ತೊಂದರೆಯಾಗುತ್ತಿದೆ. ಶಾಲೆ ಇಲ್ಲದ ದಿನಗಳಲ್ಲಿ ಸಭೆಗಳನ್ನು ನಡೆಸಬೇಕು~ ಎಂದು ಸಚಿವರು ಸೂಚಿಸಿದರು. `ಗುಣಮಟ್ಟದ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು~ ಎಂದು ಅವರು ಹೇಳಿದರು.

`ಕೆಲವು ಶಾಲೆಗಳಲ್ಲಿ ಸೈಕಲ್ ನೀಡಲು ಶಿಕ್ಷಕರು, ರಿಪೇರಿ ಮತ್ತಿತರರ ಕಾರಣ ನೀಡಿ ವಿದ್ಯಾರ್ಥಿಗಳಿಂದ 50 ರಿಂದ 200 ರೂಪಾಯಿ ವಸೂಲು ಮಾಡುತ್ತಿದ್ದಾರೆ. ಕೂಡಲೇ ಅದನ್ನು ನಿಲ್ಲಿಸಬೇಕು. ಸೈಕಲ್‌ಗಳು ಸರಿಯಾಗಿರದಿದ್ದರೆ ವಾಪಸ್ಸು ಕಳುಹಿಸಬೇಕು~ ಎಂದು ಸೂಚಿಸಿದರು.

ಗೋಕಾಕ ತಾಲ್ಲೂಕಿನ ಮೂಡಲಗಿ ವಲಯದಲ್ಲಿ ಕೆಲವು ಶಾಲೆಗಳಲ್ಲಿ ಶಾಲಾ ಸುಧಾರಣಾ ಸಮಿತಿಗಳನ್ನು ಏಕಾಏಕಿ ಬದಲಾಯಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ದೂರಿದರು.

ಶಾಲಾ ಸುಧಾರಣಾ ಸಮಿತಿ ಸದಸ್ಯರನ್ನು ಏಕಾಏಕಿ ಬದಲಾಯಿಸಿದ್ದು ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಎಂಟು ದಿನದಲ್ಲಿ ಈ ಕುರಿತು ವರದಿ ಸಲ್ಲಿಸಬೇಕು ಎಂದು ಡಿಡಿಪಿಐ ಅವರಿಗೆ ಸೂಚಿಸಿದರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನವ್ವ ಯಾದವಾಡ, ಜಿ.ಪಂ. ಸಿಇಓ ಅಜಯ್ ನಾಗಭೂಷಣ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT