ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳ ಎಡಬಿಡಂಗಿ ನಿಲುವಿಗೆ ಅಸಮಾಧಾನ

Last Updated 10 ಡಿಸೆಂಬರ್ 2013, 7:09 IST
ಅಕ್ಷರ ಗಾತ್ರ

ಸಾಗರ: ಮನರಂಜನೆಯ ಮಾಧ್ಯಮಗಳಿಗೆ ಮಾರಾಟವಾಗಿ ಎಡಬಿಡಂಗಿ ನಿಲುವು ತೋರುವ ಬಗ್ಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಸೇರಿದಂತೆ ಎಲ್ಲಾ ಸಾಹಿತಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ಒಡನಾಟ ಸಾಂಸ್ಕೃತಿಕ ಸಂಘಟನೆ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಭಾಷೆ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಇದರ ನೇತ್ಯಾತ್ಮಕ ಪರಿಣಾಮ ಸಾಹಿತ್ಯ, ಕಲೆ, ನಾಟಕದಂತಹ ಪ್ರಕಾರಗಳ ಮೇಲೂ ಆಗುತ್ತಿವೆ. ದೃಶ್ಯ ಮಾಧ್ಯಮದ ಮೂಲಕವೇ ಕ್ರಾಂತಿ ಉಂಟಾಗುತ್ತದೆ ಎಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸೃಜನಶೀಲತೆ ಕೂಡ ಮಾರಾಟದ ವಸ್ತುವಾಗಿದೆ. ಈ ಕಾರಣ ಸೃಜನಶೀಲತೆಯನ್ನೇ ಯಾಕೆ ತಿರಸ್ಕರಿಸಬಾರದು ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದರು.

ಪ್ರಯೋಗಾತ್ಮಕತೆ, ಶೈಲಿಯ ಬಗ್ಗೆ ಅತಿಯಾದ ಒಲವು, ಭಾಷೆಯ ಮೇಲಿನ ಅನಗತ್ಯ ಕಸರತ್ತುಗಳಿಂದ ನವ್ಯ ಸಾಹಿತ್ಯ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ‘ಜನಪ್ರಿಯ’ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ನಾ.ಡಿಸೋಜ ಅವರು ವಿಮರ್ಶೆಯ ಮಾನದಂಡಗಳನ್ನು ಲೆಕ್ಕಿಸದೆ ಕನ್ನಡ ಸಾಹಿತ್ಯದಲ್ಲಿ ಹೊಸ ಮಾರ್ಗದ ಪ್ರವರ್ತಕರಂತೆ ಸಾಹಿತ್ಯ ಕೃಷಿ ಮಾಡಿದ್ದು ಗಮನಾರ್ಹ ಎಂದು ಹೇಳಿದರು.

ಮಲೆನಾಡಿನ ಪರಿಸರ ಹಾಗೂ ಇಲ್ಲಿನ ವಿವಿಧ ಜನಾಂಗಗಳ ಜೊತೆ ಸಂಬಂಧ ಸ್ಥಾಪಿಸಿಕೊಂಡು ನಗರಕ್ಕೆ ವಲಸೆ ಹೋಗದೆ ಸಾಗರದಂತಹ ಸಣ್ಣ ಊರಿನಲ್ಲೆ ಇದ್ದುಕೊಂಡು ಸಾಹಿತ್ಯ ಸೃಷ್ಟಿಸಿದ ಡಿಸೋಜರ ಬರವಣಿಗೆ ಹಾಗೂ ಬದುಕಿನ ನಡುವೆ ವ್ಯತ್ಯಾಸಗಳಿಲ್ಲ. ಇಂದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ವಲಸೆ ಹೋಗುತ್ತಿದ್ದು ಕನ್ನಡ ಭಾಷೆಯಿಂದ ದೂರಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯವನ್ನು ಯಾರು ಬರೆಯುತ್ತಾರೆ, ಯಾವುದರ ಬಗ್ಗೆ ಬರೆಯುತ್ತಾರೆ ಎನ್ನುವ ಪ್ರಶ್ನೆಗಳು ಹುಟ್ಟಿದ್ದು ಡಿಸೋಜರ ರೂಪದಲ್ಲಿ ಈ ಬಿಕ್ಕಟ್ಟಿಗೆ ಉತ್ತರ ಕಂಡುಕೊಳ್ಳಬಹುದು ಎಂದರು.

ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಭಾಕರ್‌ರಾವ್‌ ಮಾತನಾಡಿ, ಡಿಸೋಜರ ಸಾಹಿತ್ಯದಲ್ಲಿ ಇರುವ ಪ್ರತಿಭಟನೆಯ ಧ್ವನಿ ತಣ್ಣನೆಯದ್ದಾದರೂ ಅವರ ಬದ್ಧತೆ ಪ್ರಶ್ನಾತೀತ. ಜನಪರ ಆಲೋಚನೆಯ ಜೊತೆಗೆ ಡಿಸೋಜರದ್ದು ಅಪ್ಪಟ ಜಾತ್ಯತೀತ ಮನಸ್ಸು ಎಂದರು.

ಲೇಖಕ ವಿಲಿಯಂ ಮಾತನಾಡಿ, ಪರಿಪೂರ್ಣ ವ್ಯಕ್ತಿತ್ವದ ಡಿಸೋಜ ಅವರು ಸಾಹಿತ್ಯ ಪಯಣದಲ್ಲಿ ಯಾರ ಆಸರೆಯನ್ನೂ ಪಡೆಯದ ಒಬ್ಬಂಟಿಗ. ಈ ಪ್ರದೇಶದಲ್ಲಿ ನಡೆದ ರೈಲ್ವೆ ಹೋರಾಟದ ಯಶಸ್ಸಿನಲ್ಲಿ ಅವರ ನಾಮಬಲ ಹೆಚ್ಚಿನ ಕೆಲಸ ಮಾಡಿದೆ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿ.ಟಿ.ಸ್ವಾಮಿ, ಡಾ.ಬಿ.ಜಿ.ಸಂಗಂ, ಕೆ.ಎನ್‌.ಶರ್ಮ, ಎಸ್‌.ವಿ.ಹಿತಕರ ಜೈನ್‌ ಮಾತನಾಡಿದರು.  ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ನಾ.ಡಿಸೋಜ ಮಲೆನಾಡಿನ ಮುಳುಗಡೆ ಸಮಸ್ಯೆಯ ಬಗ್ಗೆ ಬರೆದ ಕಾರಣ ಆ ಸಮಸ್ಯೆ ಬಗೆಹರಿಯದಿದ್ದರೂ ಮುಳುಗಡೆ ಸಂತ್ರಸ್ತರ ನೋವನ್ನು ಸರ್ಕಾರಕ್ಕೆ ಮುಟ್ಟಿಸಿದ ಸಮಾಧಾನ ನನಗಿದೆ ಎಂದರು.

ಡಿಸೋಜರ ಪತ್ನಿ ಫಿಲೋಮಿನಾ ಡಿಸೋಜ ಹಾಜರಿದ್ದರು. ಸಿ.ಜಿ.ಶ್ರೀಧರ್‌ ವಂದಿಸಿದರು.  ಎಂ.ಪಿ.ಲಕ್ಷ್ಮೀನಾರಾಯಣ್‌ ಕಾರ್ಯಕ್ರಮವನ್ನು ನಿರೂಪಿಸಿದರು.

ಡಿಸೋಜರ ಮೊದಲ ಬರಹ ವಾಚಕರ ವಾಣಿ ಪತ್ರ!
ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಡಾ.ನಾ.ಡಿಸೋಜ ಅವರ ಮೊದಲ ಪ್ರಕಟಿತ ಬರಹ ಎಂದರೆ ‘ಪ್ರಜಾವಾಣಿ’ಯ ವಾಚಕರ ವಾಣಿ ವಿಭಾಗದಲ್ಲಿ ಪ್ರಕಟವಾದ ಪತ್ರವಂತೆ. ಈ ವಿಷಯವನ್ನು ಒಡನಾಟದ ಕಾರ್ಯಕ್ರಮದಲ್ಲಿ ಡಿಸೋಜ ಅವರೇ ಬಹಿರಂಗಪಡಿಸಿದರು.

ಸಾಗರ ಪಟ್ಟಣದಲ್ಲಿ ಒಮ್ಮೆ ಕುಡಿಯುವ ನೀರಿನ ಬಾವಿಗಳೆಲ್ಲಾ ಬತ್ತಿ ಹೋಗಿದ್ದು ಜನರಿಗೆ ತೀವ್ರ ತೊಂದರೆಯಾಗಿತ್ತು. ಆಗ ಇಲ್ಲಿನ ಇಗರ್ಜಿಯ ಬಾವಿಯಲ್ಲಿ ಮಾತ್ರ ನೀರು ಬತ್ತಿರಲಿಲ್ಲ. ಆಗ ಸಾರ್ವಜನಿಕರು ಈ ಬಾವಿಯ ನೀರನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಇದನ್ನು ಗಮನಿಸಿದ ಇಗರ್ಜಿ ಸಿಬ್ಬಂದಿ ಬಾವಿಯ ಗಡಗಡೆಯನ್ನು ತೆಗೆದು ಒಳಗಿಟ್ಟರಂತೆ. ಈ ಕಾರಣ ಜನರು ನೀರನ್ನು ಎತ್ತಲು ಸಾಧ್ಯವಾಗಲಿಲ್ಲ.

ಇದನ್ನು ಗಮನಿಸಿ ನೊಂದ ಡಿಸೋಜ ಅವರು ಈ ಬಗ್ಗೆ ವಾಚಕರ ವಾಣಿಗೆ ಪತ್ರ ಬರೆದರು. ಪತ್ರ ಪ್ರಕಟವಾದ ದಿನ ಇಗರ್ಜಿಯ ಫಾದರ್‌ ಇದನ್ನು ಗಮನಿಸಿ ಬಾವಿಯ ಗಡಗಡೆಯನ್ನು ಮತ್ತೆ ಅಳವಡಿಸಿ ಜನರು ನೀರು ಪಡೆಯಲು ನೆರವಾದರಂತೆ. ಈ ಘಟನೆಯನ್ನು ಡಿಸೋಜ ತಮ್ಮ ಭಾಷಣದಲ್ಲಿ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT