ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಜ್ಯೋತಿ ಶಾಂತಿಯಾತ್ರೆ ಆರಂಭ

Last Updated 31 ಡಿಸೆಂಬರ್ 2010, 10:55 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಸ ಸಿಂಹ’ನಿಗೆ ಜಯವಾಗಲಿ... ವಿಷ್ಣು ಚಿರಾಯು... ‘ಆಪ್ತಮಿತ್ರ’ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ...ಗುರುವಾರ ಬೆಳಿಗ್ಗೆ 8ರ ಸುಮಾರಿಗೆ ವಿಷ್ಣು ವ್ಯಾಸಂಗ ಮಾಡಿದ್ದ ನ್ಯಾಷನಲ್ ಕಾಲೇಜಿನ ಮೈದಾನದಿಂದ ಶಾಂತಿ ಸಾರುವ ಸಿಂಹಜ್ಯೋತಿ ಯಾತ್ರೆ ಆರಂಭವಾದಾಗ ಕೇಳಿ ಬಂದ ಅಭಿಮಾನಿಗಳ ಉದ್ಘಾರ ಇದು.ವಿಷ್ಣುವರ್ಧನ್ ಅವರಂತೆ ಕೇಶ ವಿನ್ಯಾಸ ಮಾಡಿಕೊಂಡ ಅಚ್ಚ ಬಿಳಿ ಉಡುಗೆ ಹಾಗೂ ತಲೆಗೆ ಶ್ವೇತ ಕರವಸ್ತ್ರ ತೊಟ್ಟ ಅಭಿಮಾನಿಗಳು ವಿಷ್ಣು ಅವರ ಭಾವಚಿತ್ರ ಹಾಗೂ ಕನ್ನಡ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಗುಣಶೀಲ ನರ್ಸಿಂಗ್ ಹೋಂ ಮಾರ್ಗವಾಗಿ ಕೆ.ಆರ್.ರಸ್ತೆ ತಲುಪಿದ ಮೆರವಣಿಗೆ ನಂತರ ಮೆರವಣಿಗೆಗೆ ಸೇರುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ದೇವೇಗೌಡ ಪೆಟ್ರೋಲ್ ಬಂಕ್ ಪ್ರದೇಶದಿಂದ ಪದ್ಮನಾಭನಗರ ಮೂಲಕ ಉತ್ತರ ಹಳ್ಳಿ ಮುಖ್ಯರಸ್ತೆ ತಲುಪಿದ ಮೆರವಣಿಗೆ ನೇತೃತ್ವವನ್ನು ನಿರ್ಮಾಪಕ ಕೆ. ಮಂಜು ವಹಿಸಿದ್ದರು.ಉತ್ತರಹಳ್ಳಿಯಲ್ಲಿ ವಿಷ್ಣು ಅಳಿಯ, ನಟ ಅನಿರುದ್ಧ ಅವರಿಗೆ ಅಭಿಮಾನಿಗಳು ಕಡಗ ತೊಡಿಸಿ ಹಾರೈಸಿದರು. ಅಲ್ಲಿಂದ ಮುಂದೆ ಚನ್ನಸಂದ್ರ ಮಾರ್ಗವಾಗಿ ಸುಮಾರು 2 ಗಂಟೆ ವೇಳೆಗೆ ಮೆರವಣಿಗೆ ಅಭಿಮಾನ್ ಸ್ಟುಡಿಯೊವನ್ನು ತಲುಪಿತು. ನಟಿ ಭಾರತಿ ವಿಷ್ಣುವರ್ಧನ್ ಸಿಂಹಜ್ಯೋತಿಯನ್ನು ಸಮಾಧಿ ಸ್ಥಳಕ್ಕೆ ಕೊಂಡೊಯ್ದರು. ಮಕ್ಕಳು, ವೃದ್ಧರು ಮಹಿಳೆಯರಾದಿಯಾಗಿ ಸಹಸ್ರಾರು ಸಂಖ್ಯೆಯ ಜನ ಸರತಿ ಸಾಲಿನಲ್ಲಿ ತಮ್ಮ ನೆಚ್ಚಿನ ನಟನ ದರ್ಶನ ಪಡೆದರು.

ಮೈಸೂರು ಚಿತ್ರದುರ್ಗ, ತುಮಕೂರು, ಮಂಡ್ಯ ಮುಂತಾದ ಕಡೆಗಳಿಂದ ಅಪಾರವಾದ ಅಭಿಮಾನಿಗಳು ಸೇರಿದ್ದರು. ನಟ ರಮೇಶ್ ಅರವಿಂದ್ ಕೆಲಕಾಲ ಮೆರವಣಿಗೆಯಲ್ಲಿ ಅಭಿಮಾನಿಗಳ ಜತೆ ಹೆಜ್ಜೆ ಹಾಕಿದರು. ಮೈಸೂರಿನಿಂದ ಸೈಕಲ್‌ನಲ್ಲಿ ಆಗಮಿಸಿದ್ದ ಮಂಜುನಾಥ್ ಎಂಬುವವರು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು. ದಣಿದ ಅಭಿಮಾನಿಗಳಿಗಾಗಿ ಉತ್ತರಹಳ್ಳಿ, ಕೆ.ಆರ್. ರಸ್ತೆ, ಚನ್ನಸಂದ್ರದಲ್ಲಿ ಪಾನಕ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ನೇತ್ರದಾನ, ಹೃದಯ ಪರೀಕ್ಷೆ: ಇದೇ ವೇಳೆ ಅಭಿಮಾನ್ ಸ್ಟುಡಿಯೋದಲ್ಲಿ ಅನೇಕರು ನೇತ್ರದಾನ, ರಕ್ತದಾನ ಮಾಡಿದರು. ಅಭಿಮಾನಿಗಳಿಂದ 400 ಯುನಿಟ್‌ಗೂ ಹೆಚ್ಚು ರಕ್ತವನ್ನು ವಿವಿಧ ಆಸ್ಪತ್ರೆಗಳ  ರಕ್ತ ನಿಧಿಗಳು ಸಂಗ್ರಹಿಸಿದವು. ಅಭಿಮಾನಿಗಳ ಅನುಕೂಲಕ್ಕಾಗಿ ದಂತ ಪರೀಕ್ಷೆ, ಹೃದಯ ಪರೀಕ್ಷೆ ಶಿಬಿರಗಳನ್ನು ಏರ್ಪಡಿಸಲಾಗಿತ್ತು.ನೂರಾರು ಸಂಖ್ಯೆಯ ಜನ ಯೋಜನೆಯ ಲಾಭ ಪಡೆದರು. ಎಚ್‌ಐವಿ ಪೀಡಿತರಿಗೆ ನೆರವು ನೀಡುವ ಮಿಲನ ಸಂಸ್ಥೆಗೆ ಸಾಹಸಸಿಂಹ ಡಾ. ವಿಷ್ಣುವರ್ಧನ ವಿಶ್ವ ಮಹಾಸಂಘದ ವತಿಯಿಂದ ಅನೇಕ ಟನ್ ಆಹಾರ ಧಾನ್ಯ ವಿತರಿಸಲಾಯಿತು. ಇದಕ್ಕೂ ಮುನ್ನ ಸುಮಾರು ಸಾವಿರ ಬಲೂನುಗಳನ್ನು ಆಗಸಕ್ಕೆ ಹಾರಿಬಿಡಲಾಯಿತು. 40 ಕೆ.ಜಿ ತೂಕದ ಗಂಟೆಯೊಂದನ್ನು ದೇವರಚಿಕ್ಕನಹಳ್ಳಿ ವೆಂಕಟೇಶ್ ದಾನ ನೀಡಿದರು. ಅಲ್ಲದೇ ಆಭರಣ ವ್ಯಾಪಾರಿಗಳೊಬ್ಬರು ತಯಾರಿಸಿದ ವಿಷ್ಣು ಭಾವಚಿತ್ರ ಹಾಗೂ ಹೆಸರು ಇರುವ ಕೈಗಡಿಯಾರವನ್ನು ನಟಿ ಭಾರತಿ  ಬಿಡುಗಡೆ ಮಾಡಿದರು.

ಮಿನಿ ಮಾರ್ಕೆಟ್: ವಿಷ್ಣು ಅವರ ಸ್ಮಾರಕದ ದರ್ಶನಕ್ಕಾಗಿ ಬಂದ ಸಾವಿರಾರು ಅಭಿಮಾನಿಗಳಿಗಾಗಿ ಅಭಿಮಾನ್ ಸ್ಟುಡಿಯೊದ ಹೊರಗೆ ಪುಟ್ಟ ಮಾರುಕಟ್ಟೆಯೇ ತೆರೆದಿತ್ತು. ವಿಷ್ಣು ಭಾವಚಿತ್ರಗಳು, ಹಾಡಿನ ಸಿ.ಡಿ, ಪುಸ್ತಕ, ಕ್ಯಾಲೆಂಡರ್, ಪತ್ರಿಕೆಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ದೊಡ್ಡ ದಂಡೇ ಅಲ್ಲಿ ಸೇರಿತ್ತು.
ಹಚ್ಚೆಯಲ್ಲಿ ಹಸಿರಾದ ವಿಷ್ಣು: ಅನೇಕ ಜನ ‘ಸಾಹಸ ಸಿಂಹ ವಿಷ್ಣುವರ್ಧನ್’ ಎಂದು ಕೈಗಳಿಗೆ ಹಚ್ಚೆ ಹಾಕಿಸಿಕೊಂಡು ತಮ್ಮ ನಟನ ನೆನಪನ್ನು ಹಸಿರಾಗಿರಿಸಿದರು.
ವಿಷ್ಣು ಅಭಿಮಾನಿೂನ್ನಯ್ಯ ಅವರ ಪ್ರಕಾರ ‘ಹೃದಯಕ್ಕೆ ಹತ್ತಿರವಾದವರು ನಮ್ಮಿಂದ ಎಂದೆಂದೂ ದೂರವಾಗಬಾರದು ಎಂಬ ಕಾರಣಕ್ಕೆ ಹಚ್ಚೆ ಹಾಕಿಸಿಕೊಳ್ಳುವುದು ಸಂಪ್ರದಾಯ. ವಿಷ್ಣು ಕೂಡ ನಮ್ಮ ಹೃದಯಕ್ಕೆ ಹತ್ತಿರವಾದವರು’ ಎಂದು ಹೇಳಿದರು.

ಕಾಡಿದ ಬಾಲಣ್ಣನ ನೆನಪು
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿ ಸಮೀಪವೇ ಇರುವ ಹಾಸ್ಯನಟ  ಟಿ.ಎನ್. ಬಾಲಕೃಷ್ಣ ಅವರ ಸಮಾಧಿ ಅನೇಕ ಚಿತ್ರಪ್ರೇಮಿಗಳ ಕೇಂದ್ರಬಿಂದುವಾಯಿತು.ನಟ ಬಾಲಕೃಷ್ಣ ಅವರ ಸ್ಮಾರಕದತ್ತ ಧಾವಿಸುತ್ತಿದ್ದ ಜನ ಪ್ರೀತಿ ಗೌರವಗಳಿಂದ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ಅಭಿಮಾನಿಗಳು ತಮ್ಮ ಮೊಬೈಲ್‌ನಲ್ಲಿ ಬಾಲಣ್ಣನ ಸಮಾಧಿಯ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರು. ‘ಬಾಲಕೃಷ್ಣ ಅವರ ಸ್ಮಾರಕವನ್ನು ಕೂಡ ಜೀರ್ಣೋದ್ಧಾರ ಮಾಡಬೇಕಿದೆ’ ಎಂದು ನಾಯಂಡಹಳ್ಳಿಯ ಅಭಿಮಾನಿ ಲಕ್ಷ್ಮಮ್ಮ ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT