ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: 2006ರ ಕಾಯ್ದೆ ಅನುಷ್ಠಾನಕ್ಕೆ ವಿರೋಧ

Last Updated 19 ಡಿಸೆಂಬರ್ 2013, 9:26 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ 2006ರ ಸಿಇಟಿ ಕಾಯ್ದೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬಡ– ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ಇದಾಗಿದೆ. ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಹಾಗೂ ಅವರ ಶೈಕ್ಷಣಿಕ ಹಕ್ಕು ಮೊಟಕುಗೊಳಿಸುವ ಸರ್ಕಾರದ ಈ ನೀತಿ, ವಿದ್ಯಾರ್ಥಿ ಹಾಗೂ ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.

ಈ ಕಾಯ್ದೆಯಿಂದ, ಎಂಜಿನಿಯರಿಂಗ್‌ನ ಶೇ 45, ವೈದ್ಯಕೀಯ ಶೇ 40 ಹಾಗೂ ದಂತ ವೈದ್ಯಕೀಯದ ಶೇ 35ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದೆ. ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗಲಿದೆ. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್‌–ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಈಗಾಗಲೇ ಹಲವಾರು ದೂರುಗಳಿದ್ದು, ಅಂಥದರಲ್ಲಿ ಉಳಿದ ಸರ್ಕಾರಿ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್‌–ಕೆಗೆ ಬಿಟ್ಟು ಕೊಟ್ಟಿರುವುದು ಖಂಡನೀಯ.

ಇದರಿಂದ ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುಕೂಲ ಆಗುತ್ತದೆ. ಇದನ್ನು ತಡೆಯಲೆಂದೇ 2006ರ ಕಾಯ್ದೆ ಅನುಷ್ಠಾನಕ್ಕೆ ತರುವುದಾಗಿ ಸರ್ಕಾರ ಹೇಳುತ್ತಿದ್ದರೂ ಪರಿಣಾಮ ವ್ಯತಿರಿಕ್ತವಾಗಿಯೇ ಆಗುತ್ತದೆ ಎಂದು ತಿಳಿಸಿದರು.

‘ಕಾಮೆಡ್‌್–ಕೆ ಏಜೆಂಟ್‌ ಆರ್‌.ವಿ.ದೇಶಪಾಂಡೆ’, ‘ಬಡ ವಿದ್ಯಾರ್ಥಿಗಳಿಗೂ ಭಾರಿ ಶುಲ್ಕ ಇದು ಸಾಮಾಜಿಕ ನ್ಯಾಯವೇ?’, ‘ದೇಶಪಾಂಡೆ ಅವರೇ ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ ಹಣ ಬೇಕಾದರೆ ಭಿಕ್ಷೆ ಎತ್ತಿ ಸರ್ಕಾರಕ್ಕೆ ಕೊಡುತ್ತೇವೆ’, ‘ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಶರಣಾಗಿ ಭಾರಿ ಶುಲ್ಕ ಹೆಚ್ಚಿಸುವ ಹುನ್ನಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರ ಕೂಡಲೇ ಈ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ವೇದಿಕೆಯ ನಗರ ಘಟಕದ ಅಧ್ಯಕ್ಷ ಪ್ರೊ.ಶಶಿಕಲಾ ಪ್ರಸಾದ್‌, ನಗರ ಸಹ ಕಾರ್ಯದರ್ಶಿ ಯು.ಆರ್.ಸೋಹನ್‌, ಮುಖಂಡರಾದ ಎಚ್‌.ವಿನಯ್‌, ಸೂರಜ್‌, ಹರ್ಷ, ಪ್ರವೀಣ್‌, ಕುಮಾರ್‌ ಸಲಗನಹಳ್ಳಿ, ಬಿ.ಆರ್‌.ಬೀರೇಶ್‌, ಜಿ.ಎಸ್‌.ಸ್ವಾತಿ, ಅನುಷ್‌ ಪ್ರತಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT