ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಹೊಸ ಕಾಯ್ದೆ ಜಾರಿಗೆ ವ್ಯಾಪಕ ವಿರೋಧ

Last Updated 19 ಡಿಸೆಂಬರ್ 2013, 10:38 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ 2006ರ ಸಿಇಟಿ ಕಾಯ್ದೆ ವಿರೋಧಿಸಿ ನೂರಾರು ಸಂಖ್ಯೆಯ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ಸೇರಿದ ವಿವಿಧ ಕಾಲೇಜು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣ­ದಿಂದ ವಂಚಿತರನ್ನಾಗಿಸುವ ಹುನ್ನಾರ ಸರ್ಕಾರ­ದ್ದಾಗಿದೆ ಎಂದು ಆರೋಪಿಸಿದರು.

ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರದ ಈ ನೀತಿಯು ವಿದ್ಯಾರ್ಥಿ ಹಾಗೂ ಶೈಕ್ಷಣಿಕ ವಿರೋಧಿ­ಯಾಗಿದೆ. ಸರ್ಕಾರದ ಹೊಸ ಸಿಇಟಿ ಕಾಯ್ದೆ­ಯಿಂದ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಕೋಟಾ ರದ್ದಾಗಲಿದೆ.

ಪ್ರಸ್ತುತ ನೀಡುತ್ತಿರುವ ಎಂಜಿನಿಯರಿಂಗ್‌ನ ಶೇ 45, ವೈದ್ಯಕೀಯ ಶೇ 40, ದಂತ ವೈದ್ಯಕೀಯ ಶೇ 35 ಸೀಟುಗಳು ಖಾಸಗಿಯವರ ಪಾಲಾಗಲಿವೆ. ಕಾಮೆಡ್‌–ಕೆ ನಡೆಸುವ ಪ್ರವೇಶ ಪರೀಕ್ಷೆ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ಕಾಮೆಡ್‌–ಕೆ ಪರೀಕ್ಷೆಗೆ ಪ್ರವೇಶ ಪರೀಕ್ಷೆ ನಡೆಸುವ ಮುಕ್ತ ಅವಕಾಶ ನೀಡುತ್ತಿರುವುದು ಖಂಡನೀಯ. ಇದರಿಂದ ಖಾಸಗಿ ಕಾಲೇಜುಗಳ ಬೇಕಾಬಿಟ್ಟಿ ಶುಲ್ಕ ವಸೂಲಾತಿಗೆ ಸರ್ಕಾರವೇ ಅನುಮತಿ ನೀಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸ ನೀತಿಯಿಂದಾಗಿ ವೃತ್ತಿಪರ ಕೋರ್ಸ್‌­ಗಳಿಗೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶ ಶುಲ್ಕ ನಿರ್ಧರಿಸುವ ನಿಯಂತ್ರಣ ತಪ್ಪುತ್ತದೆ. ಆ ಮೂಲ ಖಾಸಗಿ ಆಡಳಿತ ಮಂಡಳಿಗಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ. ಬೇರೆ ರಾಜ್ಯದ ವಿದ್ಯಾರ್ಥಿ­ಗಳಿಗೆ ಕಾಮೆಡ್‌–ಕೆ ಮಣೆ ಹಾಕುವುದರಿಂದ ರಾಜ್ಯದ ವಿದ್ಯಾರ್ಥಿಗಳು ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ. ಸೀಟು ವಂಚಿತರಾಗುವ ಲಕ್ಷಣಗಳೂ ಇರುತ್ತದೆ ಎಂದರು.

ಇನ್ನು ಕಾಲೇಜುಗಳ ಮೂಲಸೌಕರ್ಯ ಆಧರಿಸಿ ಶುಲ್ಕ ನಿಗದಿಯನ್ನು ಸಮಿತಿ ನಿರ್ಧ­ರಿಸುವು­­ದರಿಂದ ರಾಜ್ಯದಾದ್ಯಂತ ಏಕರೂಪ ಶುಲ್ಕ ಇಲ್ಲದಂತಾಗುತ್ತದೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಶುಲ್ಕ ಪಾವತಿಸಲಾಗದೆ ವೃತ್ತಿ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಕಾಯ್ದೆಯ ಮೂಲ ಉದ್ದೇಶದಲ್ಲಿ ಹೇಳಿರುವಂತೆ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಏಕಗವಾಕ್ಷಿ ಸಂದರ್ಶನ, ಏಕರೂಪ ಶುಲ್ಕಗಳ ನೀತಿಗೆ ವಿರುದ್ಧವಾಗಿ ಸರ್ಕಾರ ವರ್ತಿಸುತ್ತಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್‌ ಆರೋಪಿಸಿದರು.

ರಾಜ್ಯದ 210 ಎಂಜಿನಿಯರಿಂಗ್‌ ಕಾಲೇಜು­ಗಳಲ್ಲಿ ಕೇವಲ 21 ಹಾಗೂ 32 ವೈದ್ಯಕೀಯ ಕಾಲೇಜುಗಳಲ್ಲಿ 10 ಕಾಲೇಜುಗಳ 5000 ಸೀಟುಗಳಿಗೆ ಮಾತ್ರ ಸಿಇಟಿ ನಡೆಸಲಿದೆ. ಉಳಿದ 75 ಸಾವಿರ ಸೀಟುಗಳಿಗೆ ಕಾಮೆಡ್‌–ಕೆ ಪರೀಕ್ಷೆ ನಡೆಸಲಿದೆ. ಇದರಿಂದಾಗಿ ಖಾಸಗಿ ಕಾಲೇಜುಗಳು ಲಕ್ಷಾಂತರ ರೂಪಾಯಿಗೆ ಸೀಟು ಮಾರಾಟ ಮಾಡಿ­ಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.

ಎಬಿವಿಪಿ ನಗರ ಕಾರ್ಯ­ದರ್ಶಿ ಅಮರೇಶ್‌, ಮುಖಂಡರಾದ ಮಲ್ಲಿ­ಕಾರ್ಜುನ, ಸುಬ್ರಹ್ಮಣ್ಯ, ಕಾವ್ಯ, ವಿರೂಪಾಕ್ಷ ಇತರರು ಭಾಗವಹಿಸಿದ್ದರು.

ತಿದ್ದುಪಡಿಗೆ ಮೆರವಣಿಗೆ
ತಿಪಟೂರು:
ಸಿಇಟಿ ಹೊಸ ಕಾಯ್ದೆ ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕಾಯ್ದೆ ವಿರುದ್ಧ ಘೋಷಣೆ ಕೂಗಿದರು. ಬಡ ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್, ಹರಿಪ್ರಸಾದ್, ನವೀನ್, ಪ್ರಶಾಂತ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ಸಾಮಾಜಿಕ ನ್ಯಾಯಕ್ಕೆ ಒತ್ತಾಯ
ಗುಬ್ಬಿ:
ರಾಜ್ಯ ಸರ್ಕಾರದ ನೂತನ ಸಿಇಟಿ ಕಾಯ್ದೆ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ತಾಲ್ಲೂಕು ಘಟಕ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆು ಕೂಗಿದರು.

ಎಬಿವಿಪಿ ತಾಲ್ಲೂಕು ಸಂಚಾಲಕ ಅರುಣ್‌, ನಗರ ಕಾರ್ಯದರ್ಶಿ ಎಂ.ಜಿ.ರಂಗನಾಥ, ಸಹ ಕಾರ್ಯದರ್ಶಿ ರಮ್ಯ, ವಿದ್ಯಾರ್ಥಿ ಮುಖಂಡ­ರಾದ ತನ್ಮಯ್‌, ರೇವಣೇಂದ್ರ, ವೆಂಕಟೇಶ್‌, ಲಿಖಿತ್‌, ರಕ್ಷಿತ್‌ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT