ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಅಧಿಕಾರ ತ್ಯಜಿಸಲಿ

Last Updated 6 ಜನವರಿ 2011, 7:15 IST
ಅಕ್ಷರ ಗಾತ್ರ

ಹಾಸನ:‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ನಾಡಿನ ಜನರು ಬಿಜೆಪಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಹೀಗಿರುವಾಗ ಅಧಿಕಾರದಲ್ಲಿ ಮುಂದುವರಿಯಲು ಯಡಿಯೂರಪ್ಪ ಅವರಿಗೆ ನೈತಿಕ ಹಕ್ಕು ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ನುಡಿದಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಒಟ್ಟಾರೆ 176 ತಾಲ್ಲೂಕು ಪಂಚಾಯಿತಿಗಳಲ್ಲಿ 67ರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. 110 ತಾ.ಪಂ.ಗಳಲ್ಲಿ ಬಿಜೆಪಿಗೆ ವಿರುದ್ಧವಾಗಿ ಜನರು ಮತ ಚಲಾಯಿಸಿದ್ದಾರೆ. ಜಿಲ್ಲಾ ಪಂಚಾಯಿತಿಗಳಲ್ಲೂ ಇದೇ ಸ್ಥಿತಿ ಇದೆ. ಒಟ್ಟಾರೆ 30ರಲ್ಲಿ 18 ಜಿ.ಪಂ,ಗಳಲ್ಲಿ ಜನರು ಬಿಜೆಪಿ ವಿರುದ್ಧ ತೀರ್ಪು ನೀಡಿದ್ದಾರೆ. ಹೀಗಿದ್ದರೂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ‘ನಾವೇ ಬಹುಮತ ಪಡೆದಿದ್ದೇವೆ’ ಎಂಬ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದರು.

‘ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಬಿಜೆಪಿ ಸರಳ ಬಹುಮತ ಮಾತ್ರ ಪಡೆದಿದೆ. ಹಣದ ಬಲದಿಂದ ಬಿಜೆಪಿ ಒಟ್ಟಾರೆ 12ಜಿಲ್ಲಾಪಂಚಾಯಿತಿಗಳನ್ನು ಗೆದ್ದಿದೆ. ಪ್ರತಿ ಕ್ಷೇತ್ರಕ್ಕೆ ತಲಾ 25 ರಿಂದ 30ಲಕ್ಷ ರೂಪಾಯಿ ವೆಚ್ಚಮಾಡಿದ್ದಾರೆ. ರಾಜ್ಯದಲ್ಲಿ 500 ಕೋಟಿ ರೂಪಾಯಿ ಚೆಲ್ಲಿ 12  ಜಿ.ಪಂ.ಗಳಲ್ಲಿ ಅಧಿಕಾರ ಪಡೆದಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆಬಾವಿ ಹಾಕಿಸಲೂ ಸಹ ಸರ್ಕಾರದಲ್ಲಿ ಹಣವಿಲ್ಲ. ಹಾಸನಕ್ಕೆ 25 ಕೋಟಿ ಬಿಡುಗಡೆ ಮಾಡುತ್ತೇನೆ ಎಂದಿದ್ದರು ಅದರಲ್ಲಿ 25ರೂಪಾಯಿಯೂ ಬಿಡುಗಡೆಯಾಗಿಲ್ಲ. ತಾಲ್ಲೂಕು ಪಂಚಾಯಿತಿಗಳಿಗೆ ಹತ್ತು ಪೈಸೆ ಅನುದಾನವೂ ಇಲ್ಲ. ಆ ಬಗ್ಗೆ ಚಿಂತಿಸಲೂ ಸರ್ಕಾರಕ್ಕೆ ಸಮಯವಿಲ್ಲ’ ಎಂದು ರೇವಣ್ಣ ಟೀಕಿಸಿದರು.

ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಮಾತನಾಡಿದ ರೇವಣ್ಣ, ‘ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ, ಈಶ್ವರಪ್ಪ,  ಸೋಮಣ್ಣ ಮುಂತಾದವರು ಬಂದು ಪ್ರಚಾರ ಮಾಡಿದರೂ ಇಲ್ಲಿ ಜಿಲ್ಲಾ ಪಂಚಾಯಿತಿಯಲ್ಲಾಗಲಿ, ಒಂದು ತಾಲ್ಲೂಕು ಪಂಚಾಯಿತಿಯಲ್ಲಾಗಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಬಿಜೆಪಿ ಐದು ಸ್ಥಾನ ಗೆದ್ದುಕೊಳ್ಳಲು ಬೇರೆಯೇ ಕಾರಣಗಳಿವೆ. ಸೋಮಣ್ಣ ಪ್ರಭಾ ಎಂಬುದು ಸುಳ್ಳು ಅವರು ಅಷ್ಟು ಪ್ರಭಾವಶಾಲಿಗಳಾಗಿದ್ದರೆ ಶೇ 50ರಷ್ಟು ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಗೆದ್ದಿರುವುದು 5 ಸ್ಥಾನಗಳನ್ನು ಮಾತ್ರ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಅಭಿವೃದ್ಧಿಯಲ್ಲಿ ಹಾಸನ ಜಿ.ಪಂ. ಮೊದಲ ಸ್ಥಾನದಲ್ಲಿತ್ತು. ಈಗ 13ನೇ ಸ್ಥಾನಕ್ಕೆ ಇಳಿದಿದೆ. ಮುಂದೆ ಅದನ್ನು ಮತ್ತೆ ಮೊದಲ ಸ್ಥಾನಕ್ಕೆ ಏರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಕಾಂಗ್ರೆಸ್ ಸಹಕಾರ ನೀಡಲಿ
‘ಬೇಲೂರು ತಾಲ್ಲೂಕು ಪಂಚಾಯಿತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿ ಕಾಂಗ್ರೆಸ್  ನಮಗೆ ಸಹಕಾರ ನೀಡಬಹುದು ಎಂದು ನಿರೀಕ್ಷಿಸಿದ್ದೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಎಚ್.ಕೆ. ಜವರೇಗೌಡ ನುಡಿದರು. ಇಲ್ಲಿನ 17 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಲಾ 7 ಹಾಗೂ ಕಾಂಗ್ರೆಸ್ 3 ಸ್ಥಾನಗಳನ್ನು ಗೆದ್ದುಕೊಂಡಿದೆ.

‘ತಾಲ್ಲೂಕಿನಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೆವು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸ್ಥಳೀಯ ಶಾಸಕ ಕಾಂಗ್ರೆಸ್‌ನವರು, ಇಂಥ ಸ್ಥಿತಿಯಲ್ಲಿ ಉತ್ತಮ ಸಾಧನೆ ಮಾಡುವುದು ಸವಾಲಿನ ಕೆಲಸ. ಅಂಥದ್ದರಲ್ಲೂ ನಾವು 7 ಸ್ಥಾನಗಳನ್ನು ಗೆದ್ದಿದ್ದೇವೆ. ಕಳೆದಬಾರಿ ಮೂರನೇ ಸ್ಥಾನದಲ್ಲಿದ್ದವರು ಈಗ 2ನೇ ಸ್ಥಾನಕ್ಕೆ ಬಂದಿದ್ದೇವೆ. ಬಿಜೆಪಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಕಾಂಗ್ರೆಸ್ ಇಲ್ಲಿ ನಮಗೆ ಸಹಕಾರ ನೀಡಬುದು ಎಂಬ ವಿಶ್ವಾಸವಿದೆ. ಎಲ್ಲರೂ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಜವರೇಗೌಡ ನುಡಿದರು.ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಶಾಸಕ ಎಚ್.ಎಸ್. ಪ್ರಕಾಶ್, ಮಾಜಿ ಶಾಸಕ ಬಿ.ವಿ. ಕರೀಗೌಡ ಹಾಗೂ ಕೆ.ಎಂ. ರಾಜೇಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT