ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ವಿದ್ಯುತ್‌ ಸಂಪರ್ಕ: ರೈತ ಆತಂಕ

Last Updated 13 ಸೆಪ್ಟೆಂಬರ್ 2013, 7:41 IST
ಅಕ್ಷರ ಗಾತ್ರ

ಮಸ್ಕಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಗಂಗಾಕಲ್ಯಾಣ ಯೋಜನೆ  ಲಾಭ ಪಡೆದ ಫಲಾನುಭವಿಯೊಬ್ಬರು 6 ವರ್ಷದಿಂದ ವಿದ್ಯುತ್‌ ಸಂಪರ್ಕಕ್ಕೆ ಕಾದು ಕುಳಿತಿರುವ ಘಟನೆ ಮಸ್ಕಿ ಸಮೀಪದ ಬೈಲಗುಡ್ಡ ಗ್ರಾಮದಲ್ಲಿ ನಡೆದಿದೆ.

2007–08ನೇ ಸಾಲಿನಲ್ಲಿ ಲಿಂಗಸುಗೂರು ಕ್ಷೇತ್ರದ ಶಾಸಕರಾಗಿದ್ದ ಅಮರೇಗೌಡ ಪಾಟೀಲ ಬಯ್ಯಾಪುರ ಅವರ ಶಿಫಾರಸ್ಸಿನ ಮೇಲೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಅಭಿವೃದ್ಧಿ ನಿಗಮದ ಮೂಲಕ ಮಸ್ಕಿ ಸಮೀಪದ ಬೈಲಗುಡ್ಡ ಗ್ರಾಮದ ಬಡ ರೈತ ದ್ಯಾವಪ್ಪ ಗುಂಡಪ್ಪ ಎಂಬುವರಿಗೆ ಗಂಗಾಕಲ್ಯಾಣ ಯೋಜನೆ ಮುಂಜೂರಾಗಿತ್ತು.

ಸರ್ವೆ ನಂ 62/3 ರಲ್ಲಿ 2 ಎಕರೆ ಹೊಲ ಹೊಂದಿರುವ ಈತನಿಗೆ ಗಂಗಾ­ಕಲ್ಯಾಣ ಯೋಜನೆ ಮೂಲಕ ಕೊಳವೆ­ಬಾವಿ ಕೂಡಾ ಕೊರೆಸಲಾಯಿತು. ಪಂಪ್‌ಸೆಟ್‌ ಸೇರಿದಂತೆ ಎಲ್ಲಾ ವಸ್ತುಗಳನ್ನು ಅಭಿವೃದ್ಧಿ ನಿಗಮ ಪೂರೈಕೆ ಮಾಡಿತು, ಅಲ್ಲದೇ ಈತನ ಹೊಲಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಜೆಸ್ಕಾಂಗೆ ಹಣ ಕೂಡಾ ಸಂದಾಯ ಮಾಡಲಾಗಿತ್ತು.

ಹಣ ಪಾವತಿಸಿಕೊಂಡ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಯಚೂರು ಇವರು 2008 ರಲ್ಲಿ ದ್ಯಾವಪ್ಪನ ಹೊಲಕ್ಕೆ ವಿದ್ಯುತ್‌ ಮುಂಜೂರಾತಿ ನೀಡಿ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಆರು ವರ್ಷ ಕಳೆದರೂ ಇನ್ನೂ ಜಾರಿ­ಯಾಗಿಲ್ಲ. ಗಂಗಾಕಲ್ಯಾಣ ಯೋಜ­ನೆಯ ಕೊಳವೆಭಾವಿಗೆ ವಿದ್ಯುತ್‌ ಕಂಬ­ ಹಾಕಿ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ದ್ಯಾವಪ್ಪ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾನೆ.

ತಾತ್ಕಾಲಿಕವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದು ಇದು ಶಾಶ್ವತ ಅಲ್ಲ. ನನಗೆ ಯೋಜನೆ ನಿಯಮದ ಪ್ರಕಾರ ಕಂಬ ಹಾಕಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ಎಂದು ದ್ಯಾವಪ್ಪ ಅಧಿಕಾರಿಗಳಿಗೆ ಒತ್ತಾಯಿ­ಸಿದ್ದಾರೆ.

ದ್ಯಾವಪ್ಪನ ಹೊಲಕ್ಕೆ ವಿದ್ಯುತ್‌ ಮುಂಜೂರಾತಿ ನೀಡಿರುವ ಕಡತ ರಾಯಚೂರಿನ ಜೆಸ್ಕಾಂ ಕಚೇರಿಯಲ್ಲಿ ನಾಪತ್ತೆಯಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ ಎಂದು ಈತನ ಹೊಲಕ್ಕೆ  ವಿದ್ಯುತ್‌ ಕೊಡಿಸಲು ಶ್ರಮಿಸಿದ ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ. ಕಡತದ ಬಗ್ಗೆ ಸಾಕಾಷ್ಟು ಸಲ ಕಚೇರಿಯಲ್ಲಿ ವಿಚಾರಿಸಿದರು ಏನೂ ಪ್ರಯೋಜನವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜೆಸ್ಕಾಂನ ಲಿಂಗಸು­ಗೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಿಯಾಜ್‌ ಇದು ನನ್ನ ಗಮನಕ್ಕೆ ಗಮನಕ್ಕೆ ಇಲ್ಲ ಎಂದಿದ್ದಾರೆ. ಈ ವಿಷಯದ ಬಗ್ಗೆ ಮೇಲಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT