ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿದ ಪ್ಯಾಟಿನ್‌ಸನ್; ಕುಸಿದ ಭಾರತ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ತಿರುಗೇಟು ನೀಡುವುದು ಬದಗಿರಲಿ, ಮೊದಲ ಟೆಸ್ಟ್‌ನ ಆಘಾತದಿಂದಲೇ ಭಾರತ ಕ್ರಿಕೆಟ್ ತಂಡ ಇನ್ನೂ ಹೊರಬಂದಂತಿಲ್ಲ. ಸುನಿಲ್ ಗಾವಸ್ಕರ್ ಹೇಳಿದಂತೆ ಮಹಿ ಪಡೆ ಈ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಗೆಲ್ಲುವುದು ಕೂಡ ಕಷ್ಟ!

ಅದಕ್ಕೆ ಸಾಕ್ಷಿ ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿ. ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 100ನೇ ಟೆಸ್ಟ್ ಸಂಭ್ರಮಕ್ಕೆ ಕಾರಣವಾದ ಈ ಪಂದ್ಯದಲ್ಲಿ ಭಾರತ ತಂಡದ್ದು ಮಾತ್ರ ಅದೇ ರಾಗ ಅದೇ ಹಾಡು.

ದೋನಿ ಬಳಗ ತನ್ನ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದು ಕೇವಲ 191 ರನ್. ಆಘಾತಕ್ಕೆ ಸಿಲುಕಿದ್ದ ತಂಡಕ್ಕೆ ಸಚಿನ್ ತೆಂಡೂಲ್ಕರ್ ಆಸರೆಯಾದರಾದರೂ ಶತಕಗಳ ಶತಕದ ಕನಸು ಕೈಗೂಡಲಿಲ್ಲ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯಕ್ಕೆ 26 ಓವರ್‌ಗಳಲಿ 3 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ.

ಆತಿಥೇಯರು ಕೇವಲ 37 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿದ್ದರು. ಆದರೆ ಈ ಮೂರೂ ವಿಕೆಟ್ ಕಬಳಿಸಿದ್ದ ಎಡಗೈ ವೇಗಿ ಜಹೀರ್ ಖಾನ್ ಅವರಿಗೆ ಸರಿಯಾದ ಸಾಥ್ ಸಿಗಲಿಲ್ಲ. ಈ ಸರಣಿಯಲ್ಲಿ ಫಾರ್ಮ್ ಕಂಡುಕೊಂಡಿರುವ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ನಾಯಕ ಮೈಕಲ್ ಕ್ಲಾರ್ಕ್ ಜೊತೆಯಾಟ ಆಸೀಸ್‌ಗೆ ಶ್ರೀರಕ್ಷೆಯಾಯಿತು.

ಕಾಂಗರೂ ನಾಡಿನ ಪಿಚ್‌ಗಳ ಪೈಕಿ ಸಿಡ್ನಿ `ಬ್ಯಾಟ್ಸ್‌ಮನ್ ಸ್ನೇಹಿ~ ಎನಿಸಿದೆ. ಆದರೆ ಈ ಪಿಚ್‌ನಲ್ಲೂ ಪುಟಿದೇಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಮೊದಲ ದಿನವೇ 13 ವಿಕೆಟ್‌ಗಳು ಪತನಗೊಂಡವು. 1882ರ ಬಳಿಕ ಈ ಕ್ರೀಡಾಂಗಣದಲ್ಲಿ ಮೊದಲ ದಿನವೇ 11ಕ್ಕಿಂತ ಹೆಚ್ಚು ವಿಕೆಟ್ ಬಿದ್ದಿರಲಿಲ್ಲ. ಆದರೆ ಭಾರತದ ಬ್ಯಾಟ್ಸ್‌ಮನ್‌ಗಳು ಪೆರೇಡ್ ನಡೆಸುವ ಮೂಲಕ ಆ ದಾಖಲೆ ಅಳಿಸಿ ಹಾಕಲು ಪ್ರಮುಖ ಕಾರಣರಾದರು.

ಕೇವಲ ನಾಲ್ಕನೇ ಟೆಸ್ಟ್ ಪಂದ್ಯ ಆಡುತ್ತಿರುವ ಯುವ ವೇಗಿ ಜೇಮ್ಸ ಪ್ಯಾಟಿನ್‌ಸನ್ (43ಕ್ಕೆ4) ದಾಳಿಗೆ ಶ್ರೇಷ್ಠ ಆಟಗಾರರನ್ನು ಒಳಗೊಂಡಿರುವ ಭಾರತ ತತ್ತರಿಸಿ ಹೋಯಿತು. ಈ ಹಿಂದಿನ ಮೂರು ಪಂದ್ಯಗಳಲ್ಲಿ ಎರಡರಲ್ಲಿ `ಪಂದ್ಯ ಶ್ರೇಷ್ಠ~ ಗೌರವ ಪಡೆದಿರುವ ಪ್ಯಾಟಿನ್‌ಸನ್ ಅವರಿಗೆ ಮೊದಲ ದಿನದ ಗೌರವ ಸಲ್ಲಬೇಕು. ಈಗಾಗಲೇ ಅವರು ಒಟ್ಟು 24 ವಿಕೆಟ್ ಕಬಳಿಸಿದ್ದಾರೆ.

ವಿದೇಶದಲ್ಲಿ ಆಡಿದ ಕೊನೆಯ 12 ಟೆಸ್ಟ್‌ಗಳಲ್ಲಿ ಭಾರತ ತಂಡ 300ಕ್ಕಿಂತ ಕಡಿಮೆ ಸ್ಕೋರ್ ಮಾಡುತ್ತಿರುವುದು ಇದು 16ನೇ ಬಾರಿ ಎಂಬುದು ದುರಂತ. ಈ ಪಂದ್ಯದಲ್ಲಿ ಸಚಿನ್ ಹಾಗೂ ನಾಯಕ ದೋನಿ ತಂಡಕ್ಕೆ ಆಸರೆ ಆಗದಿದ್ದರೆ ಅಧೋಗತಿ.

ತೆಂಡೂಲ್ಕರ್  ಕ್ರೀಸ್‌ಗೆ ಬರುವಾಗ ಕ್ರೀಡಾಂಗಣದಲ್ಲಿದ್ದ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಸ್ವಾಗತ ಕೋರಿದರು. ಒತ್ತಡವಿದ್ದರೂ ಸಚಿನ್ (41; 89 ಎಸೆತ, 8 ಬೌಂಡರಿ) ಆತಿಥೇಯ ವೇಗಿಗಳನ್ನು ಸಮರ್ಥವಾಗಿ ಎದುರಿಸುತ್ತಾ ಮುನ್ನಡೆದಿದ್ದರು.

ಆದರೆ ವೈಡ್ ಎಸೆತವೊಂದನ್ನು ಡ್ರೈವ್ ಮಾಡಲು ಹೋದಾಗ ಬ್ಯಾಟ್‌ನಂಚಿಗೆ ಬಡಿದ ಚೆಂಡು ವಿಕೆಟ್‌ಗೆ ಅಪ್ಪಳಿಸಿತು. ತೆಂಡೂಲ್ಕರ್ ಅವರ 22 ಸಂವತ್ಸರಗಳ ಅಂತರರಾಷ್ಟ್ರೀಯ ಕ್ರಿಕೆಟ್ ಅನುಭವಕ್ಕಿಂತ ಒಂದು ವರ್ಷ ಕಡಿಮೆ ವಯಸ್ಸಿನ ವೇಗಿ ಪ್ಯಾಟಿನ್‌ಸನ್ ಅವರ ಸಂಭ್ರಮಕ್ಕೆ ಕೊನೆಯೇ ಇರಲಿಲ್ಲ. ಆದರೆ ಕಿಕ್ಕಿರಿದು ತುಂಬಿದ್ದ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾತ್ರ ಕೊಂಚ ಹೊತ್ತು ಮೌನ ನೆಲೆಸಿತ್ತು. ಆಸ್ಟ್ರೇಲಿಯಾ ತಂಡದ ಅಭಿಮಾನಿಗಳು ಕೂಡ ನಿರಾಸೆಗೊಳಗಾದರು!

ದೋನಿ ಕೂಡ ಬ್ಯಾಕ್‌ಫುಟ್ ಪಂಚ್‌ಗಳ ಮೂಲಕ ಸರಾಗವಾಗಿ ರನ್ ಗಳಿಸುತ್ತಿದ್ದರು. ಆದರೆ ಅವರಿಗೆ ಮತ್ತೊಂದು ಕಡೆಯಿಂದ ಸರಿಯಾದ ಸಾಥ್ ಸಿಗಲಿಲ್ಲ. ಹಾಗಾಗಿ 57 ರನ್ (77 ಎಸೆತ, 8 ಬೌಂಡರಿ) ಗಳಿಸಿ ಅಜೇಯರಾಗುಳಿಯಬೇಕಾಯಿತು. ಅದಕ್ಕೆ ಕಾರಣ ಕೊನೆಯ ನಾಲ್ಕು ವಿಕೆಟ್‌ಗಳು ಕೇವಲ 13 ರನ್‌ಗಳ ಅಂತರದಲ್ಲಿ ಪತನಗೊಂಡವು. ಜಹೀರ್, ಇಶಾಂತ್ ಹಾಗೂ ಉಮೇಶ್ ಹಾಗೇ ಬಂದು ಹೀಗೆ ಹೋದರು.
 
ಆದರೆ ತಂಡವನ್ನು ಮತ್ತೆ `ನಡುನೀರಿನಲ್ಲಿ~ ಕೈಬಿಟ್ಟಿದ್ದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು. ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿಯೇ ಆಸ್ಟ್ರೇಲಿಯಾಕ್ಕೆ ಬಂದಿದ್ದರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಆಟಗಾರರಿಗೆ ಸಾಧ್ಯವಾಗಿಲ್ಲ.

ಅದಕ್ಕೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಅವರಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ನಂಬಿಕಸ್ತ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳು ಎನಿಸಿರುವ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕೂಡ ಹಳಿ ತಪ್ಪಿದವರಂತೆ ಕಾಣುತ್ತಿದ್ದಾರೆ. ಸ್ಲಿಪ್‌ನಲ್ಲಿದ್ದ ಕ್ಲಾರ್ಕ್‌ಗೆ ಕ್ಯಾಚ್ ನೀಡುವ ಮುನ್ನ ಗಂಭೀರ್ ಎದುರಿಸಿದ್ದು ಕೇವಲ ಮೂರು ಎಸೆತ. ಸೆಹ್ವಾಗ್ ಅಬ್ಬರದ ಬ್ಯಾಟಿಂಗ್ ಪ್ಯಾಟಿನ್‌ಸನ್ ಮುಂದೆ ನಡೆಯಲಿಲ್ಲ.

ಈ ಸರಣಿಯಲ್ಲಿ ಸತತ ಮೂರನೇ ಬಾರಿಗೆ ಅವರಿಗೆ ವಿಕೆಟ್ ಒಪ್ಪಿಸಿದರು. ತಮಗೆ ಲಭಿಸಿದ್ದ ಜೀವದಾನದ ಲಾಭವನ್ನೂ ಅವರು ಉಪಯೋಗಿಸಿಕೊಳ್ಳಲಿಲ್ಲ. 33 ಎಸೆತಗಳನ್ನು ಎದುರಿಸಿದ್ದ ದ್ರಾವಿಡ್ ಹಾಗೂ ಲಕ್ಷ್ಮಣ್ ಅವರ ವಿಕೆಟ್ ಬೇಗನೇ ಪಡೆದ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ ಸಾಧಿಸಿತು.

ಬಳಿಕ ಬೌಲಿಂಗ್‌ನಲ್ಲಿ ಜಹೀರ್ ನೆರವಿನಿಂಧ ಭಾರತ ಮೇಲುಗೈ ಸಾಧಿಸುವ ಸುಳಿವು ನೀಡಿತ್ತು. ಸತತ ಎರಡು ಎಸೆತಗಳಲ್ಲಿ ವಾರ್ನರ್ ಹಾಗೂ ಮಾರ್ಷ್ ವಿಕೆಟ್ ಪಡೆದ ಎಡಗೈ ವೇಗಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಹಂತದಲ್ಲಿದ್ದರು. ಆದರೆ ಪಾಂಟಿಂಗ್ (ಬ್ಯಾಟಿಂಗ್ 44) ಹಾಗೂ ಕ್ಲಾರ್ಕ್ (ಬ್ಯಾಟಿಂಗ್ 47) ಮುರಿಯದ 4ನೇ ವಿಕೆಟ್‌ಗೆ 79 ರನ್ ಸೇರಿಸಿ ಆಸ್ಟ್ರೇಲಿಯಾ ತಂಡವನ್ನು ಆರಂಭದ ಆಘಾತದಿಂದ ಪಾರು ಮಾಡಿದರು.

ಸ್ಥಳೀಯ ಆಟಗಾರ ಎಡ್ ಕೊವನ್ ನಿರಾಸೆ ಮೂಡಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ವಾರ್ನರ್ ಬ್ಯಾಟ್‌ಗೆ ತಾಗಿದ್ದ ಚೆಂಡು ಎರಡನೇ ಸ್ಲಿಪ್‌ನಲ್ಲಿದ್ದ ಲಕ್ಷ್ಮಣ್ ಕೈಗೆ ತಾಗಿ ನೆಲಕ್ಕೆ ಬೀಳುವ ಹಂತದಲ್ಲಿತ್ತು. ಆದರೆ ಪಕ್ಕದಲ್ಲಿಯೇ ಮೊದಲ ಸ್ಲಿಪ್‌ನಲ್ಲಿದ್ದ ಸಚಿನ್ ಅದಕ್ಕೆ ಅವಕಾಶ ನೀಡಲಿಲ್ಲ.

ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 59.3 ಓವರ್‌ಗಳಲ್ಲಿ 191

ಗೌತಮ್ ಗಂಭೀರ್ ಸಿ ಕ್ಲಾರ್ಕ್ ಬಿ ಜೇಮ್ಸ ಪ್ಯಾಟಿನ್‌ಸನ್  00
ವೀರೇಂದ್ರ ಸೆಹ್ವಾಗ್ ಸಿ ಹಡಿನ್ ಬಿ ಜೇಮ್ಸ ಪ್ಯಾಟಿನ್‌ಸನ್  30
ರಾಹುಲ್ ದ್ರಾವಿಡ್ ಸಿ ಎಡ್ ಕೋವನ್ ಬಿ ಪೀಟರ್ ಸಿಡ್ಲ್  05
ಸಚಿನ್ ತೆಂಡೂಲ್ಕರ್ ಬಿ ಜೇಮ್ಸ ಪ್ಯಾಟಿನ್‌ಸನ್  41
ವಿ.ವಿ.ಎಸ್.ಲಕ್ಷ್ಮಣ್ ಸಿ ಮಾರ್ಷ್ ಬಿ ಜೇಮ್ಸ ಪ್ಯಾಟಿನ್‌ಸನ್  02
ವಿರಾಟ್ ಕೊಹ್ಲಿ ಸಿ ಬ್ರಾಡ್ ಹಡಿನ್ ಬಿ ಪೀಟರ್ ಸಿಡ್ಲ್  23
ಮಹೇಂದ್ರ ಸಿಂಗ್ ದೋನಿ ಔಟಾಗದೆ  57
ಆರ್.ಅಶ್ವಿನ್ ಸಿ ಮೈಕಲ್ ಕ್ಲಾರ್ಕ್ ಬಿ ಬೆನ್ ಹಿಲ್ಫೆನ್ಹಾಸ್  20
ಜಹೀರ್ ಖಾನ್ ಸಿ ಎಡ್ ಕೋವನ್ ಬಿ ಬೆನ್ ಹಿಲ್ಫೆನ್ಹಾಸ್  00
ಇಶಾಂತ್ ಶರ್ಮ ಸಿ ಎಡ್ ಕೋವನ್ ಬಿ ಬೆನ್ ಹಿಲ್ಫೆನ್ಹಾಸ್  00
ಉಮೇಶ್ ಯಾದವ್ ಸಿ ಬ್ರಾಡ್ ಹಡಿನ್ ಬಿ ಪೀಟರ್ ಸಿಡ್ಲ್  00
ಇತರೆ: (ಬೈ-3, ಲೆಗ್‌ಬೈ-6, ವೈಡ್-2, ನೋಬಾಲ್-2)  13
ವಿಕೆಟ್ ಪತನ: 1-0 (ಗಂಭೀರ್; 0.3); 2-30 (ದ್ರಾವಿಡ್; 10.3); 3-55 (ಸೆಹ್ವಾಗ್; 18.2); 4-59 (ಲಕ್ಷ್ಮಣ್; 20.5); 5-96 (ಕೊಹ್ಲಿ; 32.6); 6-124 (ತೆಂಡೂಲ್ಕರ್; 40.5); 7-178 (ಅಶ್ವಿನ್; 54.2); 8-178 (ಜಹೀರ್; 54.3); 9-186 (ಇಶಾಂತ್; 56.3); 10-191 (ಉಮೇಶ್; 59.3).
ಬೌಲಿಂಗ್: ಜೇಮ್ಸ ಪ್ಯಾಟಿನ್‌ಸನ್ 14-3-43-4  (ನೋಬಾಲ್-1, ವೈಡ್-2), ಬೆನ್ ಹಿಲ್ಫೆನ್ಹಾಸ್ 22-9-51-3, ಪೀಟರ್ ಸಿಡ್ಲ್ 13.3-3-55-3 (ನೋಬಾಲ್-1), ಮೈಕ್ ಹಸ್ಸಿ 2-0-8-0, ನೇಥನ್ ಲಿಯೋನ್ 8-0-25-0

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 26 ಓವರ್‌ಗಳಲ್ಲಿ
3 ವಿಕೆಟ್ ನಷ್ಟಕ್ಕೆ 116

ಡೇವಿಡ್ ವಾರ್ನರ್ ಸಿ ಸಚಿನ್ ತೆಂಡೂಲ್ಕರ್ ಬಿ ಜಹೀರ್ ಖಾನ್ 08
ಎಡ್ ಕೋವನ್ ಎಲ್‌ಬಿಡಬ್ಲ್ಯು ಬಿ ಜಹೀರ್ ಖಾನ್  16
ಶಾನ್ ಮಾರ್ಷ್ ಸಿ ವಿ.ವಿ.ಎಸ್.ಲಕ್ಷ್ಮಣ್ ಬಿ ಜಹೀರ್‌ಖಾನ್  00
ರಿಕಿ ಪಾಂಟಿಂಗ್ ಬ್ಯಾಟಿಂಗ್  44
ಮೈಕಲ್ ಕ್ಲಾರ್ಕ್ ಬ್ಯಾಟಿಂಗ್  47
ಇತರೆ: (ಲೆಗ್‌ಬೈ-1)  01
ವಿಕೆಟ್ ಪತನ: 1-8 (ವಾರ್ನರ್; 0.6); 2-8 (ಮಾರ್ಷ್; 2.1); 3-37 (ಕೋವನ್; 8.5).
ಬೌಲಿಂಗ್: ಜಹೀರ್ ಖಾನ್ 9-2-26-3, ಉಮೇಶ್ ಯಾದವ್ 8-1-42-0, ಇಶಾಂತ್ ಶರ್ಮ 6-0-30-0, ಆರ್. ಅಶ್ವಿನ್ 2-0-11-0, ವೀರೇಂದ್ರ ಸೆಹ್ವಾಗ್ 1-0-6-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT