ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನೆನಪು ದೀರ್ಘ: ವೆಂಕಟ್

Last Updated 20 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ

‘ಅತಿಬುದ್ಧಿವಂತಿಕೆ ಪ್ರದರ್ಶನಕ್ಕಿಂತ ಸಾಮಾನ್ಯರಿಗೆ ತಲುಪುವ ನಟನಾಗಿ ಉಳಿಯಬೇಕು, ಬೆಳೆಯಬೇಕು’ ಎಂಬ ಆಸೆಹೊತ್ತ ನಟ ವೆಂಕಟ್.
ಬೆಂಗಳೂರು ಮೂಲದ ವೆಂಕಟ್‌ರ ತಂದೆ ರಾಮರಾಜು. ಅವರು ಹವ್ಯಾಸಿ ರಂಗಭೂಮಿ ನಟ. ಅವರ ಮಾರ್ಗದರ್ಶನ, ಉತ್ತೇಜನದಿಂದ ಇಂದು ವೆಂಕಟ್ ಬಣ್ಣದ ಬದುಕಿನಲ್ಲಿ ಮೀಯುತ್ತಿದ್ದಾರೆ.

ತಂದೆಗೆ ಬಣ್ಣದ ನಂಟಿದ್ದರಿಂದ ಬಾಲನಟರಾಗಿ ನಾಟಕ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡ ವೆಂಕಟ್, ಬಾಲಕನಾಗಿ ಮೊದಲು ನಟಿಸಿದ ‘ಮೂಕಬಲಿ’ ನಾಟಕದ ಅಭಿನಯಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಪಡೆದವರು. ಬಳಿಕ ‘ಹುಲಿಹೆಬ್ಬುಲಿ’, ’ಆಪತ್ಭಾಂಧವ’, ‘ಪ್ರತಾಪ್’ ಮುಂತಾದ ಚಲನಚಿತ್ರಗಳಲ್ಲಿ ತಮ್ಮ ಬಾಲ ಪ್ರತಿಭೆ ತೋರಿಸಿದರು.

ಸಿನಿಮಾದಲ್ಲಿ ತಮಗೆ ಮೊದಲು ಅವಕಾಶ ನೀಡಿದ ಶಂಕರ್‌ನಾಗ್ ಅವರನ್ನು ಸ್ಮರಿಸುವ ವೆಂಕಟ್, ಆನಂತರ ಹೆಚ್ಚು ರಂಗಭೂಮಿ ಕಡೆಗೆ ವಾಲಿದರು. ಸಿ.ಜಿ.ಕೃಷ್ಣಮೂರ್ತಿ, ಪ್ರಮೋದ್ ಶಿಗ್ಗಾಂವ್, ಸುರೇಶ್ ಆನಗಳ್ಳಿ ಹೀಗೆ ರಂಗಭೂಮಿಯ ಪ್ರಮುಖರ ಕೈಕೆಳಗೆ ದುಡಿದಿರುವ ಅವರು ಆರ್.ನಾಗೇಶ್ ಅವರನ್ನು ‘ಗುರು’ ಎನ್ನುತ್ತಾರೆ.

‘ಅಂಬೇಡ್ಕರ್’, ‘ದಿಲ್ಲಿ ಚಲೋ’, ‘ಮುಳ್ಳಿನ ಕಿರೀಟ’, ‘ಪಂಪಭಾರತ’, ‘ಮಸ್ತಕಾಭಿಷೇಕ ರಿಹರ್ಸಲ್’, ‘ದಿಲ್ ಮಾಂಗೆ ಮೋರ್’, ‘ಗಾಂಧಿ ಬಂದ’, ‘ಏಕಲವ್ಯ’ ಇವು ಅವರು ನಟಿಸಿದ ಪ್ರಮುಖ ನಾಟಕಗಳು.ರಂಗ ನಿರಂತರ, ಕಲಾಸಂಗಮ ಕ್ರಿಯೇಷನ್ಸ್, ಅನೇಕ, ಸಮೂದಾಯ, ರಂಗಮಂಟಪ ಹೀಗೆ ತಂಡಗಳಲ್ಲಿ ತೊಡಗಿಸಿಕೊಂಡಿರುವ ಅವರು, ‘ನಾನು ಯಾವುದೇ ತಂಡಕ್ಕೆ ಸೇರಿದವನಲ್ಲ. ಕನ್ನಡ ರಂಗಭೂಮಿಗೆ ಸೇರಿದ ನಟ’ ಎನ್ನುತ್ತಾರೆ.

ಆರ್.ನಾಗೇಶ್ ಅವರ ಸಲಹೆ ಮೇರೆಗೆ ತಮ್ಮ ವೆಂಕಟರಾಜು ಹೆಸರನ್ನು ವೆಂಕಟ್ ಎಂದು ಬದಲಿಸಿಕೊಂಡಿರುವ ಅವರು ಇದೀಗ ಬೆಳ್ಳಿತೆರೆಯಲ್ಲಿ ಮಿಂಚುವ ಹಂಬಲ ಹೊತ್ತಿದ್ದಾರೆ.  ಮೊದಲಿಗೆ ಮಹೇಶ್ ಸುಖಧರೆ ನಿರ್ದೇಶನದ ‘ಮಳೆಬಿಲ್ಲೆ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅವರು, ‘ತಮಸ್ಸು’, ‘ಶಬರಿ’, ‘ಬೇಲಿ ಮತ್ತು ಹೊಲ’, ‘ಆತ್ಮಸಾಕ್ಷಿ’  ಚಿತ್ರಗಳಲ್ಲಿ ನಟಿಸಿದರು. ಸದ್ಯ ಬರಗೂರು ಮತ್ತು ಸುಖಧರೆ ಅವರ ಮುಂದಿನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಈ ನಡುವೆ ಶ್ರೀನಿವಾಸಮೂರ್ತಿ ಅವರ ‘ಅಣ್ಣ ಬಸವಣ್ಣ’ ಧಾರಾವಾಹಿಯಲ್ಲಿ ನಟಿಸಿದ ವೆಂಕಟ್, ಆನಂತರ ಕಿರುತೆರೆಯಲ್ಲಿಯೂ ಹಾದಿ ಕಂಡುಕೊಂಡರು. ಬಾಲನಟನಾಗಿ ‘ವಿಪರ್ಯಾಸ’ ಧಾರಾವಾಹಿಯಲ್ಲಿ ನಟಿಸಿದ್ದ ಅನುಭವ ಹೊತ್ತಿದ್ದ ಅವರು, ‘ಪರಮಪದ’, ‘ವನಿತಾ’ ಧಾರಾವಾಹಿಗಳಿಗೆ ಬಣ್ಣ ಹಚ್ಚಿದರು. ‘ಸಿನಿಮಾದಲ್ಲಿ ಲೈಫ್ ಇರುತ್ತೆ. ಅದರಿಂದ ಸಿನಿಮಾ ಕಡೆಗೆ ನನಗೆ ಹೆಚ್ಚು ಒಲವು. ಧಾರಾವಾಹಿ ಪ್ರಸಾರವಾಗುತ್ತಿರುವ ತನಕ ಮಾತ್ರ ಜನರ ಮನದಲ್ಲಿ ನಾವು ಇರುತ್ತೇವೆ. ಆದರೆ ಸಿನಿಮಾದ ನೆನಪು ದೀರ್ಘಕಾಲಿಕ. ಅಲ್ಲಿ ಹೆಚ್ಚು ವೃತ್ತಿಪರತೆ ಇರುತ್ತದೆ. ಧಾರಾವಾಹಿಯಲ್ಲಿ ಅಡ್ಜೆಸ್ಟ್‌ಮೆಂಟ್ ಮಾಡಲಾಗುತ್ತದೆ’ ಎನ್ನುವ ವೆಂಕಟ್‌ಗೆ ಸವಾಲೊಡ್ಡುವ ಪಾತ್ರಗಳು ಬೇಕು.

ಜನರಿಗೆ ತಲುಪುವ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಅವರು, ‘ಸಿನಿಮಾದಲ್ಲಿ ಯಾರು ಚೆನ್ನಾಗಿ ನಟಿಸಿರುತ್ತಾರೆಯೋ ಅವರೇ ಹೀರೋ’ ಎನ್ನುತ್ತಾರೆ. ರಾಜ್‌ಕುಮಾರ್, ಅಮಿತಾಭ್ ಬಚ್ಚನ್ ಅವರಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎನ್ನುವ ಹಂಬಲ ಹೊತ್ತಿರುವ ವೆಂಕಟ್‌ಗೆ ನಟನೆಯಿಂದ ಆತ್ಮತೃಪ್ತಿ ಸಿಗುತ್ತಿದೆಯಂತೆ.

ಬಿಡುವಿನ ಸಮಯದಲ್ಲಿ ಸಣ್ಣಕತೆ, ವಿಚಾರ ಲೇಖನ ಮತ್ತು ಪತ್ರಿಕೆ ಹಾಗೂ ವಾರಪತ್ರಿಕೆಗಳನ್ನು ಓದುವ ಅವರು ಡಿಪ್ಲಮೋ ಪದವೀಧರ.
‘ಗ್ರಾಂಥಿಕ ಅನುಭವಕ್ಕಿಂತ ಪ್ರಾಯೋಗಿಕ ಅನುಭವ ದೊಡ್ಡದು’ ಎನ್ನುವ ವೆಂಕಟ್, ಸಂಸ್ಥೆಗಳಿಂದ ಅಭಿನಯ ಕಲಿಯಲು ಸಾಧ್ಯವಿಲ್ಲ ಎಂದು ನಂಬುತ್ತಾರೆ.

ತಮಿಳು, ತೆಲುಗು ನಾಟಕಗಳಲ್ಲೂ ನಟಿಸಿರುವ ಅವರಿಗೆ ಪೂರ್ಣ ಪ್ರಮಾಣದಲ್ಲಿ ಬಸವಣ್ಣನ ಪಾತ್ರ ನಿರ್ವಹಿಸುವ ಕನಸಿದೆ. ಸದ್ಯ ಪಂಪ ಸಾಂಸ್ಕೃತಿಕ ತಂಡ ಕಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ವೆಂಕಟ್‌ಗೆ ‘ಗಟ್ಟಿ ನಟ’ ಎನಿಸಿಕೊಳ್ಳುವಾಸೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT