ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಖೆಡ್ಡಾಕ್ಕೆ ಬಿದ್ದ ಜನಾರ್ದನ ರೆಡ್ಡಿ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಓಬಳಾಪುರಂ ಗಣಿ ಕಂಪೆನಿ ನಿರ್ದೇಶಕ, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕಳೆದ ಕೆಲ ವರ್ಷಗಳಿಂದ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದರು. ನಿರಂತರವಾಗಿ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ತನಿಖಾ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಬಚಾವಾಗುತ್ತಿದ್ದ ರೆಡ್ಡಿ, ಈ ಬಾರಿ ನೇರವಾಗಿ ಸಿಬಿಐ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಬಳ್ಳಾರಿಯ ಗಣಿ ಸಾಮ್ರಾಜ್ಯದ ವಲಯದಲ್ಲಿ `ಜಿಜೆಆರ್ ಸರ್~ ಎಂದೇ ಪ್ರಚಲಿತರಾಗಿದ್ದ ಜನಾರ್ದನ ರೆಡ್ಡಿ ಅವರ ರಾಜಕೀಯ ಪ್ರಭಾವ ಇತ್ತೀಚೆಗೆ ಕುಸಿಯತೊಡಗಿತ್ತು. ಅದರ ಪರಿಣಾಮವಾಗಿ ಗಣಿ ಉದ್ಯಮದ ಮೇಲಿನ ಹಿಡಿತವೂ ಕೈಜಾರುತ್ತಿತ್ತು. ಈಗ ಅವರ ಸಾಮ್ರಾಜ್ಯವೇ ಪತನದ ಅಂಚಿಗೆ ತಲುಪಿದೆ.

`ರೆಡ್ಡಿ ಸಹೋದರರು~ ಎಂದೇ ಖ್ಯಾತರಾಗಿದ್ದ ಜನಾರ್ದನ ರೆಡ್ಡಿ, ಜಿ.ಕರುಣಾಕರ ರೆಡ್ಡಿ ಮತ್ತು ಅವರ ನಿಕಟವರ್ತಿ ಬಿ.ಶ್ರೀರಾಮುಲು ತಮ್ಮ ರಾಜಕೀಯ ಪ್ರಭಾವವನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ವ್ಯವಹಾರ ವಿಸ್ತರಣೆಗೆ ಬಳಸಿಕೊಂಡಿದ್ದರು. ಈ ಮೂವರೂ ರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರು. ಯಥೇಚ್ಛ ಗಣಿ ಸಂಪತ್ತು ಹೊಂದಿರುವ ಬಳ್ಳಾರಿಗೆ ಜನಾರ್ದನ ರೆಡ್ಡಿಯೇ ಉಸ್ತುವಾರಿ ಸಚಿವರಾಗಿದ್ದು, ಸಂಪೂರ್ಣ ಹಿಡಿತ ಹೊಂದಿದ್ದರು. ಮೂವರೂ ರಾಜ್ಯ ಸರ್ಕಾರದ ಮೇಲೂ ಪ್ರಬಲ ಹಿಡಿತ ಸಾಧಿಸಿದ್ದರು.

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ರಾಜ್ಯದ ಲೋಕಾಯುಕ್ತರು ಬಳ್ಳಾರಿಯಲ್ಲಿನ ಅಕ್ರಮ ಗಣಿಗಾರಿಕೆಯಲ್ಲಿ `ಜಿಜೆಆರ್ ಸರ್~ ಪಾತ್ರ ಕುರಿತು ತಮ್ಮ ವರದಿಯಲ್ಲಿ ಹತ್ತು ಅಧ್ಯಾಯಗಳನ್ನು ಮೀಸಲಿಟ್ಟಿದ್ದರು. `ಜಿಜೆಆರ್ ಸರ್~ ಅಧೀನದಲ್ಲಿ ಬಳ್ಳಾರಿ ಒಂದು ಪ್ರತ್ಯೇಕ ಗಣರಾಜ್ಯವೇ ಆಗಿ ಮಾರ್ಪಟ್ಟಿದೆ ಎಂದು ವರದಿಯಲ್ಲಿ ತಿಳಿಸಿದ್ದ ಲೋಕಾಯುಕ್ತರು, ಅವರು ಅಕ್ರಮ ಗಣಿಗಾರಿಕೆ ಮೇಲೆ ನಿಯಂತ್ರಣ ಸಾಧಿಸಲು ಆಡಳಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ಬಹಿರಂಗಪಡಿಸಿದ್ದರು.

 ಮೂವರು ಮಾಜಿ ಸಚಿವರ ವಿರುದ್ಧವೂ ಸಂಬಂಧಿಸಿದ ಇಲಾಖೆಗಳು ಹೆಚ್ಚಿನ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿದ್ದರು.

ನೆರೆಯ ಆಂಧ್ರಪ್ರದೇಶದಲ್ಲೂ ರೆಡ್ಡಿ ಸಹೋದರರು ಸಾಕಷ್ಟು ಪ್ರಭಾವ ಹೊಂದಿದ್ದರು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ರೆಡ್ಡಿ ಸಹೋದರರಿಗೆ ನಿಕಟವಾಗಿದ್ದರು. ಓಬಳಾಪುರಂ ಗಣಿ ಕಂಪೆನಿಗೆ 2004ರಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಲಪನಗುಡಿ ಪ್ರದೇಶದಲ್ಲಿ ಗಣಿ ಗುತ್ತಿಗೆ ನೀಡಲು ರಾಜಶೇಖರ ರೆಡ್ಡಿ ಅವರೇ ಶಿಫಾರಸು ಮಾಡಿದ್ದರು. ಈ ಗಣಿಯೇ ನಂತರದ ದಿನಗಳಲ್ಲಿ ವಿವಾದದ ಕೇಂದ್ರ ಬಿಂದುವಾಗಿತ್ತು.

ಓಎಂಸಿ ಭಾರಿ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂಬ ಗಂಭೀರ ಆರೋಪ 2006ರಲ್ಲಿ ಕೇಳಿಬಂದಿತ್ತು. ಮೀಸಲು ಅರಣ್ಯ ಪ್ರದೇಶದ ಒತ್ತುವರಿ, ನೆರೆಯ ಗಣಿಗಳ ಒತ್ತುವರಿ, ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ, ಅಂತರರಾಜ್ಯ ಗಡಿ ರೇಖೆ ನಾಶ, ಅಕ್ರಮ ಅದಿರು ಸಾಗಣೆ ಮತ್ತಿತರ ಆರೋಪಗಳು ಓಎಂಸಿ ವಿರುದ್ಧ ಕೇಳಿಬಂದಿದ್ದವು. ಆದರೆ, ಯಾವುದೇ ಕ್ರಮವನ್ನೂ ಜರುಗಿಸಿರಲಿಲ್ಲ.

2009ರಲ್ಲಿ ರಾಜಶೇಖರ ರೆಡ್ಡಿ ಅವರು ಅಕಾಲಿಕ ಮರಣ ಹೊಂದಿದ್ದು, ರೆಡ್ಡಿಗಳ ಪಾಲಿಗೆ ದೊಡ್ಡ ಆಘಾತ ಸೃಷ್ಟಿಸಿತು. ನಂತರದ ದಿನಗಳಲ್ಲಿ ವೈಎಸ್‌ಆರ್ ಪುತ್ರ ಜಗನ್ ಕಾಂಗ್ರೆಸ್ ಪಕ್ಷವನ್ನೇ ಎದುರು ಹಾಕಿಕೊಂಡರು. ಜಗನ್ ಮತ್ತು ರೆಡ್ಡಿ ಸಹೋದರರ ನಡುವಿನ ಸಂಶಯಾಸ್ಪದ ಹಣಕಾಸು ವ್ಯವಹಾರಗಳು ಇದೇ ಅವಧಿಯಲ್ಲಿ ಬಯಲಿಗೆ ಬರಲಾರಂಭಿಸಿದ್ದವು.

2009ರ ನವೆಂಬರ್‌ನಲ್ಲಿ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ಕೆ.ರೋಸಯ್ಯ ಅವರು ಓಎಂಸಿ ವಿರುದ್ಧದ ಅಕ್ರಮ ಗಣಿಗಾರಿಕೆ ಆರೋಪ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ್ದರು. ಆರಂಭದಲ್ಲಿ ಈ ಆದೇಶಕ್ಕೆ ಆಂಧ್ರಪ್ರದೇಶ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆಯುವಲ್ಲಿ ರೆಡ್ಡಿ ಯಶಸ್ವಿಯಾಗಿದ್ದರು. ಆದರೆ, ನಂತರದ ದಿನಗಳಲ್ಲಿ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು. ಬಳಿಕ ತನಿಖೆ ಸರಾಗವಾಗಿ ಸಾಗಿತು.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ರೆಡ್ಡಿ ಸಹೋದರರು ತಮ್ಮ `ತಾಯಿ~ ಎಂದೇ ಬಿಂಬಿಸುತ್ತಿದ್ದ ಲೋಕಸಭೆಯ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ದೂರವಾದರು. ಲೋಕಾಯುಕ್ತ ವರದಿಯಲ್ಲಿ ಗಂಭೀರ ಸ್ವರೂಪದ ಆರೋಪಗಳಿವೆ ಎಂಬ ಕಾರಣಕ್ಕೆ ಡಿ.ವಿ.ಸದಾನಂದಗೌಡ ಅವರ ಸಚಿವ ಸಂಪುಟದಿಂದಲೂ ಮೂವರನ್ನು ಹೊರಗಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT