ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐನಿಂದ ಜನಾರ್ದನ ರೆಡ್ಡಿ ಬಂಧನ; ಚಿನ್ನ, ನಗದು ವಶ

Last Updated 5 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ಬಳ್ಳಾರಿ / ನವದೆಹಲಿ (ಪಿಟಿಐ): ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ ಹಾಗೂ ಓಬಳಾಪುರಂ ಗಣಿ ಕಂಪನಿ (ಓಎಂಸಿ) ಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ ಶ್ರೀನಿವಾಸ ಅವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ಬಂಧಿಸಿ, ರೆಡ್ಡಿ ಅವರ ನಿವಾಸದಲ್ಲಿದ್ದ 30 ಕೆ.ಜಿ ಚಿನ್ನ ಹಾಗೂ 4.5 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಹೈದರಾಬಾದಿನಿಂದ ಆಗಮಿಸಿದ ಸಿಬಿಐನ ಹದಿನೈದು ಅಧಿಕಾರಿಗಳ ತಂಡ, ಸೋಮವಾರ ಬೆಳಿಗ್ಗೆ  ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರಿಗೆ ಸೇರಿದ ನಿವಾಸಗಳ  ಮೇಲೆ  ಧೀಡಿರ್ ದಾಳಿ ನಡೆಸಿ, ಹಲವಾರು ಮಹತ್ವದ ದಾಖಲೆಗಳೊಂದಿಗೆ ಚಿನ್ನ ಮತ್ತು ನಗದು ವಶಪಡಿಸಿಕೊಂಡು ನಂತರ ಇಬ್ಬರನ್ನೂ ಬಂಧಿಸಿತು.
 
ಇದೇ ವೇಳೆ ಕೆಲ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ನಿವಾಸದ ಮೇಲೆ ದಾಳಿ ನಡೆಸಿ, ಶೋಧನೆ ಮಾಡಿದರು.

ಡಿಐಜಿ ಪಿ.ವಿ.ಲಕ್ಷ್ಮಿನಾರಾಯಣ ನೇತೃತ್ವದ ಸಿಬಿಐ ತಂಡ, ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಹೈದರಾಬಾದಿಗೆ ಕರೆದ್ಯೊಯಿದಿದ್ದು, ಅವರನ್ನು  ಹೈದರಾಬಾದ್‌ನಲ್ಲಿರುವ ಸಿಬಿಐ ಕೋರ್ಟ್‌ನ ಎದುರು ಸಂಜೆಯೊಳಗೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕರ್ನಾಟಕ ಆಂಧ್ರಪ್ರದೇಶ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿ ಚಟುವಟಿಕೆ ನಡೆಸಿದ ರೆಡ್ಡಿ ಸಹೋದರರ ಒಡೆತನದ ಓಎಂಸಿ  ವಿರುದ್ಧ ಸಿಬಿಐ 2009ರಲ್ಲಿ ದೂರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಭಾವಿ ಗಣಿ ಉದ್ಯಮಿಯಾಗಿರುವ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿಗಾರಿಕೆ ಮತ್ತು ಅರಣ್ಯ ಕಾಯ್ದೆಯ ವಿವಿಧ ಸೆಕ್ಷೆನ್‌ಗಳ ಅಡಿಯಲ್ಲಿ ಅಪರಾಧಕ್ಕೆ ಸಂಚು, ವಂಚನೆ ಮುಂತಾದ  ಆಪಾದನೆಗಳ ಮೇಲೆ ದೂರು ದಾಖಲಿಸಲಾಗಿತ್ತು.
 
2009 ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕೆ.ರೊಸಯ್ಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ಓಎಂಸಿ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಓಎಂಸಿ ಸೇರಿದಂತೆ 65ಕ್ಕೂ ಅಧಿಕ ಗಣಿ ಕಂಪೆನಿಗಳ ಮೇಲೆ ಸಿಬಿಐನ ಹದ್ದಿನ ಕಣ್ಣಿಟ್ಟಿದೆ.

ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಬಳ್ಳಾರಿಯ ಶಾಸಕರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದರಿಂದ ಬಂಡೆದ್ದು ಮಾಜಿ ಸಚಿವ ಬಿ.ಶ್ರೀರಾಮಲು ಭಾನುವಾರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಬೆನ್ನಲೇ ನಡೆದಿರುವ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT