ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್ ರಸ್ತೆ ಮೇಲೆ ಡಾಂಬರ್ !

Last Updated 27 ಫೆಬ್ರುವರಿ 2013, 8:46 IST
ಅಕ್ಷರ ಗಾತ್ರ

ಬಂಗಾರಪೇಟೆ: ಕಳೆದ ಐದು ವರ್ಷದಲ್ಲಿ ಜನರಿಗೆ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸುವ ಸವಾಲನ್ನು ಪುರಸಭೆ ಸಮರ್ಥವಾಗಿ ನಿಭಾಯಿಸಲು ಹೆಣಗಾಡುತ್ತಲೇ ಇದೆ. ಆದರೂ ಪಟ್ಟಣದ ಕೆಲವು ಬಡಾವಣೆಗಳಲ್ಲಿ ತಿಂಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ !

ಆಯಾ ಪ್ರದೇಶದ ಅಗತ್ಯವನ್ನು ಆಧರಿಸಿ ಯೋಜನೆಗಳ ಅನುದಾನವನ್ನು ಹಂಚುವ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಪುರಸಭೆಯಲ್ಲಿ ಗೈರುಹಾಜರಾಗಿರುವುದು ದೊಡ್ಡ ದೋಷವಾಗಿ ಪರಿಣಮಿಸಿದೆ.

ಯಾವುದೇ ಅನುದಾನ ಪುರಸಭೆಗೆ ಬಿಡುಗಡೆಯಾದರೂ ಅದನ್ನು ಎಲ್ಲ ಸದಸ್ಯರಿಗೂ ಸಮನಾಗಿ ವಿಂಗಡಿಸುವ ಪರಿಪಾಠ ಇಲ್ಲಿನದು. ಸದಸ್ಯ ಕೇಂದ್ರೀತವಾಗಿ ಅನುದಾನ ಹಂಚಿಕೆ ಮಾಡುವ ಪುರಸಭೆಯ ಇಂಥ ನಡಾವಳಿಯಿಂದ ಹೆಚ್ಚಿನ ಅನುದಾನ ಬೇಕಾಗಿರುವ ಹೊಸ ಬಡಾವಣೆಗಳು ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಅಷ್ಟೇ ಅಲ್ಲದೆ, ಕೆಲ ಪ್ರದೇಶಗಳು ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡು 10 ವರ್ಷ ಕಳೆದರೂ ವ್ಯವಸ್ಥಿತ ರಸ್ತೆ, ಸಮರ್ಪಕ ಚರಂಡಿ ವ್ಯವಸ್ತೆ, ಕುಡಿಯುವ ನೀರಿನ ಸೌಲಭ್ಯ ದೊರಕಿಲ್ಲ. ಆ ಭಾಗದ ಜನ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಪುರಸಭೆ ತನ್ನ ವ್ಯಾಪ್ತಿ ಪ್ರದೇಶಗಳಲ್ಲಿ ಸಮಗ್ರವಾದ ಮತ್ತು ಬೇಡಿಕೆ ಆಧಾರಿತ ಅಭಿವೃದ್ಧಿ ನೀಲನಕ್ಷೆಯನ್ನು ಇನ್ನೂ ತಯಾರಿಸಿಲ್ಲ. ಹೀಗಾಗಿಯೇ ತಾರತಮ್ಯವೂ ಇಲ್ಲಿ ಎದ್ದು ಕಾಣುತ್ತದೆ.

ತಾರತಮ್ಯ:
ಪಟ್ಟಣದ ಕೆಲ ಹಳೆ ಬಡಾವಣೆಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಅಭಿವೃದ್ಧಿ ಹೊಂದದ ಬಡಾವಣೆಗಳಿಗೆ ಇನ್ನಷ್ಟು ಅನುದಾನ ಬಳಸಿ ಪಟ್ಟಣವನ್ನು ಮತ್ತಷ್ಟು ಸುಂದರಗೊಳಿಸಲು ಪುರಸಭೆ ಯತ್ನಿಸುತ್ತಿದೆ. ಆದರೆ ಪಟ್ಟಣದ ಹಲವಾರು ವಾರ್ಡ್‌ಗಳಲ್ಲಿ ಮೂಲಸೌಲಭ್ಯ ಇಲ್ಲದೆ ಜನರು ಪರದಾಡುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯ ದಿಢೀರ್ ನಗರ, ಸಂಜಯಗಾಂಧಿ ನಗರ, ರಾಮಕೃಷ್ಣ ಹೆಗಡೆ ಕಾಲೊನಿ ರಾಜೇಂದ್ರ ಬಡಾವಣೆ, ಕೆರೆಕೋಡಿಯಂಥ ಬಡಾವಣೆಗಳಲ್ಲಿ ರಸ್ತೆ, ಚರಂಡಿ ನಿರ್ಮಾಣದಂಥ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕಾಗಿವೆ.

ನೀರಿಗೆ ಪರದಾಟ: ಕೆಲ ಬಡಾವಣೆಗಳು ಅಭಿವೃದ್ಧಿ ಹೊಂದಿದ್ದರೂ ಕಳೆದ ಕೆಲ ತಿಂಗಳಿಂದ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಪಟ್ಟಣದಲ್ಲಿ ಜ್ವಲಂತ ನೀರಿನ ಸಮಸ್ಯೆ ಇದ್ದರೂ ಒಂದು ವರ್ಷದಿಂದ ಈಚೆಗೆ ಪುರಸಭೆ ನಡೆಸಿದ ಸಾಮಾನ್ಯ ಸಭೆಗಳಲ್ಲಿ ಈ ಸಮಸ್ಯೆ ಬಗ್ಗೆ ಪ್ರಸ್ತಾಪವೇ ಆಗದಿರುವುದು ವಿಪರ್ಯಾಸ. ಆದರೂ ಅದು ಜಗಳ, ವಾದ-ಪ್ರತಿವಾದದ ಭರಾಟೆಯಲ್ಲಿ ಮರೆಯಾಗಿಬಿಡುತ್ತದೆ. ನೀರಿನ ಸಮಸ್ಯೆ ಹಾಗೇ ಉಳಿಯುತ್ತದೆ.

ಕೆಲ ಬಡಾವಣೆಗಳಿಗೆ ಪುರಸಭೆ ತಿಂಗಳಿಗೊಮ್ಮೆ ನೀರು ಪೂರೈಸುವ ಪರಿಪಾಠ ಬೆಳೆಸಿಕೊಂಡಿರುವುದರಿಂದ ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಸ್.ಎನ್.ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ಯಾಂಕ್ ನೀರು ಪೂರೈಕೆಯಾಗಿದ್ದು ಜನರಿಗೆ ಸ್ವಲ್ಪ ಮಟ್ಟಿಗೆ ನಿರಾಳ ಎನಿಸಿದೆ.

ಕಾಂಕ್ರಿಟ್ ಮೇಲೆ ಡಾಂಬರು ! : ಕಾಂಕ್ರಿಟ್ ಹಾಕಿದ ರಸ್ತೆ ಮೇಲೆ ಡಾಂಬರ್ ಹಾಕುವ ಪ್ರಯತ್ನವನ್ನೂ ಇಲ್ಲಿನ ಪುರಸಭೆ ಮಾಡಿ ಗಮನ ಸೆಳೆದಿದೆ. ಪುರಸಭೆಗೆ ಹಂಚಿಕೆಯಾಗಿದ್ದ ಅನುದಾನವನ್ನು ಸಂಪೂರ್ಣ ಬಳಸಲಾಗಿದ್ದು, ಕೆಲ ವಾರ್ಡ್‌ಗಳಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಈ ಬಾರಿ ನಿರ್ಮಿಸಲಾಗಿರುವ ಸಿಮೆಂಟ್ ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಸಿಮೆಂಟ್ ರಸ್ತೆ ಕನಿಷ್ಠ 20 ವರ್ಷ ಬಾಳಿಕೆ ಬರಬೇಕಾಗಿದ್ದರೂ 2 ವರ್ಷ ಕೂಡ ಬಾಳಿಕೆ ಬಂದಿಲ್ಲ. ಇಂಥ ಸಿಮೆಂಟ್ ರಸ್ತೆ ಮೇಲೆ ಮತ್ತೆ ಡಾಂಬರು ಹಾಕುವ ಪ್ರಯೋಗಕ್ಕೂ ಪುರಸಭೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಹಣವೂ ವ್ಯಯವಾಗಿದೆ.

ಪಟ್ಟಣದ ವಿಜಯನಗರ, ಶಾಂತಿನಗರದ ಹಲವೆಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರಾಜ ಕಾಲುವೆಗಳನ್ನು ವಿಸ್ತರಿಸಿ ಕಾಲುವೆಗಳಿಗೆ ಸಿಮೆಂಟ್ ಕಟ್ಟಡ ಕಟ್ಟಲಾಗಿದೆ.

ಶ್ರೀನಿವಾಸ ಗೌಡ ಬಡಾವಣೆಯಲ್ಲಿ ಹಾದುಹೋಗುವ ರಾಜ ಕಾಲುವೆ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ನಾರಾಯಣ ಸ್ವಾಮಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪುರಸಭೆ ಒಟ್ಟು 23 ಸದಸ್ಯರಲ್ಲಿ 11 ಕಾಂಗ್ರಸ್, 7 ಬಿಜೆಪಿ, 2 ಜೆಡಿಎಸ್ 3 ಪಕ್ಷೇತರರನ್ನು ಒಳಗೊಂಡಿತ್ತು. ಕೆಲ ಸದಸ್ಯರು ತಮ್ಮ ವಾರ್ಡ್‌ಗಳ ಅಭಿವೃದ್ಧಿಯತ್ತ ಸಾಕಷ್ಟು ಗಮನ ಹರಿಸಿಲ್ಲ. 2007ರ ಮೀಸಲಾತಿ ಮುಂದುವರಿದಿರುವುದರಿಂದ ಅಂಥವರಿಗೆ ಅದೇ ವಾರ್ಡಿನಲ್ಲಿ ಮತ್ತೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಒದಗಿದೆ.

ಪುರಸಭೆ ಕಳೆದ 20 ವರ್ಷಗಳಿಂದ ಪುರಸಭೆ ಕಾಂಗ್ರೆಸ್ ಹಿಡಿತದಲ್ಲಿದ್ದು ಹೆಚ್ಚು ಅನುದಾನ ಪಡೆಯುವಲ್ಲಿ ಸಫಲವಾಗಿದೆ. 
ಬಿಜೆಪಿ, ಜೆಡಿಎಸ್ ತಮ್ಮ ಪ್ರಾಬಲ್ಯ ಹೊಂದಲು ಸತತವಾಗಿ ಹೆಣಗಾಡುತ್ತಿವೆ. ಪಕ್ಷಗಳ ಸೆಣಸಾಟ ಮತ್ತು ಹೆಣಗಾಟದ ನಡುವೆ ಮೂಲಸೌಕರ್ಯಕ್ಕಾಗಿ ಪಟ್ಟಣಿಗರ ಹೆಣಗಾಟ ಮೂಲೆಗುಂಪಾಗಿದೆ ಎಂದೇ ಹೇಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT