ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಪೂರೈಕೆ ವಿಳಂಬ:ಪ್ರತಿಭಟನೆ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣದ ಎಚ್‌ಪಿ ಅಡುಗೆ ಅನಿಲ ವಿತರಕರು ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಸಮರ್ಪಕವಾಗಿ ಸಿಲಿಂಡರ್ ಪೂರೈಸದಿರುವ ಕ್ರಮವನ್ನು ಖಂಡಿಸಿ ಪಟ್ಟಣದ ನೂರಾರು ಗ್ರಾಹಕರು  ವಿತರಣಾ ಏಜೆನ್ಸಿ ಎದುರು ಶನಿವಾರ ದಿಢೀರ್ ರಸ್ತೆ ತಡೆ ನಡೆಸಿದರು.

ತಿಂಗಳ ಹಿಂದೆ ಸಿಲಿಂಡರ್‌ಗೆ ಬುಕ್ ಮಾಡಿ, ಮುಂಗಡ ಹಣ ನೀಡಿದ್ದ ನೂರಾರು ಗ್ರಾಹಕರಿಗೆ ಶನಿವಾರ ಮುಂಜಾನೆ ಲೋಡ್ ಬರುತ್ತದೆ ಎಂದು ತಿಳಿಸಲಾಗಿತ್ತು. ಹೀಗಾಗಿ ಸಿಲಿಂಡರ್ ಪಡೆದುಕೊಳ್ಳಲು ಗ್ರಾಹಕರು ಮುಂಜಾನೆ 6 ಗಂಟೆಯಿಂದ ಸರದಿಯಲ್ಲಿ ನಿಂತು ವಾಹನ ಬರುವುದನ್ನು ಕಾದಿದ್ದರು.
 
ಆದರೆ ಮಧ್ಯಾಹ್ನ ಎರಡು ಗಂಟೆಯಾದರೂ ವಾಹನ ಬಾರದಿದ್ದಾಗ ರೊಚ್ಚಿಗೆದ್ದ ಗ್ರಾಹಕರು ಅಂಗಡಿ ಎದುರಿನ ಮುಖ್ಯ ರಸ್ತೆಯಲ್ಲಿ ಜಮಾಯಿಸಿ ಕೆಲಕಾಲ ರಸ್ತೆ ತಡೆ ನಡೆಸಿ, ಸಿಲಿಂಡರ್ ದೊರೆಯುವವರೆಗೆ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು  ಹಟ ಹಿಡಿದರು. ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ರಮೇಶ ಕೋನರಡ್ಡಿ, ಸಿಲಿಂಡರ್ ವಾಹನ ಬಂದ ತಕ್ಷಣ ಎಲ್ಲ ಗ್ರಾಹಕರಿಗೂ ಸಿಲಿಂಡರ್ ವಿತರಿಸುವಂತೆ ಹೇಳಿ ಹೋದರು.

ಮಧ್ಯಾಹ್ನ 2 ಗಂಟೆಗೆ ವಾಹನ ಬಂದಾಗ ಸಿಲಿಂಡರ್ ಪಡೆದುಕೊಳ್ಳುವವರು ಪುನಃ ಗಲಾಟೆ ಮಾಡಲು ಪ್ರಾರಂಭಿಸಿದರು. ಮೊದಲೇ ಹಣ ಪಾವತಿ ಮಾಡಿ ಖಾಲಿ ಸಿಲಿಂಡರ್ ನೀಡದವರು, ಸಿಲಿಂಡರ್ ಬುಕ್ ಮಾಡಿದವರು, ಬುಕ್ ಮಾಡಬೇಕಾದವರು ಏಕಕಾಲಕ್ಕೆ ಮುತ್ತಿಗೆ ಹಾಕಿದರು.
 
ಇದರಿಂದ ಪುನಃ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಮಧ್ಯ ಪ್ರವೇಶಿಸಿದ ಪೋಲಿಸರು ಸುಗಮವಾಗಿ ವಿತರಣೆಯಾಗುವಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT