ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಸ್ಫೋಟ: ಇಬ್ಬರು ಬಲಿ

Last Updated 21 ಸೆಪ್ಟೆಂಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಮಂಟಪದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮೂರು ಮಹಡಿಯ ಕಟ್ಟಡ ನೆಲಕ್ಕುರುಳಿದ ಪರಿಣಾಮ ಯುವತಿ ಸೇರಿದಂತೆ ಇಬ್ಬರು ಮೃತಪಟ್ಟು 12 ಮಂದಿ ಗಾಯಗೊಂಡ ಘಟನೆ ನಗರದ ಸುಮನಹಳ್ಳಿಯ ನರಸಿಂಹಯ್ಯನಪಾಳ್ಯದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ನಾಗರಾಜ್ ಎಂಬುವರ ಪುತ್ರಿ ಕವಿತಾ (17) ಎಂಬುವರು ಮತ್ತು ವ್ಯಕ್ತಿಯೊಬ್ಬರು ಮೃತಪಟ್ಟಿ ದ್ದಾರೆ. ಮೃತ ವ್ಯಕ್ತಿಯ ಶವ ಸಂಪೂರ್ಣ ಸುಟ್ಟು ಹೋಗಿದ್ದು, ಕೈ ಕಾಲುಗಳು ತುಂಡು ತುಂಡಾಗಿವೆ. ಇದರಿಂದಾಗಿ ಆ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಕವಿತಾ ಅವರು ಒಕ್ಕಲಿಗ ಸಂಘದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. 

ಅಗ್ನಿಶಾಮಕ ಸಿಬ್ಬಂದಿಯಾದ ಗೋವಿಂದರಾಜು, ರಾಘವೇಂದ್ರ, ಆನಂದಯ್ಯ, ನಾಗೇಶ್, ರಂಗಸ್ವಾಮಿ ಹಾಗೂ ವೀರಪ್ಪ, ರಾಮಾಂಜನಪ್ಪ, ಕಾಂತರಾಜು, ಲಕ್ಷ್ಮಿದೇವಮ್ಮ, ಪಲ್ಲವಿ, ಶಾರದಮ್ಮ ಮತ್ತು ನಾಲ್ಕು ವರ್ಷದ ಚಿನ್ಮಯ್ ಗಾಯಗೊಂಡವರು. ಘಟನೆಯಲ್ಲಿ ನಾಲ್ಕು ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಇಡೀ ಕಟ್ಟಡವೇ ಹೊತ್ತಿ ಉರಿಯಿತು. ಬೆಂಕಿಯ ಜ್ವಾಲೆಗಳು ವ್ಯಾಪಿಸಿ ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಶ್ರೀನಿವಾಸ ನಾಯ್ಡು ಎಂಬುವರಿಗೆ ಸೇರಿದ ಲಕ್ಷ್ಮಿ ವೆಂಕಟೇಶ್ವರ ಕನ್ವೆನ್ಷನ್ ಹಾಲ್ ಹೆಸರಿನ ಕಲ್ಯಾಣ ಮಂಟಪ (ಭಿಕ್ಷುಕರ ಪುನರ್ವಸತಿ ಕೇಂದ್ರದ ಮುಂಭಾಗ) ನರಸಿಂಹಯ್ಯನಪಾಳ್ಯದಲ್ಲಿದೆ. ಆ ಕಟ್ಟಡ ನಾಲ್ಕು ಮಹಡಿ ಹೊಂದಿದೆ. ಕಲ್ಯಾಣ ಮಂಟಪದ ಗೋಡೆಗೆ ಹೊಂದಿಕೊಂಡಂತೆ ಮೂರು ಮಹಡಿಯ ಕಟ್ಟಡ ಕಟ್ಟಲಾಗಿತ್ತು. ಈ ಕಟ್ಟಡದ ಒಂದು ಮಹಡಿಯಲ್ಲಿ ಸೀರೆಗೆ ಬಣ್ಣ ಹಾಕುವ ಘಟಕಕ್ಕೆ ಮತ್ತು ಉಳಿದ ಎರಡು ಮಹಡಿಯನ್ನು ವಾಸಕ್ಕೆ ಬಾಡಿಗೆಗೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಯಾಣ ಮಂಟಪ ಇರುವ ಮುಖ್ಯ ಕಟ್ಟಡದ ನೆಲ ಮಹಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಇಡಲಾಗಿತ್ತು. ಆ ಕಟ್ಟಡಕ್ಕೆ ಪಕ್ಕದಲ್ಲೇ ಸಿಮೆಂಟ್ ಶೀಟಿನ ನಾಲ್ಕು ಮನೆಗಳಿವೆ. ಕಲ್ಯಾಣ ಮಂಟಪದ ನೆಲ ಮಹಡಿಯಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತು. ಕೆಲ ಹೊತ್ತಿನಲ್ಲೇ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿ ಉರಿಯಲಾರಂಭಿಸಿತು. ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗೆ ಕೂಡಲೇ ಮಾಹಿತಿ ನೀಡಿದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಕಟ್ಟಡದ ಒಳ ಹೋಗಿ ಬೆಂಕಿ ನಂದಿಸಲು ಯತ್ನಿಸಿದರು.

ಆ ವೇಳೆಗಾಗಲೇ ಬೆಂಕಿಯ ತೀವ್ರತೆಯಿಂದ ಶಿಥಿಲವಾಗಿದ್ದ ಕಟ್ಟಡ ಏಕಾಏಕಿ ಕುಸಿದು ಬಿದ್ದಿತು. ಪರಿಣಾಮ ಐದು ಮಂದಿ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದರು. ಕೂಡಲೇ ಕಾರ್ಯಾಚರಣೆ ನಡೆಸಿದ ಇತರೆ ಸಿಬ್ಬಂದಿ ಐದೂ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.

ಕಟ್ಟಡದ ಅವಶೇಷಗಳು ಪಕ್ಕದ ಮನೆಗಳ ಮೇಲೆ ಬಿದ್ದ ಪರಿಣಾಮ ಆರು ಮಂದಿ ಗಾಯಗೊಂಡರು. ಆದರೆ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕವಿತಾ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಸುದೀರ್ಘ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದರು. ಕಾರ್ಯಾಚರಣೆಗೆ ಬೃಹತ್ ಗಾತ್ರದ ಕ್ರೇನ್ ಮತ್ತು ಮಣ್ಣೆತ್ತುವ ಯಂತ್ರಗಳನ್ನು ಬಳಸಿದರು. ಘಟನೆ ನಡೆದ ಸಂದರ್ಭದಲ್ಲಿ ಕಲ್ಯಾಣ ಮಂಟಪದಲ್ಲಿ ಯಾವುದೇ ಸಮಾರಂಭ ನಡೆಯುತ್ತಿರಲಿಲ್ಲ.

ಇದರಿಂದಾಗಿ ಅಲ್ಲಿ ಕೆಲಸದ ಸಿಬ್ಬಂದಿಯೂ ಇರಲಿಲ್ಲ. ಜನರಿದ್ದಿದ್ದರೆ ಸಾವು- ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು ಎಂದು ಸ್ಥಳೀಯರು `ಪ್ರಜಾವಾಣಿ~ಗೆ ತಿಳಿಸಿದರು.

ಸ್ಫೋಟದ ತೀವ್ರತೆಗೆ ಕಟ್ಟಡದ ಸಿಮೆಂಟ್ ಇಟ್ಟಿಗೆಗಳು ನೂರೈವತ್ತು ಅಡಿಯಿಂದ ಇನ್ನೂರು ಅಡಿವರೆಗೆ ಹಾರಿ ಹೋಗಿವೆ. ಕಟ್ಟಡದ ಸಮೀಪವೇ ಇರುವ ಲಕ್ಷ್ಮಿದೇವಮ್ಮ ಎಂಬುವರ ಮನೆಯೊಳಗೂ ಇಟ್ಟಿಗೆಗಳು ಬಿದ್ದಿವೆ.

ಭಾರಿ ಶಬ್ಧ: `ಘಟನೆ ನಡೆದಾಗ ಭಾರಿ ಸ್ಪೋಟದ ಶಬ್ಧ ಕೇಳಿಸಿದೆ. ಒಂದು ಸಿಲಿಂಡರ್ ಸ್ಪೋಟಿಸಿದೆಯೇ ಅಥವಾ ಹೆಚ್ಚಿನ ಸಿಲಿಂಡರ್‌ಗಳು ಸ್ಫೋಟಗೊಂಡಿವೆಯೇ ಎಂಬುದು  ಗೊತ್ತಾಗಬೇಕಿದೆ~ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ ಹೇಳಿದರು.

`ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಮೇಲ್ನೋಟಕ್ಕೆ ಇದು ಸಿಲಿಂಡರ್ ಸ್ಫೋಟ ಎಂದು ಗೊತ್ತಾಗುತ್ತದೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ವರದಿ ನೀಡಿದ ನಂತರ ಸ್ಫೋಟದ ಬಗ್ಗೆ ನಿಖರ ಮಾಹಿತಿ ಸಿಗಲಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದರು.

`ಕಲ್ಯಾಣ ಮಂಟಪದ ಮಾಲೀಕ ಶ್ರೀನಿವಾಸ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಸೀರೆಗೆ ಬಣ್ಣ ಹಾಕುವ ಘಟಕವೂ ಶ್ರೀನಿವಾಸ್ ಅವರಿಗೆ ಸೇರಿದ್ದು ಎಂಬ ಮಾಹಿತಿ ಇದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಹೇಳಿದರು. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಾಫಿಕ್ ಜಾಮ್: ಘಟನೆ ನಡೆಯುತ್ತಿದ್ದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಮಾಗಡಿಯನ್ನು ಸಂಪರ್ಕಿಸುವ ರಸ್ತೆಯ ಒಂದು ಭಾಗವನ್ನು ಸಂಜೆ ವೇಳೆಗೆ ಬಂದ್ ಮಾಡಲಾಯಿತು. ಇದರಿಂದಾಗಿ ವಾಹನ ಸಂಚಾರಕ್ಕೂ ಅಡಚಣೆ ಆಯಿತು. ಸುಮನಹಳ್ಳಿ ಜಂಕ್ಷನ್ ಮತ್ತು ಮಾಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT