ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್‌ ಸಿಟಿಯಲ್ಲಿ ಅಯ್ಯಪ್ಪ!

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಶಬರಿಮಲೆಗೆ ಯಾತ್ರೆ ಕೈಗೊಳ್ಳುವ ಭಕ್ತರಿದ್ದಾರೆ. ಆದರೆ, ರಾಜ್ಯದಿಂದ ಶಬರಿಮಲೆಗೆ ಹೋಗುವ ಒಟ್ಟಾರೆ ಭಕ್ತರಲ್ಲಿ ಬೆಂಗಳೂರಿಗರ ಸಂಖ್ಯೆಯೇ ಹೆಚ್ಚು. ಎಲ್ಲ ಭಾಗದ ಜನರೂ ಇಲ್ಲಿ ವಾಸಿಸುತ್ತಿರುವುದು ಇದಕ್ಕೆ ಕಾರಣವಿರಬಹುದು. ತಮಿಳುನಾಡು, ಕೇರಳದ ಜನರೂ ಇಲ್ಲಿ ಹೆಚ್ಚಾಗಿರುವುದೂ ಒಂದು ಕಾರಣ ಆಗಿರಬಹುದು.

ಕರ್ನಾಟಕದಲ್ಲಿ ಅಯ್ಯಪ್ಪ ದೇವಸ್ಥಾನಗಳು ಅತೀ ವಿರಳ. ಅದರಲ್ಲೂ ಕರ್ನಾಟಕದವರು ಅಯ್ಯಪ್ಪ ದೇವಸ್ಥಾನ ಕಟ್ಟಿರುವ ಉದಾಹರಣೆಗಳಿಗಂತೂ ಹುಡುಕಬೇಕು. ಆದರೆ ಬೆಂಗಳೂರು ನಗರದಲ್ಲಿ ಸುಮಾರು 25 ಅಯ್ಯಪ್ಪ ದೇವಸ್ಥಾನಗಳಿವೆ. ಜಾಲಹಳ್ಳಿಯ ದೇವಸ್ಥಾನ ರಾಜಧಾನಿಯ ಮೊದಲ ಅಯ್ಯಪ್ಪ ಮಂದಿರ ಎಂದು ಹೇಳಲಾಗುತ್ತಿದೆ. ವಸಂತನಗರ, ಯಶವಂತಪುರ, ಲಿಂಗರಾಜಪುರ, ಕಮ್ಮನಹಳ್ಳಿ, ಮೆಜೆಸ್ಟಿಕ್‌, ಜೆ.ಪಿ.ನಗರಗಳಲ್ಲಿನ ಅಯ್ಯಪ್ಪನ ದೇವಸ್ಥಾನಗಳು ಪ್ರಸಿದ್ಧವಾಗಿವೆ.

ಈ ಎಲ್ಲ ಅಯ್ಯಪ್ಪ ದೇವಸ್ಥಾನಗಳನ್ನು ಸ್ಥಾಪಿಸಿರುವುದು ಕೇರಳೀಯರು ಮತ್ತು ಇಲ್ಲಿರುವುದು ಕೇರಳದ ತಂತ್ರಿಗಳು. ಶಬರಿಮಲೆಗೆ ಹೋಗುವ ನಗರದ ಭಕ್ತರು ಅಯ್ಯಪ್ಪ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಇರುಮುಡಿ ಕಟ್ಟಿ ಹೊರಡುತ್ತಾರೆ. ಅನ್ನದಾನ, ದೀಪೋತ್ಸವದಂತಹ ಕಾರ್ಯಕ್ರಮ ನಡೆಸುತ್ತಾರೆ. ಹೀಗೆ ಹೋಗುವ ಭಕ್ತರಿಗೆ ಮಾರ್ಗದರ್ಶನ ನೀಡಲು ಗುರುಸ್ವಾಮಿ ಜೊತೆಗಿರುತ್ತಾರೆ.

ಬೆಂಗಳೂರಿನ ಸುಂಕದಕಟ್ಟೆಯ ಮೂರ್ತಿ ಕಳೆದ 24 ವರ್ಷಗಳಿಂದ ಮಕರ ಸಂಕ್ರಾಂತಿಗೆ ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಬೆಂಗಳೂರಿನಿಂದಲೇ ಶಬರಿಮಲೆಗೆ ಪ್ರತಿ ವರ್ಷ ಅಂದಾಜು 15 ಲಕ್ಷ ಜನ ಯಾತ್ರೆ ಕೈಗೊಳ್ಳುತ್ತಾರೆ ಎನ್ನುವುದು ಅವರ ಅಂದಾಜು. ಅಂದಹಾಗೆ, ‘ಗುರುಸ್ವಾಮಿ’ ಆದ ಅವರು ತಮ್ಮೊಂದಿಗೆ ಎಪ್ಪತ್ತು ಜನರ ತಂಡವನ್ನು ಕರೆದೊಯ್ಯುತ್ತಾರೆ. ಪ್ರತಿವರ್ಷ ಮುನ್ನೂರು ಜನರಿಗೆ ಮೂರ್ತಿ ಮಾಲೆ ಹಾಕುತ್ತಾರೆ. ಮಾಲೆ ಧರಿಸಿದವರು 48 ದಿನ ವ್ರತಧಾರಿಗಳಾಗಬೇಕು ಎಂಬುದು ಕಡ್ಡಾಯ. ಹಾಗೆ ಆಗದಿದ್ದರೆ ಹದಿನೆಂಟು ದಿನವಾದರೂ ಇರಲೇಬೇಕು ಎಂಬ ನಿಯಮವಿದೆ.

ಭಕ್ತಿಯ ‘ಇರುಮುಡಿ’
ಇರುಮುಡಿ ಎಂದರೆ ಎರಡು ಗಂಟು ಎಂದರ್ಥ. ಇದರಲ್ಲಿ ಒಂದು ಗಂಟಿನಲ್ಲಿ ದೇವರಿಗೆ ನೈವೇದ್ಯಕ್ಕೆಂದು ತುಪ್ಪ ತುಂಬಿದ ತೆಂಗಿನಕಾಯಿ, ಅರಿಶಿಣ, ಕುಂಕುಮ, ಅಕ್ಕಿ, ಬೆಲ್ಲ, ಹೆಸರುಬೇಳೆ, ಕಬ್ಬು, ದ್ರಾಕ್ಷಿ, ಗೋಡಂಬಿ, ಎಲೆ–ಅಡಿಕೆ, ಒಂದೂ ಕಾಲು ರೂಪಾಯಿ ಇರುತ್ತದೆ. ದೇವಸ್ಥಾನದಲ್ಲಿ ತುಪ್ಪತುಂಬಿದ ತೆಂಗಿನಕಾಯಿ ಒಡೆದು ಕಾಯಿಯನ್ನು ಹೋಮಕುಂಡಕ್ಕೆ ಸಮರ್ಪಿಸಲಾಗುತ್ತದೆ. ತುಪ್ಪವನ್ನು ಪ್ರಸಾದವೆಂದು ಮನೆಗೆ ತರುತ್ತಾರೆ. ಅಯ್ಯಪ್ಪನ ಪ್ರಸಾದವನ್ನು ಹಂಚಬಾರದು, ಕೇಳಿ ಬಂದವರಿಗೆ ನೀಡಬೇಕು ಎಂಬ ನಂಬಿಕೆಯಿದೆ. ಅದಕ್ಕೆಂದೇ ಶಬರಿಮಲೆಗೆ ಹೋಗುವ ಭಕ್ತರ ಕೈಯಲ್ಲಿ ನೈವೇದ್ಯ ಕಳುಹಿಸುವುದು ಹಾಗೂ ಪ್ರಸಾದ ತರಿಸಿಕೊಳ್ಳುವುದು ಚಾಲ್ತಿಯಲ್ಲಿದೆ.
ಇರುಮುಡಿಯ ಇನ್ನೊಂದು ಗಂಟಿನಲ್ಲಿ ವಿಭೂತಿ, ಕಪ್ಪು ವಸ್ತ್ರ ಹೋಗಿ ಬರುವ ಹಾದಿಯಲ್ಲಿ ಬೇಕಾಗುವ ಅಗತ್ಯ ವಸ್ತುಗಳಿರುತ್ತದೆ.

ಪವಾಡಗಳ ಕಥನಗಳು
ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಅನೇಕ ವಿಶೇಷತೆಗಳಿಂದ ಕೂಡಿದೆ. ಅಯ್ಯಪ್ಪನಾದ ಮಣಿಕಂಠನ ಕತೆಯೇ ಅನೇಕ ಪವಾಡಗಳಿಂದ ಕೂಡಿದೆ. ಮಹಾರಾಣಿಯ ಹೊಟ್ಟೆ ನೋವಿಗೆ ಹುಲಿಯ ಹಾಲಿನ ಔಷಧಿ ಬೇಕೆಂದು ರಾಜವೈದ್ಯರು ಹೇಳಿದಾಗ ಕುತಂತ್ರದಿಂದ ಮಣಿಕಂಠನನ್ನು ಕಾಡಿಗೆ ಕಳುಹಿಸಲಾಗುತ್ತದೆ. ಆದರೆ ಬಾಲಕ ಮಣಿಕಂಠ ಹುಲಿಯ ಮೇಲೆ ಕುಳಿತು ಶಾಂತಚಿತ್ತನಾಗಿ ಅರಮನೆಗೆ ಬರುತ್ತಾನೆ. ಅಲ್ಲಿಂದ ಮಣಿಕಂಠನನ್ನು ಅಯ್ಯಪ್ಪ ಹೆಸರಿನಿಂದ ಪೂಜಿಸಲಾಗುತ್ತಿದೆ. ಇಂತಹ ಅನೇಕ ರೋಚಕ ಕಥೆಗಳು ಅಯ್ಯಪ್ಪನ ಹಿಂದಿವೆ.

ಹರಕೆ ಹೊತ್ತು ಶಬರಿಮಲೆಗೆ ಹೋಗುವವರೇ ಹೆಚ್ಚು. ಬ್ರಹ್ಮಚಾರಿಯಾಗಿದ್ದ ಅಯ್ಯಪ್ಪನ ಕ್ಷೇತ್ರ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶವಿಲ್ಲ. 12 ವರ್ಷಕ್ಕಿಂತ ಕೆಳಗಿನ ಹೆಣ್ಣುಮಕ್ಕಳು ಮತ್ತು ಐವತ್ತು ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಮಾತ್ರ ಪ್ರವೇಶವಿದೆ. ಇನ್ನು ಜಪಮಾಲೆ ಧಾರಣೆ ಮತ್ತು ಕಪ್ಪು ವಸ್ತ್ರ ಧರಿಸುವುದು ಕಡ್ಡಾಯ. 

ಕರ್ನಾಟಕದವರೇ ಹೆಚ್ಚು

ಪ್ರಸ್ತುತ ಪ್ರತಿ ತಿಂಗಳು ಐದು ದಿನ ಶಬರಿಮಲೆಯ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಸಂಕ್ರಾಂತಿಗೆ ಹೋಗುವುದು ಸಾಧ್ಯವಾಗದಿರುವವರು ಸಮಯ ಸಿಕ್ಕಾಗ ಹೋಗಿ ಬರುವುದು ಸಾಧ್ಯವಾಗಿದೆ. ಶಬರಿಮಲೆ ಕೇರಳದಲ್ಲಿದ್ದರೂ ಅಲ್ಲಿಗೆ ಹೋಗುವವರ ಸಂಖ್ಯೆ ನೋಡಿದರೆ ಕರ್ನಾಟಕದವರೇ ಹೆಚ್ಚು. ಶಬರಿಮಲೆಗೆ ಹೋಗುವುದೆಂದರೆ ಬದುಕಿನ ಮೆಟ್ಟಿಲುಗಳನ್ನು ಏರುವುದೆಂದೇ ಅರ್ಥ. ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರವದು. ನಾನು ಕಳೆದ 43 ವರ್ಷಗಳಲ್ಲಿ 75ಕ್ಕೂ ಹೆಚ್ಚು ಸಲ ಹೋಗಿಬಂದಿದ್ದೇನೆ. ಈಗಲೂ ವರ್ಷದಲ್ಲಿ ಎರಡು ಮೂರು ಸಲ ಹೋಗಿಬರುತ್ತೇನೆ.

ಹಿಂದೆ ಎಂ.ಎನ್‌. ನಂಬಿಯಾರ್‌ ಎನ್ನುವ ನಿರ್ಮಾಪಕರಿದ್ದರು. ಅವರೇ ನಮನ್ನೆಲ್ಲ ಶಬರಿಮಲೆಗೆ ಮೊದಲು ಕರೆದೊಯ್ದವರು. ಆಗ ಅಮಿತಾಭ್‌ ಬಚ್ಚನ್‌, ರಜನೀಕಾಂತ್‌, ರಾಜ್‌ಕುಮಾರ್‌, ವಿಷ್ಣುವರ್ಧನ್‌, ಚಂದ್ರಶೇಖರ್‌, ಶ್ರೀನಾಥ್‌ ಮುಂತಾದ ನಾಯಕ ನಟರನ್ನೂ ಸೇರಿ ಚಿತ್ರರಂಗದ ಅನೇಕರು ಬಸ್‌ ಮಾಡಿಕೊಂಡು ಅಲ್ಲಿಗೆ ಹೋಗುತ್ತಿದ್ದೆವು. ಇತ್ತೀಚೆಗೆ ಶಿವರಾಜ್‌ ಕುಮಾರ್, ಪುನೀತ್‌ ಸೇರಿದಂತೆ ಅನೇಕರು ಶಬರಿಮಲೆಗೆ ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಮುಸ್ಲಿಮರೂ ಅಲ್ಲಿಗೆ ಹೋಗುತ್ತಾರೆ. ಅಲ್ಲೊಂದು ದರ್ಗಾ ಇದೆ. ಅಲ್ಲಿಗೆ ಹಿಂದೂಗಳೂ ಭೇಟಿ ನೀಡುತ್ತಾರೆ. ಸರ್ವಧರ್ಮ ಸಮನ್ವಯದ ಕ್ಷೇತ್ರವಾಗಿಯೂ ಶಬರಿಮಲೆ ಗಮನಸೆಳೆಯುತ್ತಿದೆ.
–ಶಿವರಾಂ, ಹಿರಿಯ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT