ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ತಾಣ: ಸೌಲಭ್ಯ ಗೌಣ

Last Updated 7 ಅಕ್ಟೋಬರ್ 2011, 5:40 IST
ಅಕ್ಷರ ಗಾತ್ರ

ಯಳಂದೂರು: ದಿವಾನ್  ಪೂರ್ಣಯ್ಯನವರ ಬಂಗಲೆ ಶೃಂಗಾರ  ಗೊಳ್ಳುತ್ತಿದೆ. ಬಳೇಮಂಟಪ ಪ್ರಾಂಗಣದಲ್ಲಿ ಅರಳಿದ ಶಿಲ್ಪ ಕಲಾಲೋಕ, ಪಂಚಲಿಂಗ ದರ್ಶನ, ಗೌರೀಶ್ವರ ದೇಗುಲ, ಅಪೂರ್ವ ಶಿಲಾ ಶಾಸನವೂ ಇಲ್ಲಿದೆ. ಅಗರದ ಚೋಳ ದೇಗುಲ ನೇಪತ್ಯಕ್ಕೆ ಸರಿಯುತ್ತಿದೆ. ಇಲ್ಲಿಂದಲೇ ಕಾಣುವ ಪೂರ್ವಘಟ್ಟಗಳ ಕೊನೆಸಾಲು ತಾಲ್ಲೂಕು ಕೇಂದ್ರಕ್ಕೆ ಸಮೀಪದಲ್ಲಿದೆ. ಜಿಲ್ಲೆಯಲ್ಲೇ ಪ್ರವಾಸೋದ್ಯಮದ ಹೆಬ್ಬಾಗಿಲೂ ಇಲ್ಲಿಂದಲೇ ಆರಂಭವಾದರೂ ಮೂಲ ಸೌಲಭ್ಯಗಳ ಅಲಭ್ಯತೆಯಿಂದ ಬಣಗುಟ್ಟು         ವಂತಾಗಿದೆ.

ಪ್ರವಾಸವನ್ನು ಸರ್ಕಾರ ಉದ್ಯಮವನ್ನಾಗಿ ಪರಿಗಣಿಸಿದೆ. ಸೇವಾ ವಲಯದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಅವಕಾಶವಿದೆ. ತಾಲ್ಲೂಕಿನ ಕಲೆ, ವಾಸ್ತುಶಿಲ್ಪ ಹಾಗೂ ಬಿಳಿಗಿರಿರಂಗನ ದೇಗುಲದ ಪರಿಸರವನ್ನು ಬಳಸಿ ಆರ್ಥಿಕ ಆಭಿವೃದ್ಧಿ ಸೃಷ್ಟಿಸಬೇಕಿದೆ.

ಜಹಗೀರ‌್ದಾರ್ ಬಂಗಲೆ ನವೀನ ರೂಪು ಪಡೆಯುತ್ತಿದೆ. ಆದರೆ ಕಾಮಗಾರಿಗೆ ವೇಗ ಲಭಿಸಿಲ್ಲ. ಹೊಯ್ಸಳ ಕಲಾ ಶೈಲಿಯನ್ನು ಅನುಕರಿಸಿ ನಿರ್ಮಿಸಿರುವ ಬಳೇ ಮಂಟಪದ ಶಿಥಿಲ ಭಾಗವನ್ನು ನವೀಕರಿಸಿಲ್ಲ. ಮಳೆನೀರು ಹರಿದು ಹೋಗುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಗೌರೀಶ್ವರ ಆಲಯದ ಪಾರ್ಶ ಭಾಗ ಜರುಗಿದೆ. ಷಡಕ್ಷರ ಗದ್ದುಗೆಯನ್ನು ಪರಿಚಯಿಸುವ ಹಾಗೂ ಪ್ರವಾಸಿಗರನ್ನು ಆಕರ್ಷಿಸಿ ಇತಿಹಾಸ ಬಿಂಬಿಸುವ ಕೆಲಸಗಳು ಇನ್ನೂ ಆರಂಭವಾಗಿಲ್ಲದಿರುವುದು ಪಟ್ಟಣಿಗರು ಹಾಗೂ ಪ್ರವಾಸಿಗರನ್ನು ನಿರಾಶೆಗೊಳಿಸಿದೆ.

ತಾಲ್ಲೂಕು ಕೇಂದ್ರದಿಂದ 24 ಕಿ.ಮೀ ಅಂತರದಲ್ಲಿರುವ ಬಿಆರ್‌ಟಿ `ಹುಲಿ ಸಂರಕ್ಷಿತ  ತಾಣ~ವಾಗಿ ರಾಷ್ಟ್ರೀಯ ಮಾನ್ಯತೆ ಲಭಿಸಿದೆ.

ನವಿಲಿನ ನಾಟ್ಯ ಹಾಗೂ ಆನೆಗಳ ಸ್ವಚ್ಚಂದ ವಿಹಾರವೂ ಇಲ್ಲಿದೆ. ಇಲ್ಲಿನ ವೈವಿಧ್ಯತೆ ಹಾಗೂ ವನ್ಯಜೀವಿಗಳ       ಅಧ್ಯಯನಕ್ಕೆ ಸಂಶೋಧಕರ ಸ್ವರ್ಗವಾಗಿಯೂ ರೂಪಿತವಾಗಿದೆ. ಇಲ್ಲಿನ ಮೂಲನಿವಾಸಿಗಳಾದ ಸೋಲಿಗರ ಸಂಸ್ಕೃತಿಯನ್ನು ಪರಿಚಯಸಿ ಪ್ರವಾಸೋದ್ಯಮದ ಭಾಗವನ್ನಾಗಿ ಮಾಡುವ ಆಸೆ ಈಡೇರಿಲ್ಲ. ರಾಷ್ಟ್ರೀಯ ಹೆದ್ದಾರಿ 209 ಹಾಗೂ 212 ಇಲ್ಲೇ ಹಾದು ಹೋಗುತ್ತದೆ. ಇದನ್ನೇ ಬಳಸಿ ಸ್ಥಳಿಯರಿಗೂ ಇದರಿಂದ ಉದ್ಯೋಗ ಲಭಿಸುವಂತೆ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇಲಾಖೆ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಬಳೇಪೇಟೆ ಫೈರೋಜ್‌ಖಾನ್ ದೂರುತ್ತಾರೆ.

`ಗಿರಿಜನರನ್ನು ಪರಿಸರ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಇವರ ಪರಂಪರಾಗತ ಜ್ಞಾನವನ್ನು ಆಸಕ್ತರಿಗೆ ತಿಳಿಸುವ ರೀತಿಯಲ್ಲಿ ಬಳಸಿ  ಕೊಳ್ಳಬೇಕು. ಆದರೆ ಇವರ ಸಂಪ್ರದಾಯ ಆಚಾರ ವಿಚಾರಗಳನ್ನು ಅನುಸರಿಸಲೂ ಹೋಗಿ ನಗೆಪಾಟಲು ಆಗಬಾರದು~ ಎನ್ನುತ್ತಾರೆ ಬುಡಕಟ್ಟು ಸಂಘದ ಜಿಲ್ಲಾ ಕಾರ್ಯದರ್ಶಿ ಸಿ. ಮಾದೇಗೌಡ.

`ಪ್ರಕೃತಿ ವೀಕ್ಷಣೆಯ ಹೆಸರಲ್ಲಿ ಪರಿಸರವನ್ನು ಹಾಳುಮಾಡುವ ಕೆಲಸ ಮಾಡಬಾರದು. ಜೀವ ಜಾಲದ ಭಾಗವಾದ ಇಲ್ಲಿ ಮದ್ಯಪಾನ, ಮಾಂಸಹಾರ ಬಳಕೆ, ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಎಚ್ಚರಿಕೆ ವಹಿಸಬೇಕು. ಪ್ರವಾಸಿಗರು ಸಂಚರಿಸಬಹುದಾದ ಪ್ರಕೃತಿಯ ಧಾರಣ ಸಾಮರ್ಥ್ಯವನ್ನು ಇಲ್ಲಿ ಪರಿಗಣಿಸಿ ಪ್ರವಾಸೋದ್ಯಮ ವನ್ನು ಅಭಿವೃದ್ಧಿ ಪಡಿಸಿದರಷ್ಟೇ ಉತ್ತಮ ಪ್ರವಾಸಿ ತಾಣವಾಗಿಸಲು ಸಾಧ್ಯ~ ಎಂದು ಅಶೋಕ ಪರಿಸರ ಅಧ್ಯಯನ ಸಂಸ್ಥೆಯ ಸಂಶೋಧಕ ಸಿದ್ದಪ್ಪಶೆಟ್ಟಿ `ಪ್ರಜಾವಾಣಿ~ಗೆ       ತಿಳಿಸಿದರು.

ಇಷ್ಟೆಲ್ಲ ವೈವಿಧ್ಯತೆ ಇರುವ ಪುಟ್ಟ ತಾಲ್ಲೂಕಿನ ಹಿರಿದಾದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಜಿಲ್ಲಾ ಆಡಳಿತ ಮಾಡುವುದೆ? ಕಾದು   ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT