ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಯೋಚನೆಗಳಿರಲಿ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಸ್ವಸ್ಥ ಬದುಕು

ನಿಸರ್ಗ ಸೌಂದರ್ಯ ತುಂಬಿದ ಸುಂದರವಾದ ಪಟ್ಟಣದಲ್ಲಿ ಗಟ್ಟು ಎಂಬ ನಾಯಿಯೊಂದು ವಾಸಿಸುತ್ತಿತ್ತು. ಪ್ರತಿಯೊಬ್ಬರಿಗೂ ಗಟ್ಟುವಿನ ಪರಿಚಯವಿತ್ತು. ಆತ ಇಡೀ ದಿನ ಬಾಲ ಅಲ್ಲಾಡಿಸುತ್ತ, ಜನರನ್ನು ಕಂಡಕೂಡಲೇ ಬೊಗಳುತ್ತಿದ್ದ.

ಸಂಗೀತಗಾರ್ತಿಯೊಬ್ಬಳು ಗೀತೆಯೊಂದನ್ನು ಗುನಗುನಿಸುತ್ತಾ ಬೊಗಳುವ ಗಟ್ಟುವಿನತ್ತ ನೋಡಿ ಹೇಳಿದಳು, “ಗಟ್ಟು ನಾನು ನಡೆದುಹೋಗುತ್ತಿರುವಾಗ ನೀನು ಹಾಡಬಾರದೇಕೆ? ನೀನು ತುಂಬ ಸುಂದರವಾಗಿ ಹಾಡುತ್ತೀಯಾ ಅದು ನಿನಗೆ ಗೊತ್ತೆ”ಎಂದು ಕೇಳಿದಳು.

ಮಾರನೇ ದಿನ ದಪ್ಪ ದೇಹದ ಹೆಂಗಸೊಬ್ಬಳು ರಸ್ತೆಯಲ್ಲಿ ನಡೆದುಹೋಗುತ್ತಿದ್ದಳು. ಆಕೆ ಸಹ ಬೊಗಳುತ್ತಿದ್ದ ಗಟ್ಟುವಿನತ್ತ ನೋಡಿ, “ಗಟ್ಟು ಯಾವಾಗಲೂ ಹಸಿದಿರುತ್ತೀಯಾ? ಇಡೀ ದಿನ ಜನರತ್ತ ಮುಖ ಮಾಡಿ ಬೊಗಳುವ ಬದಲು ನೀನು ಜಾಗಿಂಗ್‌ಗೆ ಯಾಕೆ ಹೋಗಬಾರದು” ಎಂದು ಪ್ರಶ್ನಿಸಿದಳು.

ಮತ್ತೊಂದು ದಿನ ತತ್ವಶಾಸ್ತ್ರದ ಪ್ರಾಧ್ಯಾಪಕಿಯೊಬ್ಬಳು, “ಗಟ್ಟು ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ? ಈ ದಿನ ನೀನೆ ಏಕೆ ಉತ್ತರಿಸಬಾರದು?” ಎಂದು ಹೇಳಿದಳು.
ಈ ಮಧ್ಯೆ ಗಟ್ಟು ಬೊಗಳುತ್ತಲೇ ಇತ್ತು.

ನಾವೆಲ್ಲ ನಮ್ಮ ಯೋಚನೆ, ಚಿಂತನೆಗಳ ಕನ್ನಡಕ ಧರಿಸಿ ಜಗತ್ತನ್ನು ನೋಡುತ್ತೇವೆ. ನಮಗೆ ಜಗತ್ತು ಕೆಟ್ಟದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದರೆ ಅದಕ್ಕೆ ನಮ್ಮ ಯೋಚನೆ ಕಾರಣ. `ಈ ಕಾಲ ಸರಿಯಿಲ್ಲ ಮತ್ತು ಅಪಾಯಕಾರಿ~ ಎಂದು ನಾವು ಚಿಂತೆ ಮಾಡುತ್ತೇವೆ. ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಿ, ಜಗತ್ತು ಹೇಗೆ ಬದಲಾದಂತೆ ಕಾಣುತ್ತದೆ ನೋಡಿ.

ಜಗತ್ತು ಸುಂದರ ಮತ್ತು ಇಲ್ಲಿ ಪ್ರೀತಿ ತುಂಬಿದೆ ಅಂದುಕೊಂಡರೆ ಅದನ್ನು ನಾವು ಸೌಂದರ್ಯ ಮತ್ತು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದೇವೆ ಎಂದು ಅರ್ಥ. ನಮ್ಮ ಸುತ್ತಲಿನ ಜಗತ್ತನ್ನು ಸುಂದರಗೊಳಿಸಿಕೊಳ್ಳುವಲ್ಲಿ ನಮ್ಮ ಕೊಡುಗೆ ಕಿಂಚಿತ್ ಆದರೂ ಇರುತ್ತದೆ. ಆಲೋಚನೆಗಳನ್ನು ಬದಲಿಸಿ ಪ್ರೀತಿಯ ಕಂಪನಾಂಕಗಳನ್ನು ಹೆಚ್ಚಿಸಿಕೊಳ್ಳಿ.

ಇತ್ತೀಚೆಗೆ ಮಹಿಳೆಯೊಬ್ಬಳು ಹಲ್ಲು ಕೀಳಿಸಿಕೊಳ್ಳಲು ದಂತವೈದ್ಯರ ಬಳಿ ಹೋಗಬೇಕಿತ್ತು. ಆಸ್ಪತ್ರೆಗೆ ತೆರಳುವಾಗ ಕ್ಯಾಬ್‌ನಲ್ಲಿ ಕುಳಿತ ಅವಳು, `ಈ ವೈದ್ಯರು ಒಳ್ಳೆಯ ವ್ಯಕ್ತಿ, ನನಗೆ ನೋವು ಮಾಡುವುದಿಲ್ಲ, ಎಲ್ಲವೂ ಸರಿಯಾಗುತ್ತದೆ~ ಎಂದು ಹೇಳಿಕೊಳ್ಳುತ್ತಲೇ ಹೋದಳು. ಹಲ್ಲು ಕೀಳುವಾಗ ಆಕೆಗೆ ಸ್ವಲ್ಪವೂ ನೋವಾಗಲಿಲ್ಲ.
 
`ನಿಮಗೆ ಈಗ ಹೇಗನಿಸುತ್ತಿದೆ~ ಎಂದು ದಂತವೈದ್ಯರು ಕಳಕಳಿಯಿಂದ ಆಕೆಯನ್ನು ಪ್ರಶ್ನಿಸಿದರು. ಆಕೆ ಮನೆಗೆ ತೆರಳುವ ಸಮಯ ಬಂದಾಗ, ಕ್ಯಾಬ್ ತರಿಸಲು ತಮ್ಮ ಕಾಂಪೌಂಡರ್‌ನನ್ನು ಕಳುಹಿಸಿದರು.

ಆಕೆ ಕ್ಯಾಬ್‌ನಲ್ಲಿ ಕುಳಿತಾದ ಮೇಲೆ ಕಾಂಪೌಂಡರ್ ಚಾಲಕನಿಗೆ ಹೇಳಿದ, ` ಇದು ಆಕೆಯ ವಿಳಾಸ. ನಿಧಾನವಾಗಿ ವಾಹನ ನಡೆಸಿ. ಆಕೆ, ಈಗಷ್ಟೇ ಹಲ್ಲು ಕೀಳಿಸಿಕೊಂಡಿದ್ದಾರೆ.~ ಕ್ಯಾಬ್ ಚಾಲಕ ಸಹ ನಿಧಾನವಾಗಿ ವಾಹನ ನಡೆಸಿದ.

ಆ ಮಹಿಳೆ ನನ್ನ ಬಳಿ, `ಈ ಜಗತ್ತು ಎಷ್ಟು ಸುಂದರವಾಗಿದೆ~ ಎಂದು ಹೇಳುತ್ತಾಳೆ. ನಾವು ಸುಂದರ ವಿಚಾರ, ಒಳ್ಳೆಯ ಆಲೋಚನೆ ಹೊಂದುವವರೆಗೆ ಈ ಜಗತ್ತು ಸುಂದರವಾಗಿಯೇ ಇರುತ್ತದೆ.
ಹೊಸ ವರ್ಷವನ್ನು ಸುಂದರವಾಗಿ, ವಿಶ್ವಾಸಯುತವಾಗಿ ಆರಂಭಿಸಲು ಇಲ್ಲಿದೆ ಮಾರ್ಗ.
ಹದಿಹರೆಯದ ಹುಡುಗಿಯೊಬ್ಬಳು ಕುಟುಂಬ ಸ್ನೇಹಿತರ ಮನೆಗೆ ಭೇಟಿ ನೀಡಿದ್ದಳು.
 
ಆ ಮನೆಯ ಹುಡುಗನೊಬ್ಬ ಶಾಲೆಯಲ್ಲಿ ಆಕೆಗೆ ಸೀನಿಯರ್ ಆಗಿದ್ದ. ಆತನನ್ನು ಆ ಹುಡುಗಿ ದೇವರಂತೆ ಕಾಣುತ್ತಿದ್ದಳು. ಭಾನುವಾರ ಆತ ಆ ಹುಡುಗಿ ಮತ್ತು ಆಕೆಯ ತಂಗಿಯನ್ನು ಲಾಂಗ್ ಡ್ರೈವ್‌ಗೆ ಕರೆದೊಯ್ದ. ಹಳೆಯ ಕಟ್ಟಡಗಳು, ಗ್ಯಾರೇಜ್, ಹಳೆಯ ಕಾರ್‌ಗಳ ಶೆಡ್, ಕೊಳಚೆ ನೀರು ಹರಿಯುವ ಪ್ರದೇಶದಲ್ಲಿ ಆತ ಕಾರ್ ಓಡಿಸಿಕೊಂಡು ಹೋದ. ಆದರೂ, ಈ ಹುಡುಗಿ ಖುಷಿಯಿಂದ ಕುಣಿಯುತ್ತಿದ್ದಳು. ತಾನು ಆರಾಧಿಸುವ ಹುಡುಗನ ಜತೆ ಇದ್ದೇನೆ ಎಂಬುದೇ ಆಕೆಯ ಸಂತಸಕ್ಕೆ ಕಾರಣವಾಗಿತ್ತು.

ನಿಮ್ಮ ಐಡಲ್ ಯಾರು? ಸಿನಿಮಾ ಸ್ಟಾರ್ ? ಕ್ರೀಡಾ ಪಟು? ಅಧ್ಯಾತ್ಮಿಕ ಗುರು ಅಥವಾ ದೇವರು? ಒಂದು ವಾರ ಕಾಲ ಆ ವ್ಯಕ್ತಿಯ ಜತೆ ಇದ್ದಂತೆ ಕಲ್ಪಿಸಿಕೊಳ್ಳಿ. ನೀವು ಆರಾಧಿಸುವ ಆ ವ್ಯಕ್ತಿ ನಿಮ್ಮ ಜೊತೆಗೆ ಇರುತ್ತಾರೆ. ನೀವು ಎಲ್ಲಿ ಹೋದರೂ ಅಲ್ಲಿ ಬರುತ್ತಾರೆ. ಆ ಸಮಯದಲ್ಲಿ ಮನಸ್ಸು ಮಂಕಾಗಿಸುವ ಆಲೋಚನೆಗಳು ಹುಟ್ಟಿದರೂ ಅದನ್ನು ಸಂತಸಕರ ಯೋಚನೆಯಾಗಿ ಬದಲಿಸಿಕೊಳ್ಳುತ್ತೀರಿ.

ಹೌದು, ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ನೀವು ಆರಾಧಿಸುವ ಆ ವ್ಯಕ್ತಿಗೆ ಕೆಟ್ಟ ಮಾತು ಹೇಳಬೇಕು ಅಂದರೂ ಅದನ್ನು ಅಲ್ಲಿಯೇ ಹತ್ತಿಕ್ಕಿಕೊಳ್ಳುತ್ತೀರಿ. ಅದು ಹಾಗೆಯೇ ಇರಬೇಕು. ಯಾವಾಗಲೂ, ಎಂಥ ಸನ್ನಿವೇಶದಲ್ಲೂ ಸುಂದರವಾದುದ್ದನ್ನೇ ಹುಡುಕಿ. ನಾನು ಅದನ್ನು ಪ್ರೀತಿಸುತ್ತೇನೆ ಎಂದು ಪದೇಪದೇ ಹೇಳಿಕೊಳ್ಳಿ. ನೀವು ಎಲ್ಲಿಯೇ ಹೋಗಲಿ ಬೆಳಕು ಬೀರುವ ವ್ಯಕ್ತಿಯಾಗಿ.

`ಬೀಜದೊಳಗೆ ಎಣ್ಣೆ ಇದ್ದಂತೆ, ಕಿಡಿಯಲ್ಲಿ ಬೆಂಕಿ ಇದ್ದಂತೆ ನಿಮ್ಮ ಗುರು ನಿಮ್ಮಳಗೆ ಇರುತ್ತಾನೆ. ನೀವು ಎಚ್ಚೆತ್ತುಕೊಳ್ಳಬೇಕು~ ಎನ್ನುತ್ತಾರೆ ಸಂತ ಕಬೀರ.

ನಿಮ್ಮಳಗಿನ ಬೆಳಕನ್ನು ಹೊತ್ತಿಸಿಕೊಳ್ಳಿ. ಸ್ವಿಚ್ ಹಾಕಿದಾಗ ಕತ್ತಲ ಕೋಣೆಯಲ್ಲಿ ಬೆಳಕು ತುಂಬುವಂತೆ, ಅರಿವಿನ ಬೆಳಕು ನಿಮ್ಮಳಗೆ ಆವರಿಸಲಿ.

ಅದು ಹೇಗೆ? ನಿಮ್ಮ ಬದುಕನ್ನು ಪ್ರೀತಿಸಿ, ನಗುತ್ತ, ಆರೋಗ್ಯವಂತರಾಗಿ ಇರಿ. ನಮ್ಮ ಸುತ್ತಲೂ ವಿಶ್ವದ ಸುಂದರ ಕಂಪನಗಳು ಇರುತ್ತವೆ. ನಾವು ಅದನ್ನು ಹೀರಿಕೊಳ್ಳಬೇಕು ಅಷ್ಟೇ.
ಎಲ್ಲರನ್ನೂ ಮನಃಪೂರ್ವಕವಾಗಿ ಹೊಗಳಿ. ಹಾಗೆಯೇ ಹೊಗಳಿಕೆಯನ್ನು ಸ್ವೀಕರಿಸಿ. ಹೊಗಳಿಕೆ ಅಂದರೆ `ಐ ಲವ್ ಯೂ~ ಎನ್ನುವ ಮತ್ತೊಂದು ವಿಧಾನ ಅಷ್ಟೇ.

ನಿಮ್ಮನ್ನು ನೀವೇ ಹೊಗಳಿಕೊಳ್ಳಿ ಹಾಗೂ ಸ್ವೀಕರಿಸಿ. ಇದು ಆತ್ಮರತಿಯಲ್ಲ. ನೀವು ಬೇರೆಯವರನ್ನು ಹೊಗಳಿದಷ್ಟು ಜಗತ್ತಿನ ಶಕ್ತಿಯನ್ನು ಹೆಚ್ಚಿಸುವಲ್ಲಿ, ಈ ಗ್ರಹವನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಕೊಡುಗೆ ನೀಡುತ್ತ ಇರುತ್ತೀರಿ. ಹಾಗಾಗಿ ನೀವು ಪ್ರೀತಿಸುವ ವ್ಯಕ್ತಿಗಳ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಬೇಕು.

ನಿಮ್ಮ ಮತ್ತು ನಿಮ್ಮ ಸುತ್ತಲಿನ ಜಗತ್ತಿನಲ್ಲಿ ಸೌಂದರ್ಯ ತುಂಬಿತುಳುಕುವುದನ್ನು ನೀವು ನೋಡುತ್ತೀರಿ. 2012ರೊಳಗೆ ಕಾಲಿರಿಸಲು ಎಂಥ ಉನ್ನತ ಹಾಗೂ ದೈವಿಕ ಮಾರ್ಗ ಇದಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT