ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಮನೆಯಲ್ಲಿ ನಾಗತಿಹಳ್ಳಿ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಎರಡು ದಶಕದಲ್ಲಿ ನಾನು ಮಾಡುತ್ತಿರುವ 13ನೇ ಅಪರಾಧ ಇದು~ ಎಂದು ಸ್ವವಿಡಂಬನೆ ಮಾಡಿಕೊಂಡರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಹಾಗೆ ಹೇಳುವಾಗ ಅವರ ಮುಖದಲ್ಲಿ ಏನೋ ಸಂಭ್ರಮ ಕಳೆಗಟ್ಟಿತ್ತು. ಅಪರಾಧಕ್ಕೆ ಕೈ ಹಾಕಿದ್ದೇನೆ ಎಂಬ ಸ್ವವಿಮರ್ಶೆಗಿಳಿಯಲು ಸಕಾರಣವೂ ಇತ್ತು. ಏಕೆಂದರೆ ಅವರ `ಮಾತಾಡ್ ಮಾತಾಡ್ ಮಲ್ಲಿಗೆ~ ಬಗ್ಗೆ ಜನ ಹೆಚ್ಚು ಮಾತನಾಡಿರಲಿಲ್ಲ. `ಒಲವೇ ಜೀವನ ಲೆಕ್ಕಾಚಾರ~ದಲ್ಲೂ ಅವರ ಲೆಕ್ಕಾಚಾರ ತಲೆಕೆಳಗಾಗಿತ್ತು. ಆದರೆ ಬಿಸಿ ಬಿಸಿ `ತಾಜಾ ಸುದ್ದಿ~ ಕೊಟ್ಟರೆ ಜನ ಅದನ್ನು ಅರಗಿಸಿಕೊಂಡು ಈವರೆಗಿನ ಅಪರಾಧಗಳನ್ನು ಮನ್ನಿಸುತ್ತಾರೆ ಎಂಬ ವಿಶ್ವಾಸ ಅವರದು.
 
`ಉಂಡೂ ಹೋದ ಕೊಂಡೂ ಹೋದ~ ಚಿತ್ರದ ಬಳಿಕ ನಾಗತಿಹಳ್ಳಿ `ಬ್ರೇಕಿಂಗ್ ನ್ಯೂಸ್~ ಮೂಲಕ ಮತ್ತೆ ಹಾಸ್ಯ ಪ್ರಧಾನ ಚಿತ್ರಕ್ಕೆ ಕೈ ಹಾಕಿದ್ದಾರೆ. `ಕೃಷ್ಣನ್ ಲವ್ ಸ್ಟೋರಿ~ ಚಿತ್ರದ ಯಶಸ್ವಿ ಜೋಡಿ ಅಜಯ್ ಮತ್ತು ರಾಧಿಕಾ ಪಂಡಿತ್ ಈ ಚಿತ್ರದಲ್ಲಿ ಮತ್ತೆ ಜೊತೆಗೂಡಿದ್ದಾರೆ. ನಾಗತಿಹಳ್ಳಿ ಹೊಸದಾಗಿ ನಿರ್ಮಿಸಿರುವ `ಲಿರಿಕ್ಸ್~ ಕಟ್ಟಡದಲ್ಲಿ ನಡೆದ `ಬ್ರೇಕಿಂಗ್ ನ್ಯೂಸ್~ನ ಮುಹೂರ್ತಕ್ಕೆ ವಿಶಿಷ್ಟ ಕಳೆ ಇತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ನಟರಾದ ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ದುನಿಯಾ ವಿಜಯ್, ಅನಿರುದ್ಧ್, ನಟಿ ಸುಮಲತಾ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಖ್ಯಾತನಾಮರ ದಂಡು ಅಲ್ಲಿ ನೆರೆದಿತ್ತು.

ಚಿತ್ರರಂಗದಲ್ಲಿ ಇನ್ನೂ ಯಶಸ್ವಿಯಾಗಿ ಉಳಿದುಕೊಂಡಿರುವ ಏಕೈಕ ಸಾಹಿತಿ ನಾಗತಿಹಳ್ಳಿ ಎಂದು ಕಂಬಾರರು ಚಟಾಕಿ ಹಾರಿಸಿದರು. ನಮ್ಮಂಥ ಅನೇಕ ಸಾಹಿತಿಗಳು ಸಿನಿಮಾದಲ್ಲಿ ಒಂದು ಕೈ ನೋಡಲು ಹೋಗಿ ಹಿಂದಕ್ಕೆ ಮರಳಿದವರು ಮತ್ತೆ ಅತ್ತ ತಲೆಹಾಕಲಿಲ್ಲ. ಆದರೆ ನಾಗ್ತಿ ಇನ್ನೂ ಅಲ್ಲೇ ಇದ್ದಾರೆ. ಪ್ರೇಕ್ಷಕರನ್ನು ಅರಿತುಕೊಂಡು ಅವರನ್ನು ತಲುಪುವ ವಿಶಿಷ್ಟ ಕಲೆ ಅವರಿಗೆ ಸಿದ್ಧಿಸಿದೆ ಎಂದು ಹೊಗಳಿದರು.

`ನಾನು ತೆರೆಯ ಮೇಲೆ ನೋಡಲು ಹೆಚ್ಚು ಇಷ್ಟಪಡುವ ಜೋಡಿ ರಾಧಿಕಾ ಪಂಡಿತ್-ಅಜಯ್‌ರದು~ ಎಂದರು ಶಿವರಾಜ್‌ಕುಮಾರ್. ನಾಗತಿಹಳ್ಳಿ ಕಮ್ಮಿ ಚಿತ್ರ ಮಾಡಿದ್ದರೂ ಅವರಿಗೆ ಬುದ್ಧಿ ಜಾಸ್ತಿ ಎಂದು ತುಸು ಕೀಟಲೆ ಮಾಡಿದ ಶಿವಣ್ಣ, ದೀರ್ಘಕಾಲದಿಂದ ಬಾಕಿ ಉಳಿದುಕೊಂಡಿರುವ ತಮ್ಮಿಬ್ಬರ ಚಿತ್ರ ಬೇಗನೇ ಸೆಟ್ಟೇರಲಿ ಎಂದು ಆಶಿಸಿದರು.

ಚಿತ್ರದಲ್ಲಿ ಬ್ರೇಕಿಂಗ್ ನ್ಯೂಸ್ ಕೊಡುವವರು ನಾಯಕ ನಟ ಅಜಯ್‌ರಾವ್. ಟೀವಿ ಮಾಧ್ಯಮದ ಸಾಮಾಜಿಕ ಮೌಲ್ಯಗಳಿಗೆ ಬೆಲೆ ಕೊಡುವ ಆದರ್ಶ ಪತ್ರಕರ್ತನ ಪಾತ್ರ ಅವರದು. ಚಿತ್ರದ ಪಾತ್ರಕ್ಕಾಗಿ ಪತ್ರಕರ್ತರನ್ನು ಸೂಕ್ಷ್ಮವಾಗಿ ಅವಲೋಕಿಸುವುದನ್ನು ಪ್ರಾರಂಭಿಸಿದ್ದೇನೆ ಎಂದು ಅಜಯ್ ನುಡಿದರು. ನಾಗತಿಹಳ್ಳಿ ಅವರ ಚಿತ್ರದಲ್ಲಿ ನಟಿಸುವುದಕ್ಕಾಗಿಯೇ ಬೆಂಗಳೂರಿನ ಬಸ್ಸು ಹತ್ತಿದ್ದ ಅಜಯ್, 10 ವರ್ಷದ ಬಳಿಕ ತಮ್ಮ ಕನಸು ನನಸಾಗುತ್ತಿರುವ ಖುಷಿ ವ್ಯಕ್ತಪಡಿಸಿದರು. ನಾಯಕಿ ರಾಧಿಕಾ ಪಂಡಿತ್‌ಗೆ ಜಗಳಗಂಟಿ ಮತ್ತು ತರಲೆ ಹುಡುಗಿಯ ಪಾತ್ರವಂತೆ.

ಬ್ರೇಕಿಂಗ್ ನ್ಯೂಸ್ ಮೂಲಕ ಬೇರೇನನ್ನೂ ಹೇಳಲು ಹೋಗಿಲ್ಲ. ಇದು ಪ್ರೇಮಕಥೆಯ ಚೌಕಟ್ಟಿನ ಹಾಸ್ಯಪ್ರಧಾನ ಚಿತ್ರ ಎಂದು ಸ್ಪಷ್ಟನೆ ನೀಡಿದರು ನಾಗತಿಹಳ್ಳಿ. ಬ್ರೇಕಿಂಗ್ ನ್ಯೂಸ್ ಹುಟ್ಟುಹಾಕುವ ರೋಚಕತೆಯ ಆಚೆ ಯೋಚನೆಗೆ ಹಚ್ಚುವ ಸಂವೇದಾನಾತ್ಮಕ ಪ್ರೇಮ ಚಿತ್ರದಲ್ಲಿದೆಯಂತೆ. ಈ ನವಿರು ಪ್ರೇಮ ಹಾಸ್ಯದ ಚೌಕಟ್ಟಿನಲ್ಲಿ ಅನಾವರಣಗೊಳ್ಳುತ್ತದೆ ಎಂಬುದು ಅವರ ವಿವರಣೆ.

ಕನ್ನಡದ ಮೇಷ್ಟ್ರಾಗಿ `ಬ್ರೇಕಿಂಗ್ ನ್ಯೂಸ್~, `ಲಿರಿಕ್ಸ್~ ಎಂಬ ಇಂಗ್ಲಿಷ್ ಹೆಸರುಗಳನ್ನು ಇಡುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದುರಾಯಿತು. ಪ್ರಶ್ನೆಯನ್ನು ಮೊದಲೇ ನಿರೀಕ್ಷಿಸಿದ್ದ ನಾಗ್ತಿ ಉತ್ತರವನ್ನೂ ಸಿದ್ಧಪಡಿಸಿಕೊಂಡು ಕುಳಿತಿದ್ದರು. ಈ ಪದಗಳು ಜನರ ಮಾತುಗಳಲ್ಲಿ ಬೆರೆತುಹೋಗಿವೆ. ನಮ್ಮದೇ ಭಾಷೆಯ ಪದಗಳು ಎನ್ನುವ ಮಟ್ಟಿಗೆ ಬಳಕೆಯಲ್ಲಿದೆ ಎಂದು ಸಮರ್ಥಿಸಿಕೊಂಡರು. ಜೊತೆಗೆ ನಾನು ಕನ್ನಡದ ಅನೇಕ ಕೆಲಸಗಳನ್ನು ಮಾಡುತ್ತಿದ್ದೇನೆ. ಆದರೆ ಕನ್ನಡದ ದುರಭಿಮಾನಿಯಲ್ಲ ಎಂದೂ ಹೇಳಿದರು.

`ಪ್ಯಾರಿಸ್ ಪ್ರಣಯ~ಕ್ಕೆ ಸಂಗೀತ ನೀಡಿದ್ದ ಸ್ಟೀಫನ್ ಪ್ರಯೋಗ್ ಬ್ರೇಕಿಂಗ್ ನ್ಯೂಸ್‌ಗೆ ಸ್ವರ ಸಂಯೋಜಿಸಲಿದ್ದಾರೆ. ಅನಂತ್‌ನಾಗ್, ರಂಗಾಯಣ ರಘು, ಅರುಣ್‌ಸಾಗರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಅಂಬರೀಷ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT