ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶರ ಅಕ್ಷಯ ಬತ್ತಳಿಕೆ

Last Updated 27 ಜನವರಿ 2011, 18:30 IST
ಅಕ್ಷರ ಗಾತ್ರ

ಗವಿಪುರಂನ ಅಂಬಾ ಭವಾನಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ನಿಂತಿದ್ದ ಎನ್.ಎಂ.ಸುರೇಶ್ ಹಣೆ ಮೇಲೆ ಕುಂಕುಮ. ಮುಖದಲ್ಲಿ ತುಳುಕುತ್ತಿದ್ದುದು ಸಣ್ಣ ನಗು. ‘ಚೆಲುವೆಯೇ ನಿನ್ನೇ ನೋಡಲು’ ಚಿತ್ರದ ದೊಡ್ಡ ನಷ್ಟದ ಏಟಿನಿಂದ ಈ ನಿರ್ಮಾಪಕ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಗಾಂಧಿನಗರದಿಂದ ಸದ್ದು ಹೊಮ್ಮಿಸಿದವರಿಗೆ ಉತ್ತರ ಕೊಡಲೋ ಎಂಬಂತೆ ಮತ್ತೆ ಸುರೇಶ್ ಮೇಲೆದ್ದಿದ್ದಾರೆ. ಅವರು ನಿರ್ಮಾಣಕ್ಕೆ ಕೈಹಾಕಿರುವ ಹೊಸ ಚಿತ್ರದ ಹೆಸರು ‘ಅದ್ವೈತ’.

ಮುಖದ ಮೆಲೆ ದಪ್ಪ ಮೇಕಪ್ ಪದರ ಇಟ್ಟುಕೊಂಡು ಖುಷಿಯಿಂದ ಓಡಾಡಿಕೊಂಡಿದ್ದ ಅಜಯ್ ರಾವ್‌ಗೆ ದುಪ್ಪಟ್ಟು ಸಂಭ್ರಮ. ಒಂದು- ಅವರೇ ಈ ಚಿತ್ರದ ನಾಯಕ. ಎರಡು- ಮುಹೂರ್ತ ನಡೆದ ದಿನವೇ (ಜ.24) ಅವರ ಜನ್ಮದಿನ.

ಬರೀ 35 ಸಾವಿರ ರೂಪಾಯಿ ವೆಚ್ಚದಲ್ಲಿ ‘ನವಿಲಾದವರು’ ಚಿತ್ರ ನಿರ್ದೇಶಿಸಿದ ಗಿರಿರಾಜ್ ‘ಅದ್ವೈತ’ ಸಿನಿಮಾದ ನಿರ್ದೇಶಕರು. ಶಶಾಂಕ್ ಆ್ಯಕ್ಷನ್, ಕಟ್ ಹೇಳಿದ ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಗಿರಿರಾಜ್, ತಮ್ಮ ಯೋಗ್ಯತೆ ಸಾಬೀತುಪಡಿಸಲು ಇನ್ನೊಂದು ಅವಕಾಶ ಸಿಕ್ಕಂತಾಗಿದೆ ಎನ್ನುತ್ತಾ ಕನ್ನಡಕ ಸರಿಪಡಿಸಿಕೊಂಡರು. ‘ಹಂಬಲ ಇರುವ ನಿರ್ದೇಶಕ ನಾನು. ಅದಕ್ಕೆ ಬೆಂಬಲ ಸಿಕ್ಕಿದೆ’ ಎಂದ ಅವರ ಮಾತು ಚುಟುಕಾಗಿತ್ತು.

ಚಿತ್ರದ ನಾಯಕ ಬರಹಗಾರ. ಬರವಣಿಗೆಯಿಂದ ಹೋರಾಟ ಸಾಧ್ಯವೆಂಬುದನ್ನು ತೋರಿಸುವುದರ ಜೊತೆಗೆ ಇಬ್ಬಗೆಯ ವರ್ತನೆ ಮನುಷ್ಯನಿಗೆ ಸಲ್ಲದು ಎಂಬ ಸಂದೇಶವನ್ನೂ ಚಿತ್ರ ಒಳಗೊಳ್ಳಲಿದೆಯಂತೆ. ಹದಿನಾರರಿಂದ 22ರ ವಯೋಮಾನದವರನ್ನು ಕೇಂದ್ರವಾಗಿಸಿಕೊಂಡು ಗಿರಿರಾಜ್ ಚಿತ್ರಕಥೆ ರೂಪಿಸಿದ್ದಾರೆ. ನಾಯಕಿಗಾಗಿ ಹುಡುಕಾಟ ನಡೆದಿದ್ದು, ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಲು ಒಪ್ಪಿಗೆ ನೀಡಿದ್ದಾರೆ.

ಸುರೇಶ್ ಈ ಸಲ ನಿರ್ಮಾಪಕರ ಕುರ್ಚಿಯ ಮೇಲೆ ತಮ್ಮ ಪತ್ನಿ ಶಾರದಾ ಅವರನ್ನು ಕೂರಿಸಿದ್ದಾರೆ. ತಮ್ಮ ಇಷ್ಟದೇವರಾದ ತುಳಜಾಭವಾನಿಯ ಸ್ಮರಣೆಯನ್ನು ಮುಂದುವರಿಸಿರುವ ಅವರಿಗೆ ಒಂದಾದರೂ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ‘ಗಾಂಧಿ ಸ್ಮೈಲ್ಸ್’ ಎಂಬ ಅವರದ್ದೇ ನಿರ್ಮಾಣದ ಚಿತ್ರವಿನ್ನೂ ತೆರೆಕಂಡಿಲ್ಲ. ಆದರೂ ಈ ವರ್ಷ ಇನ್ನೂ ಐದು ಸಿನಿಮಾ ಮಾಡುವ ಬಯಕೆ ಅವರದ್ದು.

‘ಎಕ್ಸ್‌ಕ್ಯೂಸ್ ಮಿ’ ಚಿತ್ರದಲ್ಲಿ ಅಜಯ್‌ಗೆ ಅವಕಾಶ ಕೊಟ್ಟಿದ್ದವರು ಇದೇ ಸುರೇಶ್. ಈಗ ಪರಿಸ್ಥಿತಿ ಬದಲಾಗಿದೆ. ಅಜಯ್‌ಗೆ ಒಂದಿಷ್ಟು ಅವಕಾಶಗಳು ಸಿಗುತ್ತಿವೆ. ಹಾಗಾಗಿ ಅಜಯ್ ನಾಯಕರಾಗುತ್ತಿರುವುದು ತಮ್ಮ ಪಾಲಿಗೆ ಪುನರ್ಜನ್ಮವಿದ್ದಂತೆ ಎಂದು ಸುರೇಶ್ ಹೊಗಳತೊಡಗಿದರು. ‘ದೊಡ್ಡ ಮಾತು ದೊಡ್ಡ ಮಾತು’ ಎನ್ನುತ್ತಾ ಅಜಯ್ ನಿರ್ಮಾಪಕರ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದರು.

ಸುರೇಶ್ ಹತ್ತು ಸಲ ಚಿತ್ರಕತೆಯನ್ನು ಓದಿದ ನಂತರವಷ್ಟೇ ಗಿರಿರಾಜ್‌ಗೆ ಅವಕಾಶ ಕೊಟ್ಟಿರುವುದು. ಈ ನಿರ್ದೇಶಕರು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಜಯ್ ಹೊಗಳಿಕೆಯ ಸರ್ಟಿಫಿಕೇಟ್ ಕೂಡ ಕೊಟ್ಟರು. ತಮ್ಮ ಸಹಾಯಕ ನಿರ್ದೇಶಕನನ್ನು ಅವಕಾಶ ಹುಡುಕಿಕೊಂಡು ಬಂದ ಕ್ಷಣದ ಸಂಭ್ರಮ ಹಂಚಿಕೊಳ್ಳಲು ನಿರ್ದೇಶಕ ಶಶಾಂಕ್ ಕೂಡ ಬಂದಿದ್ದರು. ಅಂದಹಾಗೆ, ‘ಅದ್ವೈತ’ ಎಂಬುದು ತತ್ವ ಅಥವಾ ಸಿದ್ಧಾಂತ ಹೇಳುವ ಸಿನಿಮಾ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT