ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಪ್ರಮಾಣಪತ್ರ: ಅಧಿಕಾರಿಗಳಿಗೆ ಗ್ರಹಚಾರ: 23 ವರ್ಷದ ಅಧಿಸೂಚನೆ ರದ್ದು

Last Updated 23 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ 80  ಎಕರೆಯಷ್ಟು ಜಮೀನು ‘ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘ’ಕ್ಕಾಗಿ ಸ್ವಾಧೀನಪಡಿಸಿಕೊಂಡು 23 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಮಾಡಿದೆ.

ಪೀಣ್ಯ ಬಳಿಯ ನೆಲಗದರನಹಳ್ಳಿ, ಲಗ್ಗೆರೆ ಹಾಗೂ ಜೆ.ಬಿ.ಕಾವಲ್ ಬಳಿ 1988ರಲ್ಲಿ ಹೊರಡಿಸಿದ್ದ ಭೂಸ್ವಾಧೀನ ಅಧಿಸೂಚನೆ ಪ್ರಶ್ನಿಸಿ ದೊಡ್ಡಹನುಮಯ್ಯ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಈ ಆದೇಶ ಹೊರಡಿಸಿದ್ದಾರೆ.

ಇದೇ ಪ್ರಕರಣದಲ್ಲಿ ಕೋರ್ಟ್‌ಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿರುವ ಕಂದಾಯ ಇಲಾಖೆಯ ಅಂದಿನ ಅಧೀನ ಕಾರ್ಯದರ್ಶಿ ಎಂ.ವೆಂಕಟೇಶ ಮೂರ್ತಿ ಅವರ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕೇಸು ದಾಖಲು ಮಾಡುವಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ. ಇದರ ಜೊತೆಗೆ, ಇಲ್ಲಿಯವರೆಗೆ ಕೋರ್ಟ್ ದಾರಿ ತಪ್ಪಿಸಿರುವ ಮೂರ್ತಿ ಹಾಗೂ ಅವರಿಗೆ ಸಹಕರಿಸಿದ ಎಲ್ಲ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಲು ಅವರು ಸೂಚಿಸಿದ್ದಾರೆ.

ಈ ಸೊಸೈಟಿಯ ವಿರುದ್ಧ ತನಿಖೆ ನಡೆಸಲು ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಿಗೆ ಆದೇಶಿಸಲಾಗಿದೆ. ಈ ಸೊಸೈಟಿಯಲ್ಲಿ ಎಷ್ಟು ಹಣ ಇದೆ, ಏನೇನು ವ್ಯವಹಾರಗಳನ್ನು ಇದು ನಡೆಸುತ್ತಿದೆ, ಎಷ್ಟು ಮಂದಿಗೆ ನಿವೇಶನ ನೀಡಿದೆ
ಇತ್ಯಾದಿಯ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.

ಅಂತೆಯೇ, ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪ್ರತಿ ಅರ್ಜಿದಾರರಿಗೆ ಪರಿಹಾರದ ರೂಪದಲ್ಲಿ ತಲಾ 10 ಸಾವಿರ ರೂಪಾಯಿಗಳನ್ನು ನೀಡುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.

ಪ್ರಕರಣದ ವಿವರ: ಈ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ 1988ರಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಗೃಹ ನಿರ್ಮಾಣ ಮಂಡಳಿಗಳ ಅವ್ಯವಹಾರದ ಕುರಿತು ತನಿಖೆ ನಡೆಸಲು ಸರ್ಕಾರದಿಂದ ನೇಮಕಗೊಂಡಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಜಿ.ವಿ.ಕೆ.ರಾವ್ ನೇತೃತ್ವದ ಸಮಿತಿಯು ಈ ಸೊಸೈಟಿಯ ಅವ್ಯವಹಾರದ ಬಗ್ಗೆಯೂ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ, ಅಧಿಸೂಚನೆ ಪ್ರಶ್ನಿಸಿ 2007ರಲ್ಲಿ ಕೆಲವರು ಹೈಕೋರ್ಟ್ ಮೊರೆ ಹೋದರು.

ಈ ಮಧ್ಯೆ, ಕೆಲವರು ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಪಡೆದುಕೊಂಡರು. ಆದರೆ ದೊಡ್ಡಹನುಮಯ್ಯ ಮತ್ತಿತರರು ಪ್ರಕರಣವನ್ನು ಮುಂದುವರಿಸಿದರು. ಸ್ಥಳದ ಮಹಜರು ಮಾಡಲಾಗಿದೆ, ಸೊಸೈಟಿಯಿಂದ ಯಾವುದೇ ಲೋಪವಾಗಿಲ್ಲ ಇತ್ಯಾದಿಯಾಗಿ ಅಧಿಕಾರಿಗಳು ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ ರಾವ್ ವರದಿ ಬಗ್ಗೆ ಕೋರ್ಟ್ ಮುಂದೆ ಬಹಿರಂಗಪಡಿಸಿರಲಿಲ್ಲ.

ಆದರೆ ಈ ಎಲ್ಲವುಗಳ ಬಗ್ಗೆ ಅರ್ಜಿದಾರರ ಪರ ವಕೀಲ ವಿನೋದ್‌ಪ್ರಸಾದ್ ಹಾಗೂ ಇತರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು. ಇದನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು. ಈ ಹಿಂದೆ ಪರಿಹಾರ ಪಡೆದುಕೊಂಡವರು ಇಷ್ಟಪಟ್ಟಲ್ಲಿ, ಪರಿಹಾರದ ಹಣವನ್ನು ವಾಪಸು ಮಾಡಿ ಭೂಮಿಯನ್ನು ಪಡೆದುಕೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT