ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಭೂಮಿ ಯೋಜನೆ; ಫಲಾನುಭವಿಗಳ ಆಯ್ಕೆಗೆ ತಾತ್ಕಾಲಿಕ ತಡೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸುವರ್ಣ ಭೂಮಿ~ ಯೋಜನೆಯಡಿ ಫಲಾನುಭವಿ ರೈತರನ್ನು ಲಾಟರಿ ಮೂಲಕ ಆಯ್ಕೆ ಮಾಡುವುದರಿಂದ ಕಡುಬಡ ರೈತರಿಗೆ ಅನ್ಯಾಯ ಆಗುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದಿರುವ ಹೈಕೋರ್ಟ್, ಫಲಾನುಭವಿಗಳ ಆಯ್ಕೆಗೆ ತಾತ್ಕಾಲಿಕ ತಡೆ ನೀಡಿದೆ.

`ಈ ಯೋಜನೆ ಬಡವರಿಗಾಗಿ ಇದ್ದರೂ ಲಾಟರಿ ಮೂಲಕ ಆಯ್ಕೆ ಮಾಡುವುದರಿಂದ ಶ್ರೀಮಂತ ರೈತರಿಗೂ ಇದರ ಪ್ರಯೋಜನ ದೊರೆಯುವ ಸಾಧ್ಯತೆ ಇದೆ~ ಎಂದಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ `ಈ ವಿವಾದವನ್ನು ತನ್ನ ಮುಂದಿನ ಅದೇಶದವರೆಗೆ ಕಗ್ಗಂಟು ಮಾಡಬೇಡಿ~ ಎಂದು ನಿರ್ದೇಶಿಸಿದೆ.

 ರಾಸಾಯನಿಕ ಗೊಬ್ಬರ ಹಾಗೂ ಬೀಜಗಳನ್ನು ಖರೀದಿ ಮಾಡುವ ರೈತರಿಗೆ 10 ಸಾವಿರ ರೂಪಾಯಿಗಳ ಸಹಾಯಧನ ನೀಡುವ ಯೋಜನೆ ಇದಾಗಿದ್ದು, ಫಲಾನುಭವಿಗಳ ಆಯ್ಕೆಯ ವಿರುದ್ಧ ವಕೀಲ ಟಿ.ವೈ. ಕಾಟ್ವಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

 ಒಂದೊಂದು ತಾಲ್ಲೂಕಿನಿಂದ ಐದು ಸಾವಿರ ರೈತರನ್ನು ಮಾತ್ರ ಆಯ್ಕೆ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ರೈತರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಅನುಕೂಲ ಆಗುವಂತೆ ಯೋಜನೆ ರೂಪಿಸಲು ಸರ್ಕಾರಕ್ಕೆ ಆದೇಶಿಸುವಂತೆ ಅವರು ಕೋರಿದ್ದಾರೆ.

`ಐದು ಎಕರೆಗಿಂತ ಕಡಿಮೆ ಜಮೀನು ಇರುವ ರೈತರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಆದರೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುವುದು~ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಅದಕ್ಕೆ ನ್ಯಾಯಮೂರ್ತಿಗ`ಐದು ಎಕರೆ ಜಮೀನು ಇರುವವರಿಗಿಂತ ಮುಂಚೆ ಒಂದು ಎಕರೆ ಜಮೀನು ಇರುವವರಿಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ~ ಎಂದರು.

`ಈ ರೀತಿ ಬಡವರ ಆಯ್ಕೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಕೊನೆಯ ಪಕ್ಷ ಬಡತನವನ್ನಾದರೂ ಪಕ್ಷಪಾತದಿಂದ ಅಳೆಯುವುದನ್ನು ಕೈಬಿಡಿ. ಯೋಜನೆ ಇರುವುದು ಬಡವರಿಗಾಗಿ. ಅವರಿಗೆ ಯೋಜನೆಯ ಅನುಕೂಲ ಸಿಗುವಂತೆ ನೋಡಿಕೊಳ್ಳಿ~ ಎಂದು ಸರ್ಕಾರಕ್ಕೆ ವಿಚಾರಣೆ ವೇಳೆತಿಳಿಸಿದರು. ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಯಿತು.

ವಕ್ಫ್ ಬೋರ್ಡ್‌ಗೆ ಚುನಾವಣೆ: ರಾಜ್ಯ ವಕ್ಫ್  ಬೋರ್ಡ್‌ನ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಇನ್ನು 4-5 ತಿಂಗಳ ಒಳಗೆ ಚುನಾವಣೆ ನಡೆಸಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ  ತಿಳಿಸಿದೆ.

ಹಿಂದಿನ ಆಡಳಿತ ಮಂಡಳಿಯ ಅಧಿಕಾರ ಮುಗಿದು 18 ತಿಂಗಳು ಕಳೆದಿದ್ದರೂ ಚುನಾವಣೆ ನಡೆಸದ ಕ್ರಮ ಪ್ರಶ್ನಿಸಿ `ಕರ್ನಾಟಕ ವಕ್ಫ್ ಸಂರಕ್ಷಣೆ ಜಂಟಿ ಕ್ರಿಯಾ ಸಮಿತಿ~ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಆಕ್ಷೇಪಣಾ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದೆ.

2010ರ ಜನವರಿ 16ಕ್ಕೆ ವಕ್ಫ್ ಆಡಳಿತ ಮಂಡಳಿಯ ಅಧಿಕಾರ ಅವಧಿ ಮುಗಿದಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT