ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಸೌಧಕ್ಕೆ ರೈತರ ಮುತ್ತಿಗೆ ನಾಳೆ

Last Updated 3 ಡಿಸೆಂಬರ್ 2013, 9:58 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕಬ್ಬು ಬೆಳೆಗೆ ಯೋಗ್ಯ ಬೆಲೆ ನೀಡುವಂತೆ ಒತ್ತಾಯಿಸಿ ಇದೇ 4 ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರೈತ ಸಂಘದ ಮುಖಂಡ ಮುತ್ತಪ್ಪ ಕೋಮಾರ ತಿಳಿಸಿದರು.

‘ಬಾಗಲಕೋಟೆ, ಬೆಳಗಾವಿ, ವಿಜಾಪುರ, ಗದಗ ಮತ್ತು ಧಾರವಾಡ ಜಿಲ್ಲೆಗಳ ಸಾವಿರಾರು ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ’ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

‘ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಅಂದು ನಡೆಯುವ ರೈತರ ಹೋರಾಟ ಉಗ್ರ ಸ್ವರೂಪ ತಾಳಲಿದೆ’ ಎಂದು ಹೇಳಿದರು.

‘ಎರಡು ತಿಂಗಳಿಂದ ರೈತರ ನಡೆಸುತ್ತಿರುವ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸರ್ಕಾರ ಕೆಲವು ಒತ್ತಡಗಳಲ್ಲಿ ಸಿಲುಕಿ ಹಗ್ಗಜಗ್ಗಾಟದಲ್ಲಿ ತೊಡಗಿದೆ’ ಎಂದರು.

‘ಕಾರ್ಖಾನೆಗಳು ₨2500 ಮತ್ತು ಸರ್ಕಾರ ಪ್ರೋತ್ಸಾಹದ ಧನವಾಗಿ ₨ 1000 ಬೆಂಬಲ ಬೆಲೆ ನೀಡುವ ಮೂಲಕ ಕಬ್ಬು ಬೆಳೆ ರೈತರನ್ನು ಸಂಕಷ್ಟವನ್ನು ದೂರ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಬ್ಬು ಅಧಿನಿಯಮ 2013ರ ಎಸ್ಎಪಿ ಕಾಯ್ದೆಯನ್ನು ಮರುಪರಿಶೀಲನೆ ಮಾಡಿ ತಿದ್ದುಪಡೆ ಮಾಡಬೇಕಾಗಿದೆ. ಕಾರ್ಖಾನೆ ಮಾಲೀಕರು ಮತ್ತು ತಜ್ಞರು ಹೇಳುವ ಪ್ರಕಾರ ಪ್ರತಿ ಟನ್ ಕಬ್ಬಿಗೆ ₨ 4,500 ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಯಾಗುತ್ತಿದೆ. 14 ತಿಂಗಳ ಕಾಲ ಸಾಲ ಮಾಡಿ ಕಬ್ಬು ಬೆಳೆಯುವ ರೈತನಿಗೆ ಪ್ರೋತ್ಸಾಹ ಧನ ನೀಡಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ’ ಎಂದರು.

ಬ್ಲ್ಯಾಕ್ ಮೇಲ್‌: ‘ಕೆಲವೊಂದು ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₨ 2000 ಕ್ಕಿಂತ ಹೆಚ್ಚಿಗೆ ಹಣವನ್ನು ರೈತರಿಗೆ ಕೊಡಲಾಗುವುದಿಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕುವ ಮೂಲಕ ಬ್ಲ್ಯಾಕ್ ಮೇಲ್ ತಂತ್ರ  ಅನುಸರಿಸುತ್ತಿರುವುದು ಖಂಡನೀಯ’ ಎಂದರು.

‘ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಳ್ಳುವುದು ಎಷ್ಟು ಸೂಕ್ತ. ಸರ್ಕಾರಕ್ಕೆ ಸವಾಲು ಹಾಕುವ ಹೇಳಿಕೆಗಳನ್ನು ಕೊಡುತ್ತಿರುವ ಕಾರ್ಖಾನೆಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಪಡಿಸಿದರು.
‘ಬಿಜೆಪಿ ಶಾಸಕ ಉಮೇಶ ಕತ್ತಿ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಹೇಳಿಕೆ ನೀಡುತ್ತಿರುವುದು ಅಷ್ಟೊಂದು ಸಮಂಜಸವಲ್ಲ.  ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಪ್ರತಿಭಟಿಸುವ ಸಂದರ್ಭದಲ್ಲಿ ಈ ರೀತಿ ರಾಜಕಾರಣ ಮಾಡುವುದು ಅವರಿಗೆ ರೂಢಿಯಾಗಿದೆ’ ಎಂದರು.

‘ಕಾರ್ಖಾನೆಯವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೈತರ ಧ್ವನಿಯನ್ನು ಅಡಗಿಸುತ್ತಿದ್ದಾರೆ. ರೈತರನ್ನು ಕಡೆಗಣಿಸಿದರೆ ಕಾರ್ಖಾನೆಗಳು ನಷ್ಟ ಅನುಭವಿಸಬೇಕಾಗುತ್ತದೆ’ ಎಂದರು.

ಆತ್ಮಹತ್ಯೆ ಬೇಡ: ‘ಸಾಲಕ್ಕೆ ಅಂಜಿ ರೈತರು ಆತ್ಮಹತ್ಯೆ ಮಾಡಿಕೊಳ್ಳ­ಬಾರದು, ರೈತರು ಆತ್ಮಹತ್ಯೆ ಮಾಡಿಕೊಳ್ಳದೇ ಆತ್ಮವಿಶ್ವಾಸದಿಂದ ಇರಬೇಕು’ ಎಂದು ತಿಳಿಸಿದರು. 

‘ಕೃಷಿ ಬೆಲೆ ಆಯೋಗವನ್ನು ಕೂಡಲೇ ಜಾರಿಗೆ ತರಬೇಕು’ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಸಿದರು. ರೈತ ಮುಖಂಡ ಸುಭಾಸ ಶಿರಬೂರು, ಶಶಿಕಾಂತ ಬಾಳಿಕಾಯಿ, ಮಲ್ಲಪ್ಪ ಕೋಮಾರ, ಹನಮಂತ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT