ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಆಗ್ರಹ

Last Updated 20 ಡಿಸೆಂಬರ್ 2012, 7:53 IST
ಅಕ್ಷರ ಗಾತ್ರ

ಮುಂಡರಗಿ: ಮುಂಡರಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಲ್ಲಿ ಮಹಿಳೆಯರಿಗೆ ಸುಸಜ್ಜಿತ ವಾದ ಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿ ತಾಲ್ಲೂಕಿನ ಹಿರೇ ವಡ್ಡಟ್ಟಿ, ಸಿಂಗಟರಾಯನಕೆರಿ ಹಾಗೂ ಮತ್ತಿತರ ಗ್ರಾಮಗಳ ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಹಾಗೂ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ಆರ್ ಕಾಂಗ್ರೆಸ್ ರಾಜ್ಯ ವಕ್ತಾರ ವೈ.ಎನ್.ಗೌಡರ, `ದೇಶಕ್ಕೆ ಸ್ವಾತಂತ್ರ ಬಂದು ಆರು ದಶಕಗಳು ಕಳೆದರೂ ಮಹಿಳೆಯರಿಗೆ ಅಗತ್ಯವಾಗಿರುವ ಶೌಚಾಲಯ ನಿರ್ಮಿಸದೆ ಎಲ್ಲ ಸರಕಾರಗಳು ಅವರಿಗೆ ಅನ್ಯಾಯ ಎಸಗಿವೆ. ಗ್ರಾಮೀಣ ಭಾಗಗಳಲ್ಲಿ ಈಗಲೂ ಮಹಿಳೆಯರು ಗ್ರಾಮದ ಹೊರವಲಯದ ಬಯಲನ್ನೆ ಶೌಚಾಲಯಗಳನ್ನಾಗಿ ಮಾಡಿ ಕೊಂಡಿರುವುದು ಸ್ವತಂತ್ರ ಭಾರತದ ದೌರ್ಭಾಗ್ಯ' ಎಂದು ವಿಷಾದಿಸಿದರು.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬಹಿರ್ದೆಸೆಗಾಗಿ ಮಹಿಳೆಯರು ರಾತ್ರಿ ಯಾಗುವುದನ್ನೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಿ ಬಹಿರ್ದೆಸೆಗೆ ತೆರಳಿದಾಗ ಹಲವಾರು ಮಹಿಳೆಯರು ಹಾವು, ಚೇಳುಗಳಿಂದ ಕಚ್ಚಿಸಿಕೊಂಡಿದ್ದು, ಅತ್ಯಾ ಚಾರ ಗಳಂತಹ ಅಮಾನವೀಯ ಪ್ರಕರಣಗಳು ಸಂಭವಿಸಿವೆ. ಇಂತಹ ಪರಿಸ್ಥಿತಿಯ ನಡುವೆಯೂ ಅನ್ಯದಾರಿ ಕಾಣದ ಮಹಿಳೆಯರು ಅನಿವಾರ್ಯ ವಾಗಿ ಶೌಚಾಲಯಕ್ಕೆ ಬಯಲನ್ನೆ ಆಶ್ರಯಿಸ ಬೇಕಾಗಿದ್ದು, ಸರಕಾರ ತಕ್ಷಣ ಎಲ್ಲ ಗ್ರಾಮಗಳಲ್ಲಿ ಮಹಿಳಾ ಸಮುದಾಯ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳು ಅರ್ಹ ಫಲಾನುಭವಿಗಳಿಗೆ ಕೇವಲ ಏಳೆಂಟು ಸಾವಿರ ರೂಪಾಯಿ ನೀಡುತ್ತಿವೆ. ಸಿಮೆಂಟ್, ಉಸುಕು, ಕಡಿ, ಕಾರ್ಮಿಕರ ಕೂಲಿ ಮೊದಲಾದವುಗಳ ಬೆಲೆ ಗಗನಕ್ಕೇರಿದ್ದು, ಸರಕಾರ ನೀಡುವ ಏಳೆಂಟು ಸಾವಿರ ರೂಪಾಯಿಯಲ್ಲಿ ಒಂದು ಸಣ್ಣ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಳ್ಳುವುದು ಹೇಗೆ? ಎಂದು ಅವರು ಪ್ರಶ್ನಿಸಿದರು. ಶೌಚಾಲಯ ನಿರ್ಮಿಸಿಕೊಳ್ಳಲು ಸರಕಾರ ಕನಿಷ್ಟ 50ಸಾವಿರ ರೂಪಾಯಿ ಹಣ ನೀಡಬೇಕು ಮತ್ತು ಸದಾ ಕಾಲ ವಿದ್ಯುತ್ ಮತ್ತು ನೀರು ಪೂರೈಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT