ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಾನಾ ಕಣ್ಣೀರು; ಶಾರೂಖ್ ನಂಬಿಕೆ...

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಶಾರೂಖ್ ಖಾನ್ ಈ ಬಾರಿಯ ಐಪಿಎಲ್ ಆರಂಭದಿಂದಲೇ ನಂಬಿಕೆಯ ಮಾತನಾಡುತ್ತಾ ಬಂದಿದ್ದರು.
`ಇಕ್ ಬ್ರಾಹ್ಮಣ್ ನೇ ಕಹಾ ಹೈ ಇಸ್ ಸಾಲ್ ಅಚ್ಛಾ ಹೈ; ದಿಲ್ ಕೊ ಖುಷ್ ರಖನೇಕಾ ಗಾಲಿಬ್ ಏ ಖಯಾಲ್ ಅಚ್ಛಾ ಹೈ~ ಎಂದು ಖ್ಯಾತ ಉರ್ದು ಶಾಯರ್ ಮಿರ್ಜಾ ಗಾಲಿಬ್ ಬರೆದಿಟ್ಟ ಸಾಲೇ ಶಾರೂಖ್‌ಖಾನ್ ಮನದಲ್ಲಿ ಒಳ್ಳೆಯ ಫಲಿತಾಂಶದ ಆಶಯ ಬೇರುಬಿಟ್ಟು ಗಟ್ಟಿಯಾಗುವಂತೆ ಮಾಡಿದ್ದು.

`ಒಬ್ಬ ಬ್ರಾಹ್ಮಣ ಹೇಳಿದ್ದಾನೆ ಈ ವರ್ಷ ಚೆನ್ನಾಗಿದೆ ಎಂದು; ಹೃದಯವನ್ನು ಸಂತೋಷವಾಗಿ ಇಟ್ಟುಕೊಳ್ಳಲು ಗಾಲಿಬ್ ಈ ರೀತಿಯ ಯೋಚನೆ ಚೆನ್ನಾಗಿದೆ~ ಎನ್ನುವುದು ಗಾಲಿಬ್‌ನ ಗಜಲ್ ಸಾಲಿನ ಅರ್ಥ. ಇದೇ ರೀತಿಯ ನಂಬಿಕೆಯೊಂದನ್ನು ಬೆಳೆಸಿಕೊಂಡಿದ್ದ ಖಾನ್ `ಈ ವರ್ಷ ಚೆನ್ನಾಗಿದೆ~ ಎಂದು ಹೇಳುತ್ತಲೇ ಬಂದಿದ್ದರು. ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಮಾತ್ರವಲ್ಲ ಜಾಹೀರಾತುಗಳಲ್ಲಿಯೂ ಈ ರೀತಿ ಹೇಳಿದ್ದು ಜನರ ಮನದಲ್ಲಿ ಅಚ್ಚಾಗಿದೆ.

ಆದ್ದರಿಂದಲೇ ಈಗ ಅವರ ಅಭಿಮಾನಿಗಳು `ಹೌದು; ಶಾರೂಖ್ ನಂಬಿಕೆ ನಿಜವಾಯಿತು~ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. `ಫೌಜಿ~ ಸೀರಿಯಲ್ ಮಾಡುತ್ತಿದ್ದಾಗಿನಿಂದಲೂ ಶಾರೂಖ್ ತಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ನಂಬಿದವರು. ಅವರ ಇಂಥ ಆಶಯ ಹುಸಿಯಾಗಲಿಲ್ಲ. ಬಾಲಿವುಡ್‌ನಲ್ಲಿ ಎತ್ತರದಲ್ಲಿ ನಿಂತ ನಟರಾಗಿ ಬೆಳೆದರು.

ಐಪಿಎಲ್ ತಂಡವಾದ ಕೋಲ್ಕತ್ತ ನೈಟ್‌ರೈಡರ್ಸ್ ಖರೀದಿ ಮಾಡಿದಾಗಲೂ ಇದೇ ಭರವಸೆ ಅವರಲ್ಲಿತ್ತು. ಮೊದಲ ಅವತರಣಿಕೆಯಲ್ಲಿಯೇ ಭಾರಿ ಪ್ರಾಯೋಜಕತ್ವ ಆದಾಯ ಹೊಂದಿದ ತಂಡ ಎನಿಸಿಕೊಂಡಿತು `ಕೆಕೆಆರ್~. ಆದರೆ ಮೊದಲ ನಾಲ್ಕು ಅವತರಣಿಕೆಗಳಲ್ಲಿ ತಂಡದ ಪ್ರದರ್ಶನ ಉನ್ನತ ಮಟ್ಟವನ್ನು ಮುಟ್ಟಲಿಲ್ಲ. ಆದರೆ ಶಾರೂಖ್ ಕೈಚೆಲ್ಲಲಿಲ್ಲ. ಗೌತಮ್ ಗಂಭೀರ್ ಅವರನ್ನು ನಾಯಕರನ್ನಾಗಿ ಮಾಡಿದರು. ಮತ್ತೆ ನಂಬಿಕೆಯೊಂದಿಗೆ ಕಾಯ್ದರು. ಈ ಬಾರಿ ಉತ್ತಮ ಫಲವೇ ಸಿಕ್ಕಿತು.

`ಚೀಪಾಕ್~ ಅಂಗಳದಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎರಡು ಎಸೆತಗಳು ಬಾಕಿ ಇರುವಂತೆಯೇ ನೈಟ್ ರೈಡರ್ಸ್ ಐದು ವಿಕೆಟ್‌ಗಳ ಅಂತರದ ಅಚ್ಚರಿಯ ವಿಜಯ ಸಾಧಿಸಿತು. ಮಹೇಂದ್ರ ಸಿಂಗ್ ದೋನಿ ಅವರ `ಹ್ಯಾಟ್ರಿಕ್~ ಪ್ರಶಸ್ತಿಯ ಕನಸನ್ನು ಗಂಭೀರ್ ನೇತೃತ್ವದ ಕೆಕೆಆರ್ ಭಂಗಗೊಳಿಸಿತು. ಆದರೆ `ಮಹಿ~ ಪಡೆ ಫೈನಲ್‌ನಲ್ಲಿ ಮುಂದಿಟ್ಟಿದ್ದ ಗುರಿ ಅಸಾಧ್ಯ ಎನ್ನುವ ಅನುಮಾನ ಕಾಡಿತ್ತು. ಆದ್ದರಿಂದಲೇ ಶಾರೂಖ್ ತಮ್ಮ ತಂಡವು ಬ್ಯಾಟಿಂಗ್ ಮಾಡುವಾಗ ತುದಿಗಾಲಲ್ಲಿಯೇ ನಿಂತು ಚಡಪಡಿಸಿದ್ದರು.

ಕೊನೆಯ ಹನ್ನೆರಡು ಓವರುಗಳಲ್ಲಿ ಇಪ್ಪತ್ತು ರನ್‌ಗಳನ್ನು ಗಳಿಸುವ ಸಂಕಷ್ಟದ ಸ್ಥಿತಿಯಲ್ಲಿ ನೈಟ್‌ರೈಡರ್ಸ್ ಸಿಲುಕಿದಾಗ ಒತ್ತಡ ಇನ್ನಷ್ಟು ಹೆಚ್ಚಿತು. ಆಗ ಖಾನ್ ಪುತ್ರಿ ಸುಹಾನಾ ತನ್ನ ತಂದೆಯನ್ನು ಬಿಗಿದು ಅಪ್ಪಿಕೊಂಡು ಕಣ್ಣೀರು ಸುರಿಸಿದಳು. ಆಗ ಹಣೆಗೆ ಮುತ್ತಿಟ್ಟ ಖಾನ್ ತಮ್ಮ ತಂಡವೇ ಗೆಲ್ಲುತ್ತದೆಂದು ಸಮಾಧಾನ ಪಡಿಸಿದ್ದರು.

ತಂದೆಯ ಪ್ರತಿಯೊಂದು ಯಶಸ್ಸಿಗೂ ಸಂತಸ ಪಡುವ ಸುಹಾನಾ ಕಳೆದು ನಾಲ್ಕು ಐಪಿಎಲ್ ನಡೆದಾಗ ಇಷ್ಟೊಂದು ಭಾವುಕಳಾಗಿರಲಿಲ್ಲ. ಈಗ ಸ್ವಲ್ಪ ತಿಳಿವಳಿಕೆ ಬಂದಿದ್ದು, ಕ್ರಿಕೆಟ್ ಆಟವನ್ನು ಕೂಡ ಅರ್ಥ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾಳೆ. ಆದ್ದರಿಂದಲೇ ತಮ್ಮ ತಂದೆ ಮಾಲೀಕತ್ವದ ಕೆಕೆಆರ್ ಗೆಲ್ಲಬೇಕೆಂದು ಅವಳು ಬಯಸಿದ್ದು.

ನೈಟ್‌ರೈಡರ್ಸ್ ಗೆಲ್ಲಬೇಕೆಂದು ಬಯಸಿ ಕಣ್ಣೀರಿಟ್ಟ ಅವಳ ಮನಕ್ಕೆ ಕೊನೆಗೂ ತಂಪೆರೆದಂತಾಯಿತು. ಜಾಕ್ ಕಾಲಿಸ್ ಅದ್ಭುತ ಆಟದ ಫಲವಾಗಿ ಗುರಿಯ ಸಮೀಪಕ್ಕೆ ಸರಿದಿದ್ದ ರೈಡರ್ಸ್ ತಂಡವನ್ನು ಶಕೀಬ್ ಅಲ್ ಹಸನ್ ಹಾಗೂ ಮನೋಜ್ ತಿವಾರಿ ಗೆಲುವಿನ ದಡ ಸೇರಿಸಿದರು. ಆದ್ದರಿಂದಲೇ ಸುಹಾನಾ ಪಂದ್ಯಮುಗಿಯುತ್ತಿದ್ದಂತೆಯೇ ಅಪ್ಪನೊಂದಿಗೆ ಅಂಗಳಕ್ಕೆ ಬಂದು ಕಾಲಿಸ್ ಕೈಗೆ ಮುತ್ತಿಟ್ಟಳು. ಶಕೀಬ್ ಹಾಗೂ ತಿವಾರಿ ಅವರನ್ನು ಮನದುಂಬಿ ಅಭಿನಂದಿಸಿ ಮುದ್ದಾಗಿ ನಕ್ಕಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT