ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಫಿ ಮಹಿಳೆಯರು

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

 ಸೂಫಿ ಮಹಿಳೆಯರು
ಲೇ: ಫಕೀರ್ ಮುಹಮ್ಮದ್ ಕಟ್ಪಾಡಿ, ಪು: 96;   ಬೆ: ರೂ.60



ದೇಶ ವಿಭಜನೆಯ ಕಥೆಗಳು
, ಮೂ: ಸಾದತ್ ಹಸನ್ ಮಂಟೋ;  ಅ: ಫಕೀರ್ ಮುಹಮ್ಮದ್ ಕಟ್ಪಾಡಿ, ಪು:108;      ಬೆ: ರೂ.70

Translation is not a matter of words only: it is a matter of making intelligible a whole culture.
-Anthony Burgess

ಅನುವಾದ ಎನ್ನುವುದು ಸಾಂಸ್ಕೃತಿಕ ಅನುಸಂಧಾನದ ಪ್ರಯತ್ನ. ಈ ದೃಷ್ಟಿಯಲ್ಲಿ ನೋಡುವುದಾದರೆ ಫಕೀರ್ ಮಹಮ್ಮದ್ ಕಟ್ಪಾಡಿಯವರ ‘ಸಾದತ್ ಹಸನ್ ಮಂಟೋ: ದೇಶ ವಿಭಜನೆಯ ಕಥೆಗಳು’ ಮತ್ತು ‘ಸೂಫಿ ಮಹಿಳೆಯರು’ ಎಂಬ ಎರಡೂ ಕೃತಿಗಳೂ ಒಂದು ಬಗೆಯಲ್ಲಿ ಅನುವಾದವೇ. ‘ದೇಶ ವಿಭಜನೆಯ ಕಥೆಗಳು’ ಅಕ್ಷರಾರ್ಥದಲ್ಲಿ ಅನುವಾದ ಕೃತಿಯಾದರೆ ‘ಸೂಫಿ ಮಹಿಳೆಯರು’ ಒಂದು ಸಾಂಸ್ಕೃತಿಕ ಅನುವಾದದ ಪ್ರಯತ್ನ.

ಮಂಟೋ ಕಥೆಗಳ ಅನುವಾದಕ್ಕೊಂದು ಕುತೂಹಲಕಾರಿ ಇತಿಹಾಸವಿದೆ. 1946ರಿಂದ 1950ರ ನಡುವಣ ಅವಧಿಯನ್ನು ಸ್ವತಃ ಸಾದತ್ ಹಸನ್ ಮಂಟೋ ‘ಉಸಿರುಗಟ್ಟಿಸುವ ಕಾಲ’ ಎಂದು ಕರೆದಿದ್ದಾರೆ. ಈ ಅವಧಿಯಲ್ಲಿ ಮಂಟೋ ಬರೆದ ಕಥೆಗಳು ಆ ಕಾಲದಲ್ಲೇ ಪ್ರಸಿದ್ಧವಾಗಿದ್ದವು. ಈ ಕಥೆಗಳು ಮತ್ತೆ ಭಾರತೀಯ ಸಂದರ್ಭದಲ್ಲಿ ಚರ್ಚೆಗೆ ಬಂದದ್ದು 1992ರ ಬಾಬರಿ ಮಸೀದಿ ಉರುಳಿದ ಘಟನೆಯ ನಂತರ. ಇದಾದ ಐದೇ ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವವನ್ನು ಆಚರಿಸುವ ಹೊತ್ತಿಗೆ ವಿಭಜನೆಯ ಕರಾಳ ನೆನಪುಗಳೂ ಒಟ್ಟೊಟ್ಟಿಗೆ ಚರ್ಚೆಯಾದವು. ಹಾಗೆ ನೋಡಿದರೆ ದಕ್ಷಿಣ ಭಾರತದ ಭಾಷೆಗಳ ಮುಖ್ಯವಾಹಿನಿ ಚರ್ಚೆಗಳಿಗೆ ಮಂಟೋ ಆಗಮಿಸಿದ್ದೇ ಈ ದಿನಗಳಲ್ಲಿ.

ದಕ್ಷಿಣ ಹೆಚ್ಚಿನ ಎಲ್ಲಾ ಭಾಷೆಗಳಿಗೆ ಮಂಟೋ ಕಥೆಗಳು ಬಂದದ್ದು ಇಂಗ್ಲಿಷ್‌ನ ಮೂಲಕ. ಫಕೀರ್ ಮಹಮ್ಮದ್ ಕಟ್ಪಾಡಿಯವರು ಅನುವಾದಕ್ಕೆ ಮೂಲ ಉರ್ದು ಕಥೆಗಳನ್ನು ಬಳಸಿಕೊಂಡಿದ್ದಾರೋ ಅಥವಾ ಇಂಗ್ಲಿಷ್ ಅನುವಾದಗಳನ್ನು ಬಳಸಿಕೊಂಡಿದ್ದಾರೋ ಎಂಬುದರ ಕುರಿತು ಪುಸ್ತಕದಲ್ಲೆಲ್ಲೂ ಸ್ಪಷ್ಟ ಸೂಚನೆಗಳಿಲ್ಲ. ಮಂಟೋನ ಕಥೆಗಳನ್ನು ಹಲವರು ಅನುವಾದಿಸಿದ್ದಾರೆ. ಖಾಲಿದ್ ಹಸನ್, ಖುಷ್‌ವಂತ್ ಸಿಂಗ್, ಅಲೋಕ್ ಭಲ್ಲಾ ಮುಂತಾದವರ ಅನುವಾದಗಳು ಪುಸ್ತಕಗಳಲ್ಲಿ ಸಿಗುತ್ತವೆ. ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಅನುವಾದಗಳೂ ಇವೆ. ಖಾಲಿದ್ ಹಸನ್ ಅವರ ಅನುವಾದಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳ ಕುರಿತು ದೊಡ್ಡ ಚರ್ಚೆಯೇ ನಡೆದಿದೆ. ಅಲೋಕ್ ಭಲ್ಲಾ ಅವರ ಅನುವಾದಗಳು ಮೂಲಕ್ಕೆ ಹೆಚ್ಚು ಹತ್ತಿರ ಎನ್ನಲಾಗುತ್ತದೆ. ಖಾಲಿದ್ ಹಸನ್ ಅವರ ಅನುವಾದವನ್ನು ಹೋಲುವ ‘ಮಹಾ ವಿಭಜನೆ’ ಈ ಪುಸ್ತಕದಲ್ಲಿರುವಂತೆಯೇ ಖುಷ್‌ವಂತ್ ಸಿಂಗ್ ಅವರ ಅನುವಾದವನ್ನು ಹೋಲುವ ‘ತೋಬಾ ತೇಕ್ ಸಿಂಗ್’ ಕೂಡಾ ಈ ಸಂಕಲನದಲ್ಲಿ ಇದೆ. ಹಾಗೆಯೇ ಅಲೋಕ್ ಭಲ್ಲಾ ಅವರ ಅನುವಾದವನ್ನು ಹೋಲುವ ‘ತಣ್ಣಗಿನ ಮಾಂಸ’ ಕೂಡಾ ಇಲ್ಲಿದೆ.

ಅನುವಾದಕ್ಕೆ ಭಿನ್ನ ಮೂಲಗಳನ್ನು ಫಕೀರ್ ಬಳಸಿಕೊಂಡಿದ್ದಾರೆಂಬಂತೆ ಕಾಣಿಸುತ್ತದೆ. ಇದೊಂದು ರೀತಿಯಲ್ಲಿ ಒಳ್ಳೆಯ ಪ್ರಯತ್ನವೇ. ಫಕೀರ್ ತಮ್ಮ ಕಥೆಗಳನ್ನು ಕನ್ನಡ ಅನುವಾದ ಎಂದು ಹೇಳಿಕೊಳ್ಳುವುದರ ಬದಲಿಗೆ ಕನ್ನಡ


ರೂಪಾಂತರ ಎಂದು ಕರೆದಿದ್ದಾರೆ. ಎಲ್ಲಾ ಅನುವಾದಗಳೂ ಒಂದು ಬಗೆಯ ಸಾಂಸ್ಕೃತಿಕ ಅನುಸಂಧಾನವಾಗಿರುವುದರಿಂದ ರೂಪಾಂತರ ಎಂದು ಹೇಳಿಕೊಂಡಿರುವುದು ಫಕೀರ್ ಅವರ ವಿನಯಕ್ಕೆ ಸಾಕ್ಷ್ಯ ಒದಗಿಸುತ್ತದೆ. ಮಂಟೋನ ಕಥೆಗಳು ಬಿಚ್ಚಿಡುವ ವಿಭಜನೆಯ ಕ್ರೌರ್ಯ ಅದು ಸಂಭವಿಸಿದ ಅರವತ್ತು ವರ್ಷಗಳ ನಂತರವೂ ನಮಗೆ ಅನುಭವಕ್ಕೆ ಬರುವಂತೆ ನೋಡಿಕೊಳ್ಳುವಲ್ಲಿ ಫಕೀರ್ ಯಶಸ್ವಿಯಾಗಿದ್ದಾರೆ. ‘ಮಹಾವಿಭಜನೆ’ಯಂಥ ಕಥೆಗೆ ಖಾಲಿದ್ ಹಸನ್‌ರಂಥ ‘ಪೊಲಿಟಿಕಲೀ ಕರೆಕ್ಟ್’ ಅನುವಾದದ ಬದಲಿಗೆ ಹೆಚ್ಚು ಸ್ವತಂತ್ರ ಮತ್ತು ಮೂಲಕ್ಕೆ ಹತ್ತಿರವಾಗಿರುವ ಅನುವಾದವನ್ನು ಬಳಸಿಕೊಂಡಿದ್ದರೆ ಒಳ್ಳೆಯದಿತ್ತು. ಜೊತೆಗೆ ಮಂಟೋ ಕಥೆಗಳ ಅನುವಾದದ ರಾಜಕಾರಣದ ಕುರಿತ ಚರ್ಚೆಯನ್ನೂ ತಮ್ಮ ಪ್ರಸ್ತಾವನೆಗೆ ಸೇರಿಸಿಕೊಂಡಿದ್ದರೆ ಪುಸ್ತಕ ಇನ್ನಷ್ಟು ಪ್ರಾತಿನಿಧಿಕವಾಗಬಹುದಿತ್ತು.

‘ಸೂಫಿ ಮಹಿಳೆಯರು’ ಕನ್ನಡಕ್ಕೆ ಹೊಸತೊಂದು ಜಗತ್ತನ್ನು ಪರಿಚಯಿಸಿಕೊಡುವ ಕೃತಿ. ಅಕ್ಕನ ಅನುಭಾವವನ್ನೇ ಹೋಲುವ ರಾಬಿಯಾ ಎಂಬ ಸೂಫಿ ಸಂತ ಮಹಿಳೆಯ ಬದುಕು ಇಲ್ಲಿ ವಿವರವಾಗಿ ಬಂದಿದೆ. ಹಾಗೆಯೇ ಬೀಬಿ ನಫೀಸಾರ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಹಳಷ್ಟು ವಿವರಗಳೊಂದಿಗೆ ಪ್ರಕಟವಾಗಿದೆ. ಕಾಶ್ಮೀರದ ಕವಯತ್ರಿ ಹಬಾ ಖಾತೂನ್ ಕುರಿತಂತೆಯೂ ಸಾಕಷ್ಟು ವಿವರಗಳನ್ನು ಫಕೀರ್ ಈ ಪುಸ್ತಕದಲ್ಲಿ ಒದಗಿಸಿದ್ದಾರೆ.

ದೆಹಲಿ ಮತ್ತು ಕರ್ನಾಟಕದ ಕೆಲವು ಸೂಫಿ ಮಹಿಳೆಯರ ಬಗೆಗೆ ಬಹಳ ಕಡಿಮೆ ಎನ್ನುವಷ್ಟು ವಿವರಗಳಿವೆ. ಸೂಫಿ ಮಹಿಳೆಯರನ್ನು ಪರಿಚಯಿಸುವ ಕೆಲಸವನ್ನು ಈ ಕೃತಿ ಯಶಸ್ವಿಯಾಗಿ ಮಾಡಿದೆ. ಅನುಭಾವವನ್ನು ಹೆಣ್ಣು ಗ್ರಹಿಸುವ ವಿಧಾನವನ್ನು ಸೂಫಿ ತಾತ್ವಿಕತೆಯ ಪಾತಳಿಯಲ್ಲಿಟ್ಟು ನೋಡಲು ಫಕೀರ್ ಅವರಿಗೆ ಸಾಧ್ಯವಾಗಿಲ್ಲ. ರಾಬಿಯಾ ಅವರ ಕುರಿತ ಬರಹದಲ್ಲಿ ಈ ನಿಟ್ಟಿನಲ್ಲಿ ಲೇಖಕರು ನಡೆಸಿರುವ ಸಣ್ಣ ಪ್ರಯತ್ನಗಳ ಸೂಚನೆ ಸಿಗುತ್ತದೆಯಾದರೂ ಅದು ಪೂರ್ಣಗೊಂಡಿಲ್ಲ. ಪುಸ್ತಕದ ಸ್ವರೂಪ ಪರಿಚಯಾತ್ಮಕವಾಗಿಯೇ ಇರಬೇಕೆಂಬ ಲೇಖಕರ ನಿಲುವು ಕೂಡಾ ಇದಕ್ಕೆ ಕಾರಣವಾಗಿರಬಹುದು. ಅದೇನೇ ಇದ್ದರು ಫಕೀರ್ ಅವರಿಂದ ಈ ವಿಷಯದಲ್ಲಿ ಇನ್ನಷ್ಟು ವಿವರವಾದ ಪರಿಚಾಯತ್ಮಕತೆಯ ಹಂಗು ತೊರೆದ ಮತ್ತೊಂದು ಕೃತಿಯನ್ನು ಕನ್ನಡದ ಓದುಗರು ನಿರೀಕ್ಷಿಸುತ್ತಾರೆಂಬುದು ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT